ಚಾಮರಾಜನಗರ: ಪಶು ಆಸ್ಪತ್ರೆಯಿದ್ದರೂ, ವೈದ್ಯರೇ ಇಲ್ಲ. ಗ್ರಾಮದ ಕೆರೆಗಳಿಗೆ ಮಲಿನ ನೀರು ಸೇರುತ್ತಿದ್ದು, ಅದನ್ನು ತಡೆಗಟ್ಟಿ. ಗಣಿ ರಾಜಧನದ ಹಣ ಗ್ರಾಮದ ಅಭಿವೃದ್ಧಿಗೆ ವಿನಿಯೋಗಿಸಬೇಕು..
–ತಾಲ್ಲೂಕಿನ ಕೊತ್ತಲವಾಡಿ ಗ್ರಾಮಸ್ಥರು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮುಂದೆ ಹತ್ತು ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಪಟ್ಟಿ ಸಲ್ಲಿಸಿದರು.
ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ, ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು 15ಕ್ಕೂ ಹೆಚ್ಚು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. 25 ಮಂದಿ ವೈಯಕ್ತಿಕ ಅಹವಾಲುಗಳನ್ನು ಸಲ್ಲಿಸಿದರು.
ಮುಖಂಡ ಮಾದಪ್ಪ ಮಾತನಾಡಿ, ‘ಗ್ರಾಮದಲ್ಲಿ 7500 ಜನರಿದ್ದು, ಗ್ರಾಮದ ಅಭಿವೃದ್ಧಿಗೆ ಮೂಲಸೌಕರ್ಯಗಳ ಅಗತ್ಯವಿದೆ. ಗ್ರಾಮದ ಹೊರವಲಯದಲ್ಲಿರುವ ಕೆರೆಗಳಿಗೆ ನೀರು ತುಂಬಿಸಲಾಗಿದ್ದು, ಗ್ರಾಮದ ಕಲುಷಿತ ನೀರು ಸೇರಿ ಮಲಿನವಾಗುತ್ತಿದೆ. ಕಲುಷಿತ ನೀರನ್ನು ಬೇರೆಡೆಗೆ ಬಿಡಲು ಕ್ರಮಕೈಗೊಳ್ಳಬೇಕು. ಶತಮಾನ ಕಂಡಿರುವ ಸರ್ಕಾರಿ ಶಾಲೆಗಳಿಗೆ ಹೊಸ ಕೊಠಡಿ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಪ್ರಜ್ವಲ್ ಮಾತನಾಡಿ, ‘ಗ್ರಾಮದಲ್ಲಿ ಪಶು ಆಸ್ಪತ್ರೆ ಇದೆ. ಆದರೆ, ವೈದ್ಯರಿಲ್ಲ. ಪಶು ವೈದ್ಯರನ್ನು ನೇಮಿಸಬೇಕು. ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕಾಗಿ ಎರಡು ಎಕರೆ ಜಮೀನು ಗುರುತಿಸಬೇಕು. ಗ್ರಾಮದಿಂದ ಗುರುವಿನಪುರ ಗ್ರಾಮಕ್ಕೆ ರಸ್ತೆ ಕಲ್ಪಿಸಬೇಕು. ಎರಡನೇ ಹಂತದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕರು ಹಾಗೂ ಸುತ್ತುಗೋಡೆ, ಶುದ್ಧ ಕುಡಿಯುವ ನೀರಿನ ಘಟಕ, ಕರೆಗಳಿಗೆ ತಡೆಗೋಡೆ ನಿರ್ಮಿಸಬೇಕು. ಮದ್ಯದ ಅಕ್ರಮ ಮಾರಾಟಕ್ಕೆ ತಡೆ ಹಾಕಬೇಕು’ ಎಂದು ಮನವಿ ಮಾಡಿದರು.
ಮುಖಂಡ ಸೋಮಲಿಂಗಪ್ಪ ಮಾತನಾಡಿ, ‘ಗ್ರಾಮದಲ್ಲಿ ಸಾಕಷ್ಟು ಕ್ವಾರಿಗಳಿವೆ. ನಮ್ಮಲ್ಲಿಂದಲೇ ಸರ್ಕಾರಕ್ಕೆ ಹೆಚ್ಚು ರಾಜಧನ ಹೋಗುತ್ತದೆ. ಆದ್ದರಿಂದ ಅದರ ಅನುದಾನದಲ್ಲಿ ಗ್ರಾಮದ ಅಭಿವೃದ್ಧಿಯನ್ನು ಮಾಡಬೇಕು’ ಎಂದರು.
‘ಗ್ರಾಮ ಪಂಚಾಯತಿ ಪಿಡಿಒ ಸಮಯಕ್ಕೆ ಸರಿಯಾಗಿ ಕಚೇರಿ ಬರುತ್ತಿಲ್ಲ. ಇ–ಸ್ವತ್ತು ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ. ಕಸ ವಿಲೇವಾರಿ ವಾಹನವು ಉಪಯೋಗವಾಗುತ್ತಿಲ್ಲ’ ಮತ್ತೊಬ್ಬ ಗ್ರಾಮಸ್ಥರು ಎಂದು ದೂರಿದರು.
ಗ್ರಾಮದ ರಸ್ತೆಗಳು ಪದೇ ಪದೇ ಹಾಳಾಗುತ್ತಿದ್ದು, ಇದಕ್ಕೆ ಅಧಿಕ ಭಾರ ತುಂಬಿಕೊಂಡು ಹೋಗುತ್ತಿರುವ ಗಣಿ ವಾಹನಗಳೋ ಇಲ್ಲಾ ಕಳಪೆ ಕಾಮಗಾರಿಯೇ ಎಂಬುದು ಗೊತ್ತಿಲ್ಲ. ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಅಧಿಕ ಭಾರ ತುಂಬಿಕೊಂಡು ಹೋಗುವ ವಾಹನಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬರು ಆಗ್ರಹಿಸಿದರು.
