ADVERTISEMENT

ಸಾಲು ಸಾಲು ರಜೆ: ಕೇರಳ, ತಮಿಳುನಾಡಿಗೆ ಪ್ರವಾಸಿಗರ ಲಗ್ಗೆ

ಚೆಕ್‌ಪೋಸ್ಟ್‌ಗಳ ಬಳಿ ಸಾಲುಗಟ್ಟಿ ನಿಲ್ಲುತ್ತಿರುವ ವಾಹನಗಳು: ಹಸಿರು ಸುಂಕ ವಸೂಲಿ ನಿಧಾನಗತಿಗೆ ಬೇಸರ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 0:01 IST
Last Updated 2 ನವೆಂಬರ್ 2024, 0:01 IST
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಸಾಲುಗಟ್ಟಿ ನಿಂತಿರುವ ವಾಹನಗಳು
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಸಾಲುಗಟ್ಟಿ ನಿಂತಿರುವ ವಾಹನಗಳು   

ಗುಂಡ್ಲುಪೇಟೆ: ದೀಪಾವಳಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ವಾರಾಂತ್ಯದ ರಜೆಗಳು ಒಟ್ಟಾಗಿ ಬಂದಿರುವ ಹಿನ್ನೆಲೆಯಲ್ಲಿ ರಜಾ ದಿನಗಗಳನ್ನು ಕಳೆಯಲು ಸಾರ್ವಜನಿಕರು ಪ್ರವಾಸಿತಾಣಗಳಿಗೆ ಲಗ್ಗೆ ಇಡುತ್ತಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಿಗೆ ಭಾರಿ ಸಂಖ್ಯೆಯ ಪ್ರವಾಸಿಗರು ಬರುತ್ತಿರುವುದರಿಂದ ಹೆದ್ದಾರಿ ತುಂಬ ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಾದುಹೋಗಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳು ನೆರೆಯ ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವುದರಿಂದ ಉಭಯ ರಾಜ್ಯಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಭಾರಿ ಸಂಖ್ಯೆಯ ಪ್ರವಾಸಿಗರು ತೆರಳುತ್ತಿದ್ದಾರೆ.

ADVERTISEMENT

ಹೆದ್ದಾರಿಗಳಲ್ಲಿ ವಾಹನಗಳ ಸಂಖ್ಯೆ ಎಂದಿಗಿಂತ ಐದತ್ತು ಪಟ್ಟು ಹೆಚ್ಚಾಗಿರುವುದು ಕಂಡುಬರುತ್ತಿದೆ. ತಾಲ್ಲೂಕಿನ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಹಸಿರು ಸುಂಕ ವಸೂಲಿ ಮಾಡುವ ಬಳಿ ಒಂದು ಕಿ.ಮೀಗೂ ಉದ್ದದವರೆಗೂ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬರುತ್ತಿವೆ.

ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಮತ್ತು 67ರಲ್ಲಿ ಮೇಲುಕಾಮನಹಳ್ಳಿ ಮತ್ತು ಮದ್ದೂರು ಚೆಕ್‍ಪೋಸ್ಟ್‌ಗಳಲ್ಲಿ ಕಾರು, ಜೀಪು ಇತರೆ ಲಘುವಾಹನಗಳಿಗೆ 20 ಮತ್ತು ದೊಡ್ಡ ವಾಹನಗಳಿಂದ 50 ಹಸಿರು ಸುಂಕ ವಸೂಲಿ ಮಾಡಲಾಗುತ್ತಿದೆ.

ಹಸಿರು ಸುಂಕ ವಸೂಲಿಗೆ ಆಕ್ಷೇಪವಿಲ್ಲ. ಆದರೆ, ವಸೂಲಿಗಾಗಿ ಅರಣ್ಯ ಇಲಾಖೆಯ ಒಬ್ಬರು ಅಥವಾ ಇಬ್ಬರು ನೌಕರರನ್ನು ನಿಯೋಜನೆ ಮಾಡಿರುವುದರಿಂದ ಸಿಬ್ಬಂದಿ ಕೊರತೆಯಿಂದ ಸುಲಭವಾಗಿ ವಾಹನಗಳು ಚೆಕ್‌ಪೋಸ್ಟ್ ದಾಟಲು ಸಾದ್ಯವಾಗುತ್ತಿಲ್ಲ.

