ಚಾಮರಾಜನಗರ: ಜನ ವಿರೋಧಿಯಾಗಿರುವ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿಯ ಚುನಾವಣೆಯಲ್ಲಿ ಜನರು ಸೋಲಿಸಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಗುರುವಾರ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ನಮ್ಮ ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಟ್ಟಿಲ್ಲ. ರಾಜ್ಯದ ಜಿಎಸ್‌ಟಿ ಪಾಲನ್ನು ಸಮರ್ಪಕವಾಗಿ ನೀಡಿಲ್ಲ. ಬರ ಪರಿಹಾರದ ಹಣವನ್ನೂ ಕೊಟ್ಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವರು ಖುದ್ದಾಗಿ ಭೇಟಿಯಾಗಿ ಮನವಿ ಮಾಡಿದ್ದರೂ, ಹಣ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.
ಬೊಕ್ಕಸಕ್ಕೆ ನಷ್ಟ: ‘ಅನ್ನ ಭಾಗ್ಯ ಯೋಜನೆಗೆ ನಾವು ಹೆಚ್ಚುವರಿ ಅಕ್ಕಿ ಕೇಳಿದಾಗ ಕೊಡುವುದಾಗಿ ಒಪ್ಪಿಕೊಂಡು ನಂತರ ಕೈಕೊಟ್ಟಿತ್ತು. ದಾಸ್ತಾನು ಹೆಚ್ಚಾದಾಗ ಕೇಂದ್ರ ಸರ್ಕಾರ ಭಾರತ್ ಅಕ್ಕಿ ಎಂದು ₹29ಕ್ಕೆ ಜನರಿಗೆ ಮಾರಾಟ ಮಾಡಿತ್ತು. ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್‌ನಂತಹ ರಾಜ್ಯಗಳಿಂದ ಈ ಅಕ್ಕಿಯನ್ನು ಕೆಜಿಗೆ ₹40ರಂತೆ ಖರೀದಿ ಮಾಡಲಾಗಿತ್ತು. ನಂತರ ಕೆಜಿಗೆ ₹19 ಬೆಲೆ ನಿಗದಿ ಮಾಡಿ, ಮಾರಾಟ ಮಾಡುವ ಏಜೆನ್ಸಿಗಳಿಗೆ ಪಾಲಿಶ್, ಸಾಗಣೆ ಸೇರಿದಂತೆ ಇತರೆ ನಿರ್ವಹಣೆ ವೆಚ್ಚವಾಗಿ ₹10 ನೀಡಿ, 10 ಲಕ್ಷ ಟನ್‌ಗಳಷ್ಟು ಅಕ್ಕಿಯನ್ನು ಕೆಜಿಗೆ ₹29ಕ್ಕೆ ಮಾರಾಟ ಮಾಡಿತ್ತು. ಇದರಿಂದ ಬೊಕ್ಕಸಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ’ ಎಂದು ಮುನಿಯಪ್ಪ ಹೇಳಿದರು.
‘ಜನಪರ ಉದ್ದೇಶದಿಂದ ಅಕ್ಕಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ನಮ್ಮ ಅನ್ನ ಭಾಗ್ಯ ಯೋಜನೆ ಜನಪರವಾಗಿರಲಿಲ್ಲವೇ? ಅದಕ್ಕೂ ಅಕ್ಕಿ ಕೊಡಬಹುದಿತ್ತಲ್ಲಾ’ ಎಂದು ಪ್ರಶ್ನಿಸಿದರು.
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ, ನುಡಿದಂತೆ ನಡೆದಿದೆ. ಅಧಿಕಾರಕ್ಕೆ ಬಂದ ತಕ್ಷಣ, ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ರಾಜ್ಯದ ಏಳು ಕೋಟಿ ಜನರ ಪೈಕಿ ನಾಲ್ಕು ಕೋಟಿ ಜನರು ಈ ಯೋಜನೆಗಳಿಂದ ಅನುಕೂಲ ಪಡೆದುಕೊಳ್ಳುತ್ತಿದ್ದೇವೆ. 1.20 ಕೋಟಿ ಪಡಿತರ ಚೀಟಿದಾರರ ಕುಟುಂಬಗಳಿಗೆ ಅನ್ನಭಾಗ್ಯದ ಹೆಚ್ಚುವರಿ ಐದು ಕೆಜಿ ಅಕ್ಕಿಯ ಬದಲು ಒಬ್ಬರಿಗೆ ₹170 ನೀಡುತ್ತಿದ್ದೇವೆ’ ಎಂದರು.
‘ಚಾಮರಾಜನಗರ ಕ್ಷೇತ್ರದಲ್ಲಿ ಸುನಿಲ್ ಬೋಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ಜನರು ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ’ ಎಂದರು.
ಶಾಸಕ ಎ.ಆರ್.ಕೃಷ್ಣಮೂರ್ತಿ, ವಿಧಾನಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ವಿ.ಚಂದ್ರು, ಮಹಮ್ಮದ್ ಅಸ