ADVERTISEMENT

ರಾಜ್ಯಮಟ್ಟದ ಪ್ರಶಸ್ತಿ: ಜಿಲ್ಲಾ ಸಾಧಕರ ಹೆಸರು ಶಿಫಾರಸು

ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 15:29 IST
Last Updated 25 ಜುಲೈ 2024, 15:29 IST
ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡುವ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಜಿಲ್ಲೆಯ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಜೈಭೀಮ್ ಬಿಸಿನೆಸ್ ಫೋರಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸದಸ್ಯರ ಸಭೆ ನಡೆಯಿತು
ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡುವ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ಜಿಲ್ಲೆಯ ಸಾಧಕರನ್ನು ಆಯ್ಕೆ ಮಾಡುವ ಸಂಬಂಧ ಜೈಭೀಮ್ ಬಿಸಿನೆಸ್ ಫೋರಂ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಸದಸ್ಯರ ಸಭೆ ನಡೆಯಿತು   

ಚಾಮರಾಜನಗರ: ರಾಯಚೂರಿನಲ್ಲಿ ನಡೆಯುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡುವ ರಾಜ್ಯಮಟ್ಟದ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಸಾಧಕರನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡಲಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಗುರುರಾಜು ಯರಗನಹಳ್ಳಿ ತಿಳಿಸಿದರು.

ಪಟ್ಟಣದ ಜೈಭೀಮ್ ಬಿಸಿನೆಸ್ ಫೋರಂ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸದಸ್ಯರ ಸಭೆಯಲ್ಲಿ ಮಾತನಾಡಿ, ದಲಿತ ಸಾಹಿತ್ಯ ಪರಿಷತ್ತು ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ದಲಿತ ಪ್ರತಿಭಾನ್ವಿತರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ. ಹಾಗೆಯೇ ಜಿಲ್ಲೆಗಳಿಂದ ಸಾಧರನ್ನು ಗುರುತಿಸಿ, ಸಾಧಕರ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನ ಸಾಧನೆಗೆ ನೀಡುವ ‘ಗೌರವ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಸಂಸ್ಕೃತಿ ಚಿಂತಕರಾದ ಸೋಮಶೇಖರ ಬಿಸಲವಾಡಿ, ದಲಿತ ಸಮುದಾಯದ ಏಳಿಗೆಗಾಗಿ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಕೊಡುವ ‘ದಲಿತ ಚೇತನ ಪ್ರಶಸ್ತಿ’ಗೆ ಹಿರಿಯ ದಲಿತ ಮುಖಂಡ ವೆಂಕಟರಮಣಸ್ವಾಮಿ(ಪಾಪು), ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡುವ ‘ದಲಿತ ಸಿರಿ ಪ್ರಶಸ್ತಿ’ಗೆ ಡಾ.ಕೃಷ್ಣಮೂರ್ತಿ ಚಮರಂ, ‘ಬೃಹದ್ದೇಶಿ ಪ್ರಶಸ್ತಿ’ಗೆ ಡೊಳ್ಳುಕುಣಿತ ಕಲೆಯ ಯುವಪ್ರತಿಭೆ ಕೃಷ್ಣಮೂರ್ತಿ ಗಣಗನೂರ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.

ADVERTISEMENT

ಚಿತ್ರಕಲೆ ಕ್ಷೇತ್ರದಲ್ಲಿ ನೀಡುವ ‘ದಲಿತ ಕಲಾ ಸಿರಿ ಪ್ರಶಸ್ತಿ’ಗೆ ಎಚ್.ಮಹಾದೇವ ಹನೂರು, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೊಡಮಾಡುವ ‘ಸಾವಿತ್ರಿಬಾ ಫುಲೆ’ ಪ್ರಶಸ್ತಿಗೆ ಮಹಿಳೆಯರ ಸಬಲೀಕರಣಕ್ಕೆ ದುಡಿಯುತ್ತಿರುವ ಶಿವಮ್ಮ ಸತ್ಯೇಗಾಲ ಅವರನ್ನು ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿಸಿದರು.

ಭಾರತೀಯ ಹಾಗೂ ಕರ್ನಾಟಕ ಆಡಳಿತ ಸೇವೆ, ವೈದ್ಯಕೀಯ ಸೇವೆ, ಉನ್ನತ ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ವಾಣಿಜ್ಯ ತೆರಿಗೆ ಅಧಿಕಾರಿ ನಾಗರಾಜು ಗುಂಡೇಗಾಲ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಕೃಷ್ಣಯ್ಯ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಮ್ಮೇಳನದಲ್ಲಿ ನಡೆಯುವ ಕವಿಗೋಷ್ಠಿಗೆ ಜಿಲ್ಲೆಯಿಂದ ಕವಿಗಳಾದ ಆ.ಸಿ.ಮ (ಮಣಿಕಂಠ) ಮತ್ತು ಮಹದೇವ ನಿಟ್ರೆ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ವರ್ಷ ನಡೆಯುವ 12ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಡೆಸುವ ಹಕ್ಕೋತ್ತಾಯವನ್ನು ರಾಜ್ಯ ಘಟಕಕ್ಕೆ ಮಂಡಿಸಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಭಂತೇಜಿ, ಮುಳ್ಳೂರು ಶಿವಮಲ್ಲು, ಸೋಮಶೇಖರ ಬಿಸಲವಾಡಿ, ಸುಭಾಷ್ ಮಾಡ್ರಳ್ಳಿ, ಡಾ.ಕುಮಾರ ಚಿಕ್ಕಹೊಳೆ, ಬಸವಣ್ಣ ಮೂಕಳ್ಳಿ, ಡಾ.ಮಹೇಶ್ ಕೋಡಿ ಉಗನೆ, ಡಾ.ಶಿವರಾಜು ಬೂದಿತಿಟ್ಟು, ಆ.ಸಿ.ಮ., ವಾಸು ಹೊಂಡರಬಾಳು, ಮಹೇಶ್ ಇರಸವಾಡಿ, ಅಜಯ್ ಗುಂಬಳ್ಳಿ, ಕೃಷ್ಣಮೂರ್ತಿ ಗಣಗನೂರು, ಬಳೇಪೇಟೆ ಪ್ರಕಾಶ್, ಯೋಗೇಶ್ ಕೆ ಚಿಕ್ಕತುಪ್ಪೂರು, ಕಾಳಸ್ವಾಮಿ, ಮಹದೇವ ನಿಟ್ರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.