ಹಬ್ಬ, ಹರಿದಿನ, ಸರ್ಕಾರಿ ರಜೆಗಳ ಸಂದರ್ಭ ಅರಣ್ಯ ಇಲಾಖೆ ಟಿಕೆಟ್ ವಿತರಣೆಗೆ ಪರ್ಯಾಯ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಪ್ರವಾಸಿಗರು ಗಂಟೆಗಟ್ಟಲೆ ಚೆಕ್‌ಪೋಸ್ಟ್‌ನಲ್ಲಿ ಕಾಯಬೇಕಾಗುತ್ತದೆ. ಇದರಿಂದ ನಿಗದಿತ ಸ್ಥಳಕ್ಕೆ ಸರಿಯಾದ ಸಮಯದಲ್ಲಿ ಮುಟ್ಟಲಾಗುವುದಿಲ್ಲ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದರು.

‌ಟಿಕೆಟ್ ಯಂತ್ರದಿಂದ ಹಸಿರು ಸುಂಕ ವಸೂಲಿ ನೀಡುವ ಪ್ರಕ್ರಿಯೆ ನಿಧಾನಗತಿ ಸಾಗುತ್ತಿರುವುದರಿಂದ ಕಿ.ಮೀ ಉದ್ದದವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಗಿದೆ. ಅರಣ್ಯ ಪ್ರದೇಶವಾಗಿರುವುದರಿಂದ ಶೌಚಕ್ಕೂ ಹೋಗಲಾಗದೆ ಸಂಕಟ ಅನುಭವಿಸಬೇಕಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳ ಟೋಲ್‍ಗಳಲ್ಲಿ ಫಾಸ್ಟ್‌ಟ್ಯಾಗ್ ಮೂಲಕ ಹಣ ಕಡಿತವಾಗುವಂತೆ ಇಲ್ಲಿಯೂ ಹಸಿರು ತೆರಿಗೆ ವಸೂಲಿ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಪ್ರವಾಸಿಗರು.

ಪ್ರವಾಸಿಗರಿಗೆ ತೊಂದರೆಯಾಗದಂತೆ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಚೆಕ್‌ಪೋಸ್ಟ್‌ಗಳಲ್ಲಿ ಅಳವಡಿಸಲು ತಿರ್ಮಾನಿಸಲಾಗಿದ್ದು ಕೆಲಸ ಆರಂಭಿಸಲಾಗಿದೆ. ಶೀಘ್ರ ಫಾಸ್ಟ್‌ಟ್ಯಾಗ್ ವ್ಯವಸ್ಥೆ ಆರಂಭವಾಗಲಿದೆ.
ಪ್ರಭಾಕರನ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ

ಜೀವಕ್ಕೆ ಕುತ್ತು

ಕೆಕ್ಕೆನಹಳ್ಳ ಚೆಕ್‌ಪೋಸ್ಟ್ ಬಳಿಯ ಅರಣ್ಯ ಮಧ್ಯೆ ಇರುವ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ಪ್ರಾಣಿಗಳು ರಸ್ತೆ ದಾಟಲು ಭಯ ಪಡುತ್ತಿವೆ. ಕೆಲವು ಪ್ರವಾಸಿಗರು ವಾಹನಗಳಿಂದ ಇಳಿದು ಪ್ರಾಣಿಗಳ ಪೋಟೋ ತೆಗೆಯುವುದು ಆಹಾರ ನೀಡುವುದನ್ನು ಮಾಡುತ್ತಿದ್ದಾರೆ. ಇದರಿಂದ ಪ್ರಾಣಿಗಳ ಪ್ರಾಣಕ್ಕೆ ಹಾಗೂ ಪ್ರವಾಸಿಗರ ಪ್ರಾಣಕ್ಕೂ ಕುತ್ತಾಗುವ ಅಪಾಯವಿದೆ. –ರಾಘವೇಂದ್ರ ಪರಿಸರ ಪ್ರೇಮಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.