ADVERTISEMENT

ನೋಡ ಬನ್ನಿ ‘ಚೆಲುವ ಚಾಮರಾಜನಗರ ದಸರಾ’

ಅ.7ರಿಂದ 9ರವರೆಗೆ ವಿಜೃಂಭಣೆಯ ದಸರಾ ಮಹೋತ್ಸವ: ಸಿಂಗಾರಗೊಂಡಿದೆ ನಗರ, ಮೂರು ದಿನ ರಸದೌತಣ

ಬಾಲಚಂದ್ರ ಎಚ್.
Published 7 ಅಕ್ಟೋಬರ್ 2024, 5:55 IST
Last Updated 7 ಅಕ್ಟೋಬರ್ 2024, 5:55 IST
ಚಾಮರಾಜನಗರ ದಸರಾಗೆ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿರುವ ದೃಶ್ಯ
ಚಾಮರಾಜನಗರ ದಸರಾಗೆ ನಗರಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿರುವ ದೃಶ್ಯ   

ಚಾಮರಾಜನಗರ: ಜನಪದ ಕಲೆಗಳ ನಾಡು, ಮಲೆ ಮಾದಪ್ಪನ ಬೀಡು ಚಾಮರಾಜನಗರದಲ್ಲಿ ಅ.7ರಿಂದ 9ರವರೆಗೆ ವಿಜೃಂಭಣೆಯಿಂದ ‘ಚೆಲುವ ಚಾಮರಾಜನಗರ ದಸರಾ’ ಮಹೋತ್ಸವ ನಡೆಯುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಭಾಗವಾಗಿ ನಡೆಯತ್ತಿರುವ ಚಾಮರಾಜನಗರ ದಸರಾಗೆ ಇಡೀ ನಗರ ನವವಧುವಂತೆ ಸಿಂಗಾರಗೊಂಡಿದೆ.

ಚಾಮರಾಜೇಶ್ವರ ದೇವಸ್ಥಾನದಿಂದ 1 ಕಿ.ಮೀ ಉದ್ದದವರೆಗಿನ ಬಿ.ರಾಚಯ್ಯ ಜೋಡಿ ರಸ್ತೆ ಬಣ್ಣ ಬಣ್ಣದ ವಿದ್ಯುತ್ ದೀ‍ಪಾಲಂಕಾರದಿಂದ ಕಂಗೊಳಿಸುತ್ತಿದೆ. ದೇವಸ್ಥಾನದ ಉದ್ಯಾನದ ಬಳಿ ಮಲೆ ಮಹದೇಶ್ವರ, ಚಾಮುಂಡೇಶ್ವರಿ ದೇವಿಯ ಮಾದರಿಯ ಎಲ್‌ಇಡಿ ಚಿತ್ತಾರ ಚಿತ್ತಾಕರ್ಷಕವಾಗಿದೆ. 

ಜಿಲ್ಲಾಡಳಿತ ಭವನದ ಮುಂಭಾಗ ಬುದ್ದ, ಬಸವ, ಅಂಬೇಡ್ಕರ್ ಮಾದರಿಯ ಲೈಟಿಂಗ್ಸ್‌ ಸುಂದರವಾಗಿ ಮೂಡಿಬಂದಿದೆ. ಜಿಲ್ಲಾಡಳಿತ ಭವನ, ಎಸ್‌ಪಿ ಕಚೇರಿ, ನಗರಸಭೆ, ಚೆಸ್ಕಾಂ, ತಾಲ್ಲೂಕು ಆಡಳಿತ ಸೌಧ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು  ಅಲಂಕೃತಗೊಂಡು ಕಣ್ಣಿಗೆ ಮುದ ನೀಡುತ್ತಿವೆ.

