ADVERTISEMENT

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರೈತ ಮುಖಂಡರು, ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 16:02 IST
Last Updated 18 ಮಾರ್ಚ್ 2021, 16:02 IST
ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಯಿತು
ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಯಿತು   

ಚಾಮರಾಜನಗರ: ಜಿಲ್ಲೆಯ ರೈತರ ಬೇಡಿಕೆಗಳ ಸಂಬಂಧ ಚರ್ಚಿಸುವುದಕ್ಕಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ನೇತೃತ್ವದಲ್ಲಿ ರೈತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ಗುರುವಾರ ನಡೆಯಿತು.

ರೈತರು ಎದುರಿಸುತ್ತಿರುವ ಸಮಸ್ಯೆ, ಅವರ ಬೇಡಿಕೆಗಳು ಹಾಗೂ ಪ್ರಸ್ತಾಪಿಸಲಾಗುವ ವಿಚಾರಗಳ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ತ್ವರಿತವಾಗಿ ನಿರ್ಣಯ ತೆಗೆದುಕೊಂಡು, ಅವುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಸಭೆಯ ಆರಂಭದಲ್ಲೇ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಅವರು ಕೆರೆಗಳಿಗೆ ನೀರು ತುಂಬಿಸುವ ವಿಷಯ ಪ್ರಸ್ತಾಪಿಸಿದರು. ಎಲ್ಲ ಕೆರೆಗಳಿಗೆ ನಿಗದಿ ಪಡಿಸಿದ ಹಂತಗಳಲ್ಲಿ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದಡಾ.ಎಂ.ಆರ್. ರವಿ ಅವರು, ‘ವೇಳಾಪಟ್ಟಿಯ ಪ್ರಕಾರವೇ ನೀರು ತುಂಬಿಸಬೇಕು. ಪಾರದರ್ಶಕವಾಗಿ ಕೆಲಸ ನಿರ್ವಹಿಸಬೇಕು. ಎಲ್ಲರಿಗೂ ನ್ಯಾಯಯುತವಾಗಿ ನೀರು ಹಂಚಿಕೆಯಾಗಬೇಕು. ರೈತರ ಸಭೆ ಕರೆದು ಒಮ್ಮತದಿಂದ ಮನವರಿಕೆ ಮಾಡಿಕೊಡಬೇಕು’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಮಹದೇಶ್ವರ ಬೆಟ್ಟದ ನಾಗಮಲೆ, ಮಂದಾರೆ, ತುಳಸಿಕೆರೆ, ತೆಕ್ಕಣೆ ಮುಂತಾದ ಕಡೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ. ಬೇಸಿಗೆ ವೇಳೆಯಲ್ಲಿ ಹೆಚ್ಚಿನ ಸಮಸ್ಯೆ ಅನುಭವಿಸಬೇಕಿದ್ದು ಇದಕ್ಕೆ ಪರಿಹಾರ ದೊರಕಬೇಕಿದೆ ಎಂದು ಸ್ಥಳೀಯ ರೈತ ಮುಖಂಡರು ಆಗ್ರಹಿಸಿದರು.

‘ಬೆಟ್ಟದ ವ್ಯಾಪ್ತಿಯ ಗ್ರಾಮಗಳಲ್ಲಿ ನೀರು ಪೂರೈಕೆಗೆ ತೊಂದರೆಯಾಗಬಾರದು. ಪಂಚಾಯತ್ ಇಲಾಖೆಯ ಅಧಿಕಾರಿಗಳು ವಿಶೇಷ ಗಮನ ನೀಡಿ ನೀರಿನ ಸಮಸ್ಯೆ ಪರಿಹರಿಸಬೇಕು. ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.

ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಗೆ ನೀಡುವ ಪರಿಹಾರ ಸಮರ್ಪಕವಾಗಿರಬೇಕು. ಜಮೀನುಗಳಲ್ಲಿ ಬೆಳೆದಿರುವ ಮರಗಳನ್ನು ಕಡಿಯಲು ಶೀಘ್ರ ಅನುಮತಿ ನೀಡಬೇಕು. ಗುಣಮಟ್ಟದ ಹಾಗೂ ಹೆಚ್ಚು ಆದಾಯ ತರುವ ಸಸಿಗಳನ್ನು ಅರಣ್ಯ ಇಲಾಖೆ ವಿತರಿಸಬೇಕು ಎಂಬ ವಿಷಯಗಳನ್ನು ರೈತ ಮುಖಂಡರು ಗಮನಕ್ಕೆ ತಂದರು.

‘ಕಬ್ಬು ಬೆಳೆಗಾರರಿಂದ ಕಬ್ಬು ಖರೀದಿಸುವ ಪ್ರಕ್ರಿಯೆಗೆ ಮುಂಚಿತವಾಗಿಯೇ ಯೋಜನೆ ಸಿದ್ಧಪಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ರೈತರಿಗೆ ನಷ್ಟವಾಗದಂತೆ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯವರು ನೋಡಿಕೊಳ್ಳಬೇಕು. ರೈತರ ಪರವಾಗಿ ಈ ಹಿಂದೆ ನೀಡಿರುವ ನಿರ್ದೆಶನಗಳು ಕಟ್ಟು ನಿಟ್ಟಾಗಿ ಪಾಲನೆಯಾಗಬೇಕು’ ಎಂದು ಡಾ.ಎಂ.ಆರ್. ರವಿ ಅವರು ಸೂಚಿಸಿದರು.

ಬ್ಯಾಂಕುಗಳ ಸೇವೆ, ವಿದ್ಯುತ್, ಗಣಿಗೆ ಸಂಬಂಧಿಸಿದಂತೆ ಕೈಗೊಳ್ಳಬೇಕಿರುವ ಕ್ರಮಗಳು, ವಿವಿಧ ಇಲಾಖೆಗಳ ಸೌಲಭ್ಯ ಪಡೆಯುವಲ್ಲಿ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ರೈತ ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಎಲ್ಲ ವಿಷಯಗಳ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ರೈತ ಮುಖಂಡರಾದ ಮಾಡ್ರಳ್ಳಿ ಮಹದೇವಪ್ಪ, ಚಂಗಡಿ ಕರಿಯಪ್ಪ, ಸಂಪತ್, ನಾರಾಯಣ, ನಾಗೇಂದ್ರ, ಹೊನ್ನೂರು ಬಸವಣ್ಣ, ಬಸವರಾಜು, ಜ್ಯೋತಿ, ಎಂ. ಮಹಾದೇವಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.