ADVERTISEMENT

SSLC ಪರೀಕ್ಷೆ ಫಲಿತಾಂಶದಲ್ಲಿ ಇಳಿಕೆ: ಪಿಯು ಕಾಲೇಜುಗಳ ದಾಖಲಾತಿ ಗಣನೀಯ ಕುಸಿತ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 8:19 IST
Last Updated 10 ಜೂನ್ 2024, 8:19 IST
ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರ್ಥನೆ ಸಲ್ಲಿಸಿದ ವಿದ್ಯಾರ್ಥಿಗಳು
ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರ್ಥನೆ ಸಲ್ಲಿಸಿದ ವಿದ್ಯಾರ್ಥಿಗಳು   

‌ಯಳಂದೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಕುಸಿದಿದ್ದು, ಇದರ ಪರಿಣಾಮ ಪಿಯು ಕಾಲೇಜುಗಳ ಮೇಲೆ ಉಂಟಾಗಿದೆ. ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಈ ಬಾರಿ ಕುಸಿದಿದೆ. 

ಜಿಲ್ಲಾ ಮಟ್ಟದಲ್ಲಿ ಶೇ 40ರಷ್ಟು ಕುಸಿದಿದೆ ಎಂದು ಹೇಳುತ್ತಾರೆ ಪಿಯು ಇಲಾಖೆ ಅಧಿಕಾರಿಗಳು. 

ಪಟ್ಟಣದ ಪ್ರಥಮ ಪಿಯು ಕಾಲೇಜಿನಲ್ಲಿ  ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಿಗೆ ಶೇ 50ಕ್ಕಿಂತ ಕಡಿಮೆ ಸಂಖ್ಯೆಯ ಮಕ್ಕಳು ದಾಖಲಾಗಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ 3 ಪಿಯು ಕಾಲೇಜುಗಳಿವೆ. ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಿಳಾ ಜೆಎಸ್ಎಸ್, ವಿಜಿಕೆಕೆ ಕಾಲೇಜುಗಳಲ್ಲಿ ಪ್ರತಿ ವರ್ಷ 500ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮೇನಲ್ಲಿ ಪ್ರವೇಶಾತಿ ಪಡೆಯುತ್ತಿದ್ದರು. ವಿಜ್ಞಾನ ವಿಭಾಗಕ್ಕೆ ಬೇಡಿಕೆ ಇರುತ್ತಿತ್ತು, ನಂತರ ವಾಣಿಜ್ಯ, ಕಲಾ ವಿಷಯಗಳಿಗೆ ಮಕ್ಕಳು ಒಲವು ತೋರುತ್ತಿದ್ದರು. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಪಿಯು ಕಾಲೇಜಿಗೆ 74 ಹಾಗೂ ಜೆಎಸ್ಎಸ್ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳು ಪ್ರಥಮ ಪಿಯುಗೆ ಪ್ರವೇಶ ಪಡೆದಿದ್ದಾರೆ.

ತಾಲ್ಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 19 ಪ್ರೌಢಶಾಲೆಗಳಿಂದ 882 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದು,  640 ಮಂದಿ ಉತ್ತೀರ್ಣರಾಗಿದ್ದಾರೆ.

‘ಪ್ರತಿವರ್ಷ 400ಕ್ಕಿಂತ ಹೆಚ್ಚಿನ ಮಕ್ಕಳು ಪಟ್ಟಣದ ಕಾಲೇಜುಗಳಿಗೆ ಸೇರುತ್ತಿದ್ದರು. ಈ ಸಲ ಹತ್ತನೇ ವರ್ಗದ ಸರಾಸರಿ ಫಲಿತಾಂಶ ಕುಸಿದ ಪರಿಣಾಮ ಪಿಯು ಹಂತಕ್ಕೆ ಬರುವವರ ಪ್ರಮಾಣವೂ ಕುಸಿದಿದೆ’ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಸ್ಟೀವನ್ ಅಭಿಪ್ರಾಯಪಟ್ಟರು.

2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಥಮ ಪಿಯು ಪ್ರವೇಶಕ್ಕೆ 225, ವಿಜಿಕೆಕೆ 25, ಜೆಎಸ್ಎಸ್ ಕಾಲೇಜಿಗೆ 200ಕ್ಕಿಂತ ಹೆಚ್ಚು ಮಕ್ಕಳು ದಾಖಲಾಗಿದ್ದರು. ಒಟ್ಟಾರೆ ದಾಖಲಾತಿ 450-500 ನಡುವೆ ಇರುತ್ತಿತ್ತು.