ADVERTISEMENT

ಜಿಲ್ಲೆಯ ನೆಲಮೂಲದ ಜನಪದ ಸಂಸ್ಕೃತಿ, ಮಹದೇಶ್ವರ, ಮಂಟೆಸ್ವಾಮಿಯ ಪರಂಪರೆ, ತತ್ವಪದಗಳ ಶ್ರೀಮಂತಿಕೆಯನ್ನು ಉಣಬಡಿಸಲು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೆ ಯುವ ದಸರಾ, ಫಲಪುಷ್ಪ ಪ್ರದರ್ಶನ, ಕವಿಗೋಷ್ಠಿ, ರೈತ ದಸರಾ, ದಸರಾ ಗ್ರಾಮೀಣ ಕ್ರೀಡಾಕೂಟ, ಪಾರಂಪರಿಕ ನಡಿಗೆ, ಮ್ಯಾರಥಾನ್‌, ಚಿತ್ರಸಂತೆ, ವಸ್ತು ಪ್ರದರ್ಶನ, ಆಹಾರ ಮೇಳವೂ ಪ್ರಮುಖ ಆಕರ್ಷಣೆಯಾಗಿದೆ.  

ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಖ್ಯವೇದಿಕೆ ನಿರ್ಮಾಣ ಮಾಡಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕೆ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರ, ಜೆ.ಎಚ್‌.ಪಟೇಲ್ ಸಭಾಂಗಣಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಅ.7ರಂದು 12.15ಕ್ಕೆ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ  ಮೂಲಕ ಜಿಲ್ಲಾ ದಸರಾ ಮಹೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು, ನಿಗಮ ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ದೇವಸ್ಥಾನದ ಉದ್ಯಾನವನದಲ್ಲಿ ಚಿತ್ರಸಂತೆ ಉದ್ಘಾಟನೆಯಾಗಲಿದ್ದು ನಂತರ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆಯಾಗಲಿದ್ದು, ಮಹಿಳಾ ದಸರಾಗೂ ಚಾಲನೆ ದೊರೆಯಲಿದೆ. ಮಧ್ಯಾಹ್ನ 1ಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, 1.15ಕ್ಕೆ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕವಿಗೋಷ್ಠಿ ಆರಂಭವಾಗಲಿದೆ.

ಮಧ್ಯಾಹ್ನ 1.45ಕ್ಕೆ ಜಿಲ್ಲಾಡಳಿತ ಭವನದಿಂದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದವರೆಗೆ ಕಲಾತಂಡಗಳ ಮುಖ್ಯ ಮೆರವಣಿಗೆ, ಬಳಿಕ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ, ಮಧ್ಯಾಹ್ನ 3.45ಕ್ಕೆ ಸಿಂಹ ಚಿತ್ರಮಂದಿರದಲ್ಲಿ ಚಲನಚಿತ್ರೋತ್ಸವ ಉದ್ಘಾಟನೆಗೊಳ್ಳಲಿದೆ.

ಸಂಜೆ 6 ಗಂಟೆಗೆ ನಗರದ ಜನನ ಮಂಟಪದಲ್ಲಿ ಚಾಮರಾಜೇಶ್ವರ ಸ್ವಾಮಿಯ ದರ್ಬಾರ್, 6.30ಕ್ಕೆ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, 7.30ಕ್ಕೆ ಯುವದಸರಾಗೆ ಚಾಲನೆ ಸಿಗಲಿದೆ.

ಅ.8ರಂದು ಬೆಳಿಗ್ಗೆ 6.30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನ ಆವರಣದಿಂದ ಬಿ.ರಾಜಯ್ಯ ಜೋಡಿ ರಸ್ತೆಯ ಮೂಲಕ ರಾಮಸಮುದ್ರದ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ, ಲೋಕೋಪಯೋಗಿ ಪ್ರವಾಸಿ ಮಂದಿರದವರೆಗೆ ಮ್ಯಾರಥಾನ್ ಇದೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆಗಟ್ಟಲಿವೆ.

