ADVERTISEMENT

ಮೈಸೂರಿನತ್ತ ದಿಬ್ಬಣ ಹೊರಟ ‘ದಸರಾ ಬೊಂಬೆ’

ಯಳಂದೂರು ಪ್ರಾಂತ್ಯದ ಸಂಸ್ಕೃತಿ ಬಿಂಬಿಸುವ ‘ನವರಾತ್ರಿ’ ಬೊಂಬೆಗಳಿಗೆ ಬಹು ಬೇಡಿಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 5:21 IST
Last Updated 4 ಅಕ್ಟೋಬರ್ 2024, 5:21 IST
ಅಶ್ವಿನಿ ಅವರ ಕೈಚಳಕದಲ್ಲಿ ಅರಳಿದ ಬೊಂಬೆಗಳು
ಅಶ್ವಿನಿ ಅವರ ಕೈಚಳಕದಲ್ಲಿ ಅರಳಿದ ಬೊಂಬೆಗಳು   

ಯಳಂದೂರು: ದಸರಾ ಸಡಗರ ಸಂಭ್ರಮ ಹೆಚ್ಚಾಗಿದ್ದು ಅಟ್ಟ ಸೇರಿದ್ದ ರಾಜರಾಣಿ ಗೊಂಬೆಗಳು ಹೊರಬಂದಿವೆ. ಯುವರಾಜನಿಗೆ ಚಿನ್ನದ ಕಿರೀಟ, ನವ ರಾಣಿಯರಿಗೆ ಬಣ್ಣಬಣ್ಣದ ಝರಿ ಸೀರೆ, ಸರಸ್ವತಿ, ಲಕುಮಿಗೆ ರೇಷ್ಮೆ ಧಿರಿಸು ಸೇರಿದಂತೆ ಭಾರತೀಯ ಸಾಂಸ್ಕೃತಿಕ ಪರಂಪರೆ ಸಾರುವ ಗೊಂಬೆಗಳು ದಸರಾಗೆ ಪ್ರಮುಖ ಆಕರ್ಷಣೆಯಾಗಿವೆ.

ತಂತ್ರಜ್ಞಾನ, ಮೊಬೈಲ್‌, ಜಾಲತಾಣಗಳ ಅತಿಯಾದ ಬಳಕೆಯ ನಡುವೆಯೂ ತಾಲ್ಲೂಕಿನ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಗೊಂಬೆ ಕೂರಿಸುವ ಸಂಭ್ರಮ ಇನ್ನೂ ಉಳಿದುಕೊಂಡಿರುವುದು ವಿಶೇಷ. ಜತನದಿಂದ ಗೊಂಬೆಗಳನ್ನು ಕಾಪಿಟ್ಟು ಹೊಸತನದ ಚಂದ ತುಂಬುವಲ್ಲಿ ಯುವಜನತೆ ಮುಂದಾಗಿದೆ.

ದಸರಾ ಹ‌ಬ್ಬದ ಸಂಭ್ರಮ ಆಯುಧ ಪೂಜೆಗೆ ಮಿತಿಗೊಳ್ಳದೆ ಮೈಸೂರು ಜಂಬೂಸವಾರಿ ತನಕವೂ ಸಾಗುತ್ತಿದ್ದು ಮನೆ ಮಂದಿಗೆ ಹಬ್ಬದ ನೋಟ ಕಟ್ಟಿಕೊಡುವ ಬೊಂಬೆಗಳ ಚರಿತ್ರೆಗೆ ಹತ್ತಾರು ಆಯಾಮಗಳು ಬೆರೆತಿವೆ. ಮೈಸೂರು ಅರಸರ ಆಳ್ವಿಕೆಯ ಭಾಗಗಳಲ್ಲಿ ಈಗಲೂ ಗೊಂಬೆ ಕೂರಿಸುವ ಸಂಪ್ರದಾಯ ಉಳಿದಿದೆ.

ADVERTISEMENT

ಗೊಂಬೆಗಳಿಗೆ ರಂಗು ತುಂಬುವ ಅಶ್ವಿನಿ:

ಪಟ್ಟಣದ ನಿವಾಸಿ ಅಶ್ವಿನಿ ಸೋಮನಾಯಕ್ ಸಾವಿರಾರು ಬೊಂಬೆಗಳನ್ನು ಜತನದಿಂದ ಉಳಿಸಿದ್ದಾರೆ. ಬೊಂಬೆಗಳಿಗೆ ಆಕರ್ಷಕವಾಗಿ ಅಲಂಕರಿಸಿ, ಉಡುಪು ತೊಡಿಸುವಲ್ಲಿ ಅವರು ಸಿದ್ಧ ಹಸ್ತರು. ಮೈಸೂರು ಸುತ್ತಮುತ್ತ ಇವರ ಬೊಂಬೆಗಳಿಗೆ ಬಹುಬೇಡಿಕೆ ಇದೆ. ಮರದ ಬೊಂಬೆ ಬಹುತೇಕ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ಗೊಂಬೆಗೆ ಒಪ್ಪುವ ಧಿರಿಸು, ಮೋಹಕ ಶೈಲಿಯ ಬಣ್ಣ, ಎಲ್ಲರಿಗೂ ಒಪ್ಪುವ ಸುಂದರ ಸ್ಪರ್ಶವನ್ನು ಗೊಂಬೆಗೆ ನೀಡುತ್ತಾರೆ ಅಶ್ವಿನಿ.

