ADVERTISEMENT

ಆರೋಗ್ಯ ಸೇವೆ, ರಸ್ತೆ ಸರಿ ಇಲ್ಲ, ನೆಟ್‌ವರ್ಕ್‌ ಸಿಗುತ್ತಿಲ್ಲ

ಗುಂಡ್ಲುಪೇಟೆ ಮಂಗಲ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮವಾಸ್ತವ್ಯ, ಹಲವು ಸಮಸ್ಯೆಗಳು ಬೆಳಕಿಗೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 10:20 IST
Last Updated 20 ಫೆಬ್ರುವರಿ 2022, 10:20 IST
ಗುಂಡ್ಲುಪೇಟೆ ತಾಲ್ಲೂಕಿನ ಮಂಗಲದಲ್ಲಿ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಉಪವಿಭಾಗಾಧಿಕಾರಿ  ಗಿರೀಶ್‌ ದಿಲೀಪ್‌ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಸೇರಿದಂತೆ ಇತರರು ಇದ್ದರು
ಗುಂಡ್ಲುಪೇಟೆ ತಾಲ್ಲೂಕಿನ ಮಂಗಲದಲ್ಲಿ ನಡೆದ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಉಪವಿಭಾಗಾಧಿಕಾರಿ  ಗಿರೀಶ್‌ ದಿಲೀಪ್‌ ಬದೋಲೆ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಸೇರಿದಂತೆ ಇತರರು ಇದ್ದರು   

ಗುಂಡ್ಲುಪೇಟೆ: ಕಾಡಂಚಿನ ಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಆನ್‌ಲೈನ್‌ ತರಗತಿಗೆ ತೊಂದರೆಯಾಗುತ್ತಿದೆ, ಅಕ್ರಮ ಮದ್ಯ ಮಾರಾಟದಿಂದ ಗಿರಿಜನ ಜನರ ಬದುಕು ದುಸ್ತರವಾಗಿದೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಸೇವೆ ಸಿಗುತ್ತಿಲ್ಲ, ಆಂಬುಲೆನ್ಸ್‌ ಇಲ್ಲದೆ ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ... ಎಂಬುದೂ ಸೇರಿದಂತೆ ಹಲವು ಸಮಸ್ಯೆಗಳನ್ನು ತಾಲ್ಲೂಕಿನ ಮಂಗಲ ಗ್ರಾಮದ ಗಿರಿಜನರು ಹಾಗೂ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರ ಮುಂದಿಟ್ಟರು.

ಮಂಗಲ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಚಾರುಲತಾ ಅವರು ಮಂಗಲ ಹಾಗೂ ಸುತ್ತಮುತ್ತ ಹಳ್ಳಿಗಳ ಜನರ ಅಹವಾಲುಗಳನ್ನು ಆಲಿಸಿದರು.

’ಪಂಚಾಯತಿ ಕೇಂದ್ರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ರಾತ್ರಿ ಸಮಯದಲ್ಲಿ ತುರ್ತು ಪರಿಸ್ಥಿತಿ ಎದುರಾದರೆ, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ ಇಲ್ಲದೆ ನಮಗೆ ತೊಂದರೆಯಾಗುತ್ತಿದೆ. ಖಾಸಗಿ ಇಲ್ಲವೇ ಬಾಡಿಗೆ ವಾಹನಗಳನ್ನು ಮಾಡಿಕೊಂಡು ಗುಂಡ್ಲುಪೇಟೆ ಆಸ್ಪತ್ರೆಗೆ ಹೋಗಬೇಕಿದೆ. ಸಾಧ್ಯವಾದರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೌಲಭ್ಯ ಕಲ್ಪಿಸಿ. ಇಲ್ಲದಿದ್ದರೆ, ಆ ಕೇಂದ್ರವೇ ಇಲ್ಲಿ ಬೇಡ‘ ಎಂದು ಗ್ರಾಮಸ್ಥರು ಹೇಳಿದರು.

ADVERTISEMENT

ನಡೆಯದ ಅಭಿವೃದ್ಧಿ: ಗ್ರಾಮಸ್ಥ ನಂಜುಂಡ ಅವರು ಮಾತನಾಡಿ, ’ತಾಲ್ಲೂಕಿನಲ್ಲಿರುವ ಇತರ ಎಲ್ಲ ಗ್ರಾಮ ಪಂಚಾಯಿತಿಗಳಿಗಿಂತ ನಮ್ಮ ಪಂಚಾಯತಿಯಲ್ಲಿ ಹೆಚ್ಚಿನ ಕಂದಾಯ ವಸೂಲಿ ಆಗುತ್ತದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಪಂಚಾಯತಿಗೆ ಬರುವ ಅಭಿವೃದ್ಧಿ ಅಧಿಕಾರಿಗಳು ಹಣ ಮಾಡುವ ಉದ್ದೇಶ ಹೊಂದಿದ್ದಾರೆಯೇ ವಿನಾ ಗ್ರಾಮಗಳ ಅಭಿವೃದ್ಧಿ ಬಗ್ಗೆ ಗಮನ ಹರಿಸುವುದಿಲ್ಲ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದೆ ಜನರು ಅನಾರೋಗ್ಯದಿಂದ ಬಳಲುತ್ತಿದ್ದಾರೆ‘ ಎಂದು ದೂರಿದರು.