ಅ.9ರಂದು ಬೆಳಿಗ್ಗೆ 6.30ಕ್ಕೆ ದೇವಸ್ಥಾನ ಆವರಣದಿಂದ ಜಿಲ್ಲಾಡಳಿತ ಭವನದವರೆಗೆ ಪಾರಂಪರಿಕ ನಡಿಗೆ, ಬೆಳಿಗ್ಗೆ 9.30ಕ್ಕೆ ರೈತ ದಸರಾ ಮೆರವಣಿಗೆ, 11 ಗಂಟೆಗೆ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದೆ. ದೇವಸ್ಥಾನದ ಆವರಣ, ಜಿಲ್ಲಾ ರಂಗಮಂದಿರ, ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ದಿನಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.30ರಿಂದ ರಾತ್ರಿ 9.45ರವರೆಗೆ ದೇವಸ್ಥಾನದ ಆವರಣದಲ್ಲಿ ದಸರಾ ಸಮಾರೋಪ ಜರುಗಲಿದೆ.

ಚಾಮರಾಜನಗರ ದಸರಾಗೆ ಕಂಗೊಳಿಸುತ್ತಿರುವ ನಗರ
ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ
ಜನಪದ ಕಲೆಗಳ ತವರು ಎಂಬ ಅನ್ವರ್ಥ ನಾಮಕ್ಕೆ ಹೊಂದುವಂತೆ ಅ.6ರಿಂದ 9ರವರಗೆ ಜಿಲ್ಲಾಡಳಿತ ಭವನದ ಜೆ.ಎಚ್‌.ಪಟೇಲ್ ಸಭಾಂಗಣದಲ್ಲಿ ದಿನಪೂರ್ತಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾದಸ್ವರ ಗೊರವರ ಕುಣಿತ ಭಕ್ತಿಗೀತೆ ಜನಪದ ಸಂಗೀತ ಭಜನೆ ನೃತ್ಯರೂಪಕ ಸೋಭಾನೆ ಸಂಭ್ರಮ ತಂಬೂರಿ ಪದ ಗೀತ ಗಾಯನ ಡೊಳ್ಳು ಕುಣಿತ ವಾದ್ಯ ಸಂಗೀತ ಸುಗಮ ಸಂಗೀತ ಶನೀಶ್ವರ ಕಥೆ ನೀಲಗಾರರ ಪದ ಜಾಗೃತಿ ಗೀತೆ ವೀರಗಾಸೆ ಹರಿಕಥೆ ಭಾವಗೀತೆ ಸಿದ್ದಪ್ಪಾಜಿ ಕಥೆ ಪ್ರಸ್ತುತ ಪಡಿಸಲಾಗುವುದು. ಸ್ಥಳೀಯ ಕಲಾವಿದರ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.
ಯುವ ದಸರಾ ಸಂಭ್ರಮ
ಯುವ ಜನತೆಯನ್ನು ಸೆಳೆಯುವ ನಿಟ್ಟಿನಲ್ಲಿ ಅ.7ರಂದು ಸಂಜೆ 7ರಿಂದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಮುಖ್ಯವೇದಿಕೆಯಲ್ಲಿ ಯುವ ದಸರಾ ಆಯೋಜಿಸಲಾಗಿದೆ. ನಟ ರಂಗಭೂಮಿ ಕಲಾವಿದ ನಾಗಭೂಷಣ್ ಯುವ ದಸರಾ ಉದ್ಘಾಟಿಸಲಿದ್ದಾರೆ. ಕೊಳ್ಳೇಗಾಲದ ಜೆಎಸ್‌ಎಸ್‌ ನರ್ಸಿಂಗ್ ಶಾಲೆ  ನಿಸರ್ಗ ಪದವಿ ಪೂರ್ವ ಕಾಲೇಜು ಕಾರ್ನರ್ ಸ್ಟೋನ್ ಕಾಲೇಜು ವಿಶ್ವಚೇತನ ಕಾಲೇಜು ಜೆಎಸ್‌ಎಸ್‌ ಬಾಲಕಿಯರ ಕಾಲೇಜು ಚಾಮರಾಜನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಮುರುಘರಾಜೇಂದ್ರ ಕಾಲೇಜು ಸೇವಾಭಾರತಿ ಕಾಲೇಜು ಜೆಎಸ್‌ಎಸ್‌ ಮಹಿಳಾ ಪದವಿಪೂರ್ವ ನರ್ಸಿಂಗ್ ಕಾಲೇಜು   ಗುಂಡ್ಲುಪೇಟೆ ಐಟಿಐ ಜೆಎಸ್‌ಎಸ್‌ ಕಲಾ ವಾಣಿಜ್ಯ ಕಾಲೇಜು ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು  ಯಳಂದೂರು ವೈ.ಎಂ.ಮಲ್ಲಿಕಾರ್ಜುನಸ್ವಾಮಿ ಕಾಲೇಜು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಚಾಮರಾಜೇಶ್ವರ ಸ್ವಾಮಿಯ ದರ್ಬಾರ್
ದಶಕಗಳ ಬಳಿಕ ಚಾಮರಾಜನಗರ ದಸರಾದಲ್ಲಿ ಚಾಮರಾಜೇಶ್ವರ ಸ್ವಾಮಿಯ ದರ್ಬಾರ್ ನಡೆಸಲಾಗುತ್ತಿದೆ. ಅ.7ರಂದು ಸಂಜೆ 6ಕ್ಕೆ ಚಾಮರಾಜೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಚಾಮರಾಜೇಶ್ವರ ಒಡೆಯರ್ ಅವರ ಜನ್ಮಸ್ಥಳವಾದ ಜನನ ಮಂಟಪದಲ್ಲಿ ದರ್ಬಾರ್ ನಡೆಯಲಿದೆ. ಮೈಸೂರಿನಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಿದರೆ ಇಲ್ಲಿ ಚಾಮರಾಜೇಶ್ವರ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದರ್ಬಾರ್ ಮಾಡಲಾಗುತ್ತದೆ. ದೇವರ ಮೂರ್ತಿಗೆ ಗಣಪತಿ ಪೂಜೆ ಪುಣ್ಯಾಹ ಉಪಚಾರ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದ ನಂತರ ಆಗಮಿಕರು ಅರ್ಚಕರು ಸ್ಥಾನಿಕರು ಪರಿಚಾರಕರು ಬಹುಪರಾಕ್‌ ಕೂಗುತ್ತಾರೆ. ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಿರಿಯ ಅಧಿಕಾರಿಗಳು ಶಾಸಕರು ಜನಪ್ರತಿನಿಧಿಗಳು ದೇವರಿಗೆ ನಮಸ್ಕಾರ ಸಲ್ಲಿಸುತ್ತಾರೆ. ನಂಜನಗೂಡಿನ ನಂಜುಂಡೇಶ್ವರ ಮೈಸೂರಿನ ಚಾಮುಂಡಿದೇವಿಗೆ ನಡೆಯುವ ದರ್ಬಾರ್ ಮಾದರಿಯಲ್ಲಿಯೇ ಚಾಮರಾಜೇಶ್ವರ ಸ್ವಾಮಿಗೂ ದರ್ಬಾರ್ ನಡೆಯಲಿದೆ ಎಂದು ಚಾಮರಾಜೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಆಗಮಿಕರಾದ ದರ್ಶನ್‌ ಮಾಹಿತಿ ನೀಡಿದರು.
ಡಾಲಿ ಧನಂಜಯ್‌ ಭಾಗಿ
ಚಾಮರಾಜೇಶ್ವರ ಸ್ವಾಮಿ ದೇವಾಲಯದ ಪ್ರಧಾನ ವೇದಿಕೆಯಲ್ಲಿ ಅ.7ರಂದು ಸಂಜೆ 6.30ರಿಂದ 7.30ರವರೆಗೆ ಅವತಾರ್ ಡಾನ್ಸ್ ಇವೆಂಟ್ಸ್ ನೃತ್ಯವೈಭವ ನಡೆದಯಲಿದ್ದು 7.30ಕ್ಕೆ ನಿರ್ದೇಶಕ ನಟ ನಾಗಭೂಷಣ್ ಯುವ ದಸರಾ ಉದ್ಘಾಟಿಸಲಿದ್ದಾರೆ. ರಾತ್ರಿ 10.30ರವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 8ರಂದು ಸಂಜೆ 7ಕ್ಕೆ ಮಿಮಿಕ್ರಿ ಗೋಪಿ ಮತ್ತು ತಂಡದ ಕಾರ್ಯಕ್ರಮ 8ಕ್ಕೆ ಹಾಸ್ಯ ಕಲಾವಿದ ಲೋಕೇಶ್ ಬಸವಟ್ಟಿ ಗಾಯಕಿ ಪ್ರಗತಿ ಬಡಿಗೇರ ಕಾಮಿಡಿ ಕಿಲಾಡಿಗಳು ಗಿಚ್ಚಿ ಗಿಲಿಗಿಲಿ ಮಜಾಭಾರತ ಕಲಾವಿದರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಯಲಿದೆ. 9ರಂದು ಸಂಜೆ 6ಕ್ಕೆ ನಟ ಡಾಲಿ ಧನಂಜಯ ಹಾಗೂ ಕಳೆದ ಬಾರಿಯ ಬಿಗ್‌ಬಾಸ್ ಸ್ಪರ್ಧೆಯ ವಿಜೇತ ಕಾರ್ತಿಕ್ ಮಹೇಶ್ ಭಾಗವಹಿಸಲಿದ್ದಾರೆ. ಗಾಯಕರಾದ ಜಸ್ ಕರಣ್ ಸಿಂಗ್ ಹೇಮಂತ್ ಚೈತ್ರ ದಿವ್ಯಾ ರಾಮಚಂದ್ರ ತಂಡದ ಸಂಗೀತ ಸುಧೆ ಕಾರ್ಯಕ್ರಮ ಹುಲಿ ಕಾರ್ತಿಕ್ ಹಾಸ್ಯ ಐಶ್ವರ್ಯ ತಂಡದ ಮನರಂಜನಾ ಕಾರ್ಯಕ್ರಮಗಳು ಇದೆ.
ದಸರಾ ಗ್ರಾಮೀಣ ಕ್ರೀಡಾಕೂಟ
ಅ.7.8ರಂದು ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ದಸರಾ ಗ್ರಾಮೀಣ ಕ್ರೀಡಾಕೂಟ ಚಾಮರಾಜೇಶ್ವರ ದೇವಸ್ಥಾನದ ಬಳಿ ಆಹಾರ ಮೇಳ ಮಹಿಳಾ ಸ್ವ ಸಹಾಯ ಸಂಘಗಳ ಕರಕುಶಲ ವಸ್ತುಗಳು ಹಾಗೂ ಆಹಾರ ಉತ್ಪನ್ನಗಳ ಪ್ರದರ್ಶನ ಮಾರಾಟ ಮಹಿಳಾ ದಸರಾ ಅಂಗವಾಗಿ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಕವಿಗೋಷ್ಠಿ 7ರಂದು ಬೆಳಿಗ್ಗೆ 10.30ಕ್ಕೆ
ಜಿಲ್ಲಾ ರಂಗಮದಿರದಲ್ಲಿ ಯುವ ಕವಿಗೋಷ್ಠಿಯನ್ನು ಕವಿ ಹೊರೆಯಾಲ ದೊರೆಸ್ವಾಮಿ ಉದ್ಘಾಟಿಸಲಿದ್ದು ಮದ್ದೂರು ದೊರೆಸ್ವಾಮಿ ಅಧ್ಯಕ್ಷತೆ ವಹಿಸುವರು. ಬಸವಣ್ಣ ಮೂಕಹಳ್ಳಿ ಆಶಯ ನುಡಿಗಳನ್ನಾಡುವರು. ಮಧ್ಯಾಹ್ನ 2ಕ್ಕೆ ನಡೆಯುವ ಪ್ರಧಾನ ಕವಿಗೋಷ್ಠಿಯನ್ನು ಕವಿ ಡಾ.ಪಿ.ಚಂದ್ರಿಕಾ ಉದ್ಘಾಟಿಸುವರು. ಮುಳ್ಳೂರು ಶಿವಮಲ್ಲು ಅಧ್ಯಕ್ಷತೆ ವಹಿಸುವರು. ಪ್ರಾಂಶುಪಾಲ ಪ್ರೊ. ಥಿಯೋಡರ್ ಲೂಥರ್ ಆಶಯ ನುಡಿಗಳನ್ನಾಡುವರು. 7ರಂದು ಬೆಳಿಗ್ಗೆ 10.30ಕ್ಕೆ ದೇವಸ್ಥಾನದ ಆವರಣದಲ್ಲಿ ಚಿತ್ರ ಸಂತೆ ಮತ್ತು ವಸ್ತು ಪ್ರದರ್ಶನ ನಡೆಯಲಿದೆ.
ಫಲಪುಷ್ಪ ಪ್ರದರ್ಶನ 7 ರಿಂದ 9ರವರೆಗೆ
ಜಿಲ್ಲಾಡಳಿತ ಭವನದ ಆವರಣದಲ್ಲಿ ಫಲಪುಷ್ಟ ಪ್ರದರ್ಶನ ಆಯೋಜಿಸಲಾಗಿದ್ದು ಹೂವಿನ ಕಲಾಕೃತಿ ಗಮನ ಸೆಳೆಯುತ್ತಿವೆ. ಹಿಮವದ್ ಗೋಪಾಲಸ್ವಾಮಿ ಗೋಪುರ ಆನೆ ನವಿಲು ಜಿಂಕೆ ಮೊಲ ವೀಣೆ ತಬಲ ಇಕಬೆನ ಮಾದರಿಯ ಹೂ ಜೋಡಣೆ ಕಲಾವಿದೆ ಗೌರಿ ಅವರ ರೈತ ಮಹಿಳೆ ಮರಳುಶಿಲ್ಪ ತರಕಾರಿ ಕೆತ್ತನೆ ವರ್ಟಿಕಲ್ ಗಾರ್ಡನ್ ಅಲಂಕಾರಿಕ ಹೂವಿನ ಗಿಡಗಳು ಹಾಗೂ 7500 ಹೂವಿನ ಕುಂಡಗಳನ್ನು ಜೋಡಿಸಿಡಲಾಗಿದೆ. ಹನಿ ನೀರಾವರಿ ಪದ್ಧತಿ ಕೃಷಿ ಹೊಂಡ ಗ್ರೀನ್ ಹೌಸ್ ಹಣ್ಣು ಮಾಗಿಸುವ ಘಟಕ ಈರುಳ್ಳಿ ಶೇಖರಣಾ ಘಟಕ ಕೈತೋಟ ತಾರಸಿ ತೋಟ ಜೇನುಕೃಷಿ ನೆರಳು ಪರದೆ ಸಿರಿಧಾನ್ಯ ಕಲಾಕೃತಿ ಸಹಜ ಕೃಷಿ ಮಾಹಿತಿ ಪ್ರಾತ್ಯಕ್ಷಿಕೆಗಳು ಇವೆ. ಸರ್ಕಾರಿ ಇಲಾಖೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ಮಳಿಗೆಗಳನ್ನು ತೆರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.