ಗಂಗಾಧರೇಶ್ವರ ಶಾಲೆಗೆ ಗ್ರಂಥಾಲಯದ ಅವಶ್ಯಕತೆ ಇದೆ. ಅದನ್ನು ದಾನಿಗಳು ಅಥವಾ ಗ್ರಾಮ ಪಂಚಾಯಿತಿ ಅನುದಾನದಿಂದ ನಿರ್ಮಾಣ ಮಾಡಿಕೊಡುವಂತೆ ವಿದ್ಯಾರ್ಥಿಯೊಬ್ಬ ಮನವಿ ಮಾಡಿದ.
ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ‘ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದಿಂದ ಗ್ರಾಮದ ಶಾಲೆಗಳ ಅಭಿವೃದ್ದಿ ಮಾಡಲು ಸೂಚಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸೌಲಭ್ಯಕ್ಕೆ ಶಾಸಕರ ಅನುದಾನದಲ್ಲಿ ನೆರವು ನೀಡಲಾಗುವುದು. ಸರಿಯಾದ ದಾಖಲೆಗಳನ್ನು ನೀಡಿದ್ದಲ್ಲಿ ಇ-ಸ್ವತ್ತು ನೀಡುವಲ್ಲಿ ಅಧಿಕಾರಿಗಳು ವಿಳಂಬ ಮಾಡಬಾರದು’ ಎಂದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಮಾತನಾಡಿ, ‘ಸ್ಮಶಾನಕ್ಕಾಗಿ ಈಗಾಗಲೇ ಒಂದು ಎಕರೆ ಜಾಗ ಗುರುತಿಸಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆ ಇರುವ ಹಿನ್ನೆಲೆಯಲ್ಲಿ ಎರಡು ಎಕರೆ ಜಾಗ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಬಸ್ ವ್ಯವಸ್ಥೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಲು ಸೂಚಿಸಲಾಗಿದೆ’ ಎಂದರು.
‘ಊರಿನ ಶತಮಾನ ಕಂಡ ಸರ್ಕಾರಿ ಶಾಲೆ ಅಭಿವೃದ್ದಿಗೆ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ನೀಡಲಾಗುತ್ತದೆ. ಪಶು ವೈದ್ಯರ ಕಾಯಂ ನಿಯೋಜನೆಗೂ ತಿಳಿಸಲಾಗಿದೆ. ಕೆರೆಗೆ ಕಲುಷಿತ ನೀರು ಸೇರದಂತೆ ಅಗತ್ಯವಿರುವ ಕೆಲಸ ನಿರ್ವಹಿಸಲು ಪರಿಶೀಲಿಸಲು ಸೂಚಿಸಲಾಗಿದೆ. ಇತರೆ ಎರಡು ಕೆರೆಗಳ ಸಂರಕ್ಷಣೆಗೆ ತಡೆಗೋಡೆ ನಿರ್ಮಿಸುವ ಸಂಬಂಧ ಪರಿಶೀಲಿಸಿ ಪ್ರಸ್ತಾವ ಸಲ್ಲಿಸಲು ತಿಳಿಸಲಾಗಿದೆ’ ಎಂದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಸತ್ಯಾನಂದ, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್ ಐ.ಇ.ಬಸವರಾಜ, ಭೂ ದಾಖಲೆಗಳ ಉಪನಿರ್ದೇಶಕಿ ವಿದ್ಯಾಯಿನಿ, ಬಿಆರ್‌ಟಿ ಸಹಾಯಕ ಅರಣ್ಯ ಸಂರಕ್ಷಾಣಧಿಕಾರಿ ಸುರೇಶ್ ಇದ್ದರು.
ಜಿಲ್ಲಾಧಿಕಾರಿ, ಶಾಸಕರಿಗೆ ಅದ್ಧೂರಿ ಸ್ವಾಗತ
ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು.
ಗ್ರಾಮದ ಹೊರವಲಯದಲ್ಲಿರುವ ಸ್ವಾಗತ ಕಮಾನಿನ ಮುಂಭಾಗ ಮಂಗಳವಾದ್ಯ, ಪೂರ್ಣಕುಂಭದೊಂದಿಗೆ ಬರಮಾಡಿಕೊಂಡು ಎತ್ತಿನಗಾಡಿಗಳಲ್ಲಿ ಅವರನ್ನು ಗ್ರಾಮಕ್ಕೆ ಕರೆದುಕೊಂಡು ಬರಲಾಯಿತು.
ಪೋಷಣ ಅಭಿಯಾನದಡಿ ಗರ್ಭಿಣಿಯೊಬ್ಬರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು.
ಶಾಸಕರು, ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯಿತಿಯ ಗ್ರಂಥಾಲಯ, ಶತಮಾನದ ಸರ್ಕಾರಿ ಶಾಲೆಗೆ ಭೇಟಿ ನೀಡಿದರು. ಕಾರ್ಯಕ್ರಮದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಪ್ರಾತ್ಯಕ್ಷಿಕೆ ಪ್ರದರ್ಶನವನ್ನು ವೀಕ್ಷಿಸಿದರು. ಪ್ರದರ್ಶನಕ್ಕಿಟ್ಟಿದ್ದ ಕೃಷಿ ಪರಿಕರಗಳನ್ನು ಜಿಲ್ಲಾಧಿಕಾರಿಗಳಿಗೆ ವಿದ್ಯಾರ್ಥಿಗಳು ಪರಿಚಯ ಮಾಡಿಕೊಟ್ಟರು. ರಾಗಿ ರಾಶಿಗೆ ಪೂಜೆ ಸಲ್ಲಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.