’ಬಂಡೀಪುರದಿಂದ ಬಾಚಹಳ್ಳಿ ಗ್ರಾಮದವರೆಗೆ ಡಾಂಬರು ರಸ್ತೆ ಆಗಿಲ್ಲ. 25 ವರ್ಷದಿಂದ ಗುಂಡಿ ಬೀಳುತ್ತಲೇ ಇದೆ. ತುರ್ತು ಸಂದರ್ಭದಲ್ಲಿ ಸಕಾಲಕ್ಕೆ ತಲುಪಲು ಆಗುತ್ತಿಲ್ಲ‘ ಎಂದು ಗ್ರಾಮಸ್ಥ ಉಮೇಶ್ ಎಂಬುವವರು ಅಳಲು ತೋಡಿಕೊಂಡರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರವಿಕುಮಾರ್‌ ಅವರು ಪ್ರತಿಕ್ರಿಯಿಸಿ, ’ಬಂಡೀಪುರದಿಂದ ಅಂಕಹಳ್ಳಿವರೆಗೆ 23 ಕಿ.ಮೀ ದೂರ ಇದ್ದು, 12 ಕಿ.ಮೀ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಈಗ ಸರ್ಕಾರದಿಂದ ₹4.95 ಕೋಟಿ ಹಣ ಬಿಡುಗಡೆ ಆಗಿದೆ. ಆಯ್ದ ಭಾಗದಲ್ಲಿ ಕಾಮಗಾರಿ ಮಾಡಲಾಗುವುದು‘ ಎಂದರು.

ಇದನ್ನು ಆಕ್ಷೇಪಿಸಿದ ಗ್ರಾಮಸ್ಥರು, ’ಆಯ್ದಭಾಗದಲ್ಲಿ ಕಾಮಗಾರಿ ಮಾಡಬೇಡಿ. ಬಂಡೀಪುರದಿಂದಲೇ ರಸ್ತೆ ಕಾಮಗಾರಿ ಶುರುಮಾಡಿ‘ ಎಂದು ಪಟ್ಟು ಹಿಡಿದರು.ಜಿಲ್ಲಾಧಿಕಾರಿ ಅವರು ಕೂಡ, ‘ಜನರಿಗೆ ಉಪಯೋಗ ಆಗುವಂತೆ ಕೆಲಸ ಮಾಡಿ‘ ಎಂದು ಎಂಜಿನಿಯರ್‌ಗೆ ಸೂಚಿಸಿದರು.

’ಮಂಗಲ ಗ್ರಾಮ ಪಂಚಾಯತಿ ಕಾಡಿನೊಳಗೆ ಬರುವುದರಿಂದ ವಿದ್ಯುತ್ ಸಮಸ್ಯೆ ಮತ್ತು ನೆಟ್‌ವರ್ಕ್‌ ಸಮಸ್ಯೆ ಇದೆ. ಇದರಿಂದಾಗಿ ಮಕ್ಕಳಿಗೆ ಆನ್‌ಲೈನ್‌ ತರಗತಿಗಳಿಗೆ ಭಾಗವಹಿಸಲು ಆಗುತ್ತಿಲ್ಲ. ಈ ಭಾಗದಲ್ಲಿ ಟವರ್ ನಿರ್ಮಿಸಬೇಕು‘ ಎಂದು ಗ್ರಾಮ ಪಂಚಾಯತಿ ಸದಸ್ಯ ವಿಷಕಂಠ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಡಿತರ, ಪಿಂಚಣಿ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ, ತಹಶಿಲ್ದಾರ್ ರವಿಶಂಕರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿ ಶ್ರೀಕಂಠೇರಾಜೇ ಅರಸ್, ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜು ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಇದ್ದರು.

‘ಕಿರು ಉತ್ಪನ್ನ ಸಂಗ್ರಹಿಸಲು ಬಿಡುತ್ತಿಲ್ಲ’

ಆದಿವಾಸಿ ಮುಖಂಡರಾದ ಪುಟ್ಟಮ್ಮ ಮಾತನಾಡಿ, ‘ಗಿರಿಜನರು ಲ್ಯಾಂಪ್ಸ್ ಸೊಸೈಟಿ ಮೂಲಕ ಕಾಡಿನಲ್ಲಿ ಸಿಗುವ ಪಾಸೆ, ಜೇನು, ಮೇಣವನ್ನು ತೆಗೆಯಲು ಅರಣ್ಯ ಇಲಾಖೆಯವರು ಬಿಡುತ್ತಿಲ್ಲ. ಇದರಿಂದಾಗಿ ಕಿರು ಉತ್ಪನ್ನಗಳ ಸಂಗ್ರಹ ಕಷ್ಟವಾಗುತ್ತಿದೆ. ಕಾಡಿನಲ್ಲಿ ಹುಟ್ಟಿ ಬೆಳೆದ ನಮಗೆ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅನುಮತಿ ಕೊಡಿಸಬೇಕು’ ಎಂದು ಮನವಿ ಮಾಡಿದರು.

’ಅಧಿಕಾರಿಗಳ ಜತೆ ಚರ್ಚಿಸಿ ಬಗೆಹರಿಸುವೆ’

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಮಾತನಾಡಿ, ‘ಗ್ರಾಮಗಳಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿವೆ.ಇವುಗಳನ್ನು ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತನಾಡಿ ಬಗೆಹರಿಸುತೇನೆ’ ಎಂದು ಹೇಳಿದರು.

‘ಸರ್ಕಾರ ಹಾಗೂ ಪಂಚಾಯಿತಿಯಿಂದ ಬರುವ ಅನುದಾನದಲ್ಲಿ ಗ್ರಾಮವನ್ನು ಅಭಿವೃದ್ಧಿ ಮಾಡಬೇಕಿದೆ. ವಿದ್ಯುತ್, ಕುಡಿಯುವ ನೀರು, ಅರಣ್ಯ ಕಾಯ್ದೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.