‘ಎಸ್ಎಸ್‌ಎಲ್‌ಸಿಗೆ  ಇನ್ನೂ 2 ಪರೀಕ್ಷೆಗಳು ಬಾಕಿ ಉಳಿದಿವೆ. ಮತ್ತಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಸಾಧ್ಯತೆ ಇದ್ದು, ಪಿಯು ಕಾಲೇಜು ದಾಖಲಾತಿ ಹೆಚ್ಚಳವಾಗುವ ನಿರೀಕ್ಷೆ ಇದೆ’ ಎಂದು ಜೆಎಸ್ಎಸ್ ಕಾಲೇಜು ಪ್ರಾಂಶುಪಾಲ ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ತಾಲ್ಲೂಕಿನಲ್ಲಿ ಪ್ರತಿವರ್ಷ 900ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗುತ್ತಾರೆ. ಶೇ 60 ಕ್ಕಿಂತ ಹೆಚ್ಚಿನ ಸಂಖ್ಯೆಯ ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣದ ಕಾಲೇಜುಗಳಿಗೆ ದಾಖಲಾಗುತ್ತಾರೆ. ಉಳಿದ ಮಂದಿ ಕೊಳ್ಳೇಗಾಲ, ಚಾಮರಾಜನಗರ ಕಾಲೇಜುಗಳತ್ತ ವಲಸೆ ಹೋಗುತ್ತಾರೆ. ಕುದೇರು ಮತ್ತು ಸಂತೇಮರಹಳ್ಳಿ ವಿದ್ಯಾರ್ಥಿಗಳ ವಿಜ್ಞಾನ ಲ್ಯಾಬ್ ಬಳಕೆ ಮತ್ತು ವಾರ್ಷಿಕ ಪರೀಕ್ಷೆಗಳಿಗೆ ಯಳಂದೂರು ಸರ್ಕಾರಿ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತವೆ. ಕಳೆದ ಸಾಲಿನಲ್ಲಿ ಪ್ರಥಮ ಪಿಯುಗೆ 225 ಮಂದಿ ದಾಖಲಾಗಿದ್ದರೆ, ಈ ಬಾರಿ 3 ವಿಭಾಗಗಳಿಂದ 73 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ’ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎನ್.ಮಹೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. 

ವಿಜ್ಞಾನ, ವಾಣಿಜ್ಯದತ್ತ ಒಲವು: ಮಹಿಳಾ ಜೆಎಸ್ಎಸ್ ಕಾಲೇಜಿನಲ್ಲಿ ಹೆಚ್ಚಿನ ಮಕ್ಕಳು ಪ್ರಥಮ ಪಿಯುನಲ್ಲಿ ಮೊದಲ ಆದ್ಯತೆಯಾಗಿ ವಿಜ್ಞಾನ ವಿಷಯಕ್ಕೆ ಒತ್ತು ನೀಡಿದ್ದಾರೆ. ನಂತರ ವಾಣಿಜ್ಯ ಮತ್ತು ಕಲಾ ವಿಭಾಗಕ್ಕೆ ಸೇರಿದ್ದಾರೆ.

ಸರ್ಕಾರಿ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಕಲಾ ವಿಷಯಗಳಿಗೆ ಹೆಚ್ಚಿನ ಒಲವು ತೋರಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಎಸ್ಎಸ್ಎಲ್ಸಿ ಪರೀಕ್ಷೆ 2 ಮತ್ತು 3 ಫಲಿತಾಂಶದ ಆಧಾರದ ಮೇಲೆ ಪಿಯು ದಾಖಲಾತಿ ಪ್ರಮಾಣ ಏರಿಕೆ ಆಗುವ ನಿರೀಕ್ಷೆಯಲ್ಲಿ ಇದ್ದಾರೆ ಉಪನ್ಯಾಸಕರು.

ಜಿಲ್ಲೆಯ ಚಿತ್ರಣದಲ್ಲೂ ವ್ಯತ್ಯಾಸವಿಲ್ಲ

ಯಳಂದೂರು ತಾಲ್ಲೂಕು ಮಾತ್ರವಲ್ಲ ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ. ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ಹೇಳುತ್ತಾರೆ ಕಾಲೇಜುಗಳ ಪ್ರಾಂಶುಪಾಲರು.  ನಿರೀಕ್ಷೆಯಷ್ಟು ಅಂಕಗಳು ಬಾರದೆ ಇರುವವರು ಅನಿವಾರ್ಯವಾಗಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.  ‘ಪ್ರಥಮ ಪಿಯು ದಾಖಲಾತಿ ನಡೆಯುತ್ತಿದೆ. ಆದರೆ ಮೊದಲಿನ ವೇಗ ಕಾಣುತ್ತಿಲ್ಲ. ಪ್ರಕ್ರಿಯೆ ನಿಧಾನವಾಗುತ್ತಿದೆ. ಅಂದಾಜಿನ ಪ್ರಕಾರ ಈ ಬಾರಿ ದಾಖಲಾತಿ ಪ್ರಮಾಣ ಶೇ 40ರಷ್ಟು ಕಡಿಮೆಯಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆಯಾಗಿರುವುದು ಒಂದು ಕಾರಣವಾದರೆ 10ನೇ ತರಗತಿ ಮುಗಿಸಿದವರು ಡಿಪ್ಲೊಮಾ ಐಟಿಐಗೆ ಸೇರುತ್ತಿರುವುದು ಇನ್ನೊಂದು ಕಾರಣ. ಕೆಲವು ಪೋಷಕರು ಮಕ್ಕಳನ್ನು ಮೈಸೂರು ಬೆಂಗಳೂರು ಮಂಗಳೂರಿನಂತಹ ನಗರಗಳ ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಎಸ್‌ಎಸ್‌ಎಲ್‌ಸಿ 2ನೇ ಪರೀಕ್ಷೆ ಇದೇ 14ರಿಂದ ಆರಂಭವಾಗಲಿದೆ. ಅದರ ಫಲಿತಾಂಶ ಬಂದ ನಂತರ ಮತ್ತಷ್ಟು ಮಕ್ಕಳು ಪಿಯುಸಿಗೆ ಸೇರುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.