‘ವರ್ಷಪೂರ್ತಿ ಬೇರೆ ಬೇರೆ ರಾಜ್ಯಗಳಲ್ಲಿ ಸಿಗುವ ಬೊಂಬೆಗಳನ್ನು ತಂದು ನೆಲಮೂಲ ಸಂಸ್ಕೃತಿಗೆ ಹೊಂದುವಂತೆ ಸುಂದರಗೊಳಿಸುತ್ತೇವೆ. ರೇಷ್ಮೆ ಬಟ್ಟೆ, ಸೊಂಟಪಟ್ಟಿ, ಆಭರಣಗಳನ್ನು ತೊಡಿಸಿ, ಹೆಣ್ಣು ಬೊಂಬೆಗೆ ನಿರಿಗೆ ಲಂಗ ಧರಿಸಿ, ಗೊಂಬೆಗಳನ್ನು ಹೊಸ ರೂಪು ಕೊಡುತ್ತೇವೆ. ಕೆಲವರು ಪೂಜೆಗೆ ಕೂರಿಸಿದ ಬೊಂಬೆಗೆ ಬೇಡಿಕೆ ಸಲ್ಲಿಸುತ್ತಾರೆ. ಮೈಸೂರು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನವರಾತ್ರಿ ಬೊಂಬೆಗಳಿಗೆ ಮೊದಲ ಸ್ಥಾನ ಇದೆ ಎನ್ನುತ್ತಾರೆ ದೇವಾಂಗ ಬಡಾವಣೆ ನಿವಾಸಿ ಅಶ್ವಿನಿ.

ಯಳಂದೂರು ಪ್ರಾಂತ್ಯವಾದ ನಂತರ ಚಿಕ್ಕದೇವರಾಜ, ಸಂಚಿ ಹೊನ್ನಮ್ಮ ಹಾಗೂ ದಿವಾನರ ಕಾಲದಿಂದ ಸಾಂಸ್ಕೃತಿಕ ಮನ್ನಣೆ ಪಡೆಯಿತು. ನವರಾತ್ರಿ ಸಮಯದಲ್ಲಿ ಗೊಂಬೆ ಕೂರಿಸಿ ರಾಜನಿಗೆ ಶುಭ ಕೋರುತ್ತಿದ್ದರು. ಪಾಡ್ಯದಿಂದ ಆರಂಭಿಸಿ ದಶಮಿ ತನಕ ಅಷ್ಟಲಕ್ಷ್ಮಿ, ದಶಾವತಾರ, ಸೀತಾ ಕಲ್ಯಾಣ, ವೈಕುಂಠ ಪ್ರದರ್ಶನ, ಕೈಲಾಸ ದರ್ಶನ, ಸರಸ್ವತಿ, ಲಕ್ಷ್ಮಿ, ಗೌರಿಯರನ್ನು ಮನೆಗೆ ಆಹ್ವಾನಿಸಲಾಗುತ್ತದೆ. ಚಾಮುಂಡಿಯ ಗೊಂಬೆಗಳ ನಡುವೆ ಕೂರಿಸಿ ಪ್ರತಿದಿನ ಪಾರಾಯಣ ಮಾಡುವ ಅನೂಚಾನ ಪದ್ಧತಿ ಇನ್ನೂ ಉಳಿದಿದೆ ಎನ್ನುತ್ತಾರೆ ಸೊಪ್ಪಿನಕೇರಿ ಶೋಭ.

ನವರಾತ್ರಿಗೆ ಗೊಂಬೆಗಳ ಜಾತ್ರೆ:

ನವರಾತ್ರಿ ಅವಧಿಯಲ್ಲಿ ದೇವಿಯನ್ನು ಆರಾಧಿಸುವ ಪದ್ಧತಿ ಋಗ್ವೇದದಲ್ಲೂ ಇದೆ. ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ನವರಾತ್ರಿ ದಿನಗಳಲ್ಲಿ ಗೊಂಬೆ ಕೂರಿಸುವ ಸಂಪ್ರದಾಯವಿದ್ದು ರಾವಣನ ಪ್ರತಿಕೃತಿ ದಹನ ಮಾಡುವ ಸಂಪ್ರದಾಯವೂ ಇದೆ. ಪಾಂಡವರು ಅಜ್ಞಾತ ವಾಸದ ಅವಧಿಯಲ್ಲಿ ಶಸ್ತ್ರಾಸ್ತ್ರಗಳನ್ನು ಶಮಿವೃಕ್ಷದಲ್ಲಿ ಗುಪ್ತವಾಗಿರಿಸಿ ಮಹಾ ನವಮಿಯ ದಿನ ಅವುಗಳನ್ನು ತೆಗೆದು ವೃಕ್ಷ ಸಮೇತ ಪೂಜಿಸುತ್ತಾರೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ಅವರು.

ಅಶ್ವಿನಿ ಅವರ ಕೈಚಳಕದಲ್ಲಿ ಅರಳಿದ ಬೊಂಬೆಗಳು
ಅಶ್ವಿನಿ ಅವರ ಕೈಚಳಕದಲ್ಲಿ ಅರಳಿದ ಬೊಂಬೆಗಳು
ಅಶ್ವಿನಿ ಅವರ ಕೈಚಳಕದಲ್ಲಿ ಅರಳಿದ ಬೊಂಬೆಗಳು
ಯಳಂದೂರಿನ ದೇವಾಂಗ ಬಡಾವಣೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸಲಾಗಿದೆ.
ಅಶ್ವಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.