ಯಳಂದೂರು: ನಾಡಹಬ್ಬ ದಸರಾ ಹಿರಿಯರು, ಕಿರಿಯರಲ್ಲಿ ಹಬ್ಬದ ಸಂಭ್ರಮ ತಂದಿದೆ. ಇದೇ ಸಮಯ ದಸರಾ ರಜೆಯೂ ಬಂದಿದೆ. ಬಿಡುವಿನ ವೇಳೆಯಲ್ಲಿ ಮಕ್ಕಳು ಸುತ್ತಾಟ, ನೀರಾಟದಲ್ಲಿ ಮುದಗೊಳ್ಳುತ್ತಿದ್ದಾರೆ.
ಹೆಣ್ಣು ಮಕ್ಕಳು ನವರಾತ್ರಿ ಸಡಗರದಲ್ಲಿ ಬೊಂಬೆಗಳನ್ನು ಪೂಜಿಸುವ ಕಾರ್ಯದಲ್ಲಿ ತೊಡಗಿದ್ದರೆ, ಪುಟಾಣಿಗಳು, ಶಾಲೆ ಕಲಿಕೆಯಲ್ಲೇ ದಿನದೂಡುತ್ತಿದ್ದ ಮಕ್ಕಳು ಅಜ್ಜಿ–ಅಜ್ಜನ ಮನೆಗಳತ್ತ ದಾಂಗುಡಿ ಇಟ್ಟಿದ್ದಾರೆ.
ಅಕ್ಟೋಬರ್ 3 ರಿಂದ ಶಾಲೆಗಳಿಗೆ ದಸರಾ ರಜೆ ನೀಡಲಾಗಿದೆ. ಶಿಕ್ಷಕರು ರಜಾ ಅವಧಿಯಲ್ಲಿ ಒಂದಷ್ಟು ಮನೆಗೆಲಸ ನೀಡಿದ್ದಾರೆ. ಕಾನ್ವೆಂಟ್ ಮಕ್ಕಳು ಅಭ್ಯಾಸ ಪುಸ್ತಕದ ಅಕ್ಷರ ಕಲಿಕೆಯ ಚಟುವಟಿಕೆ, ಚಿತ್ರಕಲೆ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ನಡುವೆ ಪ್ರೌಢಶಾಲಾ ಮಕ್ಕಳು ಮನೆ ಪಾಠ, ಪರೀಕ್ಷಾ ಸಿದ್ಧತೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿಕರ ಮಕ್ಕಳು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೆ, ಜಾನುವಾರು ಸಾಕಣೆ, ಮೇವು ಸಂಗ್ರಹದಲ್ಲಿ ತೊಡಗಿದವರೂ ಇದ್ದಾರೆ.
ಹೊಳೆಯಲ್ಲಿ ನೀರು ಹರಿಯುತ್ತಿದೆ. ಕಬಿನಿ ಕಾಲುವೆಯಲ್ಲಿ ಜಲರಾಶಿ ತುಂಬಿದೆ. ಕೆರೆ ಕಟ್ಟೆಗಳಲ್ಲಿ ಅಲ್ಪ ಪ್ರಮಾಣದ ಜಲ ಸಂಗ್ರಹವಿದೆ. ಗ್ರಾಮೀಣ ಪರಿಸರದ ಚಿಣ್ಣರು ಹತ್ತಿರದ ಜಲಾವರಗಳಲ್ಲಿ ಈಜು ಕಲಿತು ಮೋಜು ಮಾಡುತ್ತಿದ್ದಾರೆ. ಕೆಲವರು ಯುವಕರ ಜೊತೆ ಸೇರಿ ಮೀನು ಹಿಡಿದು ಮನೆಗೆ ನೀಡಿದರೆ, ಬಿಸಿಲಿನ ಸಮಯ ನೀರಿಗಿಳಿದು ಮೈ ತಂಪು ಮಾಡಿಕೊಳ್ಳುವವರೂ ಇದ್ದಾರೆ. ‘ಮರಿ, ಕುರಿ, ಎಮ್ಮೆ, ಹಸು ಮೇಯಿಸುವಾಗ ನೀರಿಗಿಳಿದು ಅವುಗಳ ಮೈತೊಳೆದು ಆಟ ಆಡುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿ ಕಂದಹಳ್ಳಿ ಮಹೇಶ್.
‘ತಡವಾಗಿ ಮಳೆಗಾಲ ಆರಂಭವಾಗಿದೆ. ಕೆಲವೊಮ್ಮೆ ಕಾಲುವೆ ಮತ್ತು ಹೊಳೆಯಲ್ಲಿ ನೀರಿನ ರಭಸ ಹೆಚ್ಚಾಗಲಿದೆ. ಕೆರೆಗಳಲ್ಲಿ ನೀರು ಸಂಗ್ರಹವೂ ಏರಿಕೆ ಕಾಣಲಿದೆ. ಈ ಸಮಯ ಮಕ್ಕಳು ಎತ್ತರ ಸ್ಥಳದಿಂದ ನೀರಿಗೆ ಧುಮುಕಿದರೆ, ಮತ್ತಲವರು ಡೈವ್ ಹೊಡೆದು ಗೆಳೆಯರಿಗೆ ಸ್ಫೂರ್ತಿ ತುಂಬುತ್ತಾರೆ. ಇಂತಹ ಸಂದರ್ಭಗಳಲ್ಲಿ ಎಚ್ಚರ ತಪ್ಪಿದರೆ ಮಕ್ಕಳು ಕೆಸರಿಗೆ ಸಿಲುಕುವ ಅಪಾಯ ಎದುರಾಗುತ್ತದೆ. ಹಾಗಾಗಿ, ಪೋಷಕರು ಮಕ್ಕಳ ಮೇಲೆ ನಿಗಾ ವಹಿಸಬೇಕು’ ಎಂದು ಶಿಕ್ಷಕ ಗೋವಿಂದು ಸಲಹೆ ನೀಡುತ್ತಾರೆ.
ನೃತ್ಯ, ನಾಟ್ಯ ಕಲಿಕೆ: ‘ದಸರಾ ಅವಧಿಯಲ್ಲಿ 20 ದಿನ ರಜೆ ಸಿಗಲಿದೆ. ಈ ಅವಧಿಯಲ್ಲಿ ನೃತ್ಯ ಮತ್ತು ಭರತ ನಾಟ್ಯ ತರಬೇತಿ ಪಡೆಯುತ್ತೇವೆ. ಜಿಲ್ಲೆ ಇಲ್ಲವೇ ತಾಲ್ಲೂಕು ಕೇಂದ್ರಗಳಲ್ಲಿ ಪ್ರದರ್ಶನ ಕಲೆ ಮತ್ತು ಸಂಗೀತ ಕಲಿಯುತ್ತೇವೆ. ಇದರಿಂದ ಪಠ್ಯ ಕಲಿಕೆಯಲ್ಲೂ ಏಕಾಗ್ರತೆ ಸಿದ್ಧಿಸಲು ಸಾಧ್ಯ. ಬಹುತೇಕರು ರಜಾ ಅವಧಿಯಲ್ಲಿ ನೆಂಟರ ಮನೆ ಸೇರಿ ದಸರಾ ಕಾರ್ಯಕ್ರಮದಲ್ಲಿ ಆಯೋಜಿಸುವ ಸ್ಪರ್ಧೆಗಳಲ್ಲೂ ಭಾಗವಹಿಸುತ್ತಾರೆ’ ಎಂದು ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಹೇಶ್ವರಿ ಮತ್ತು ಕೀರ್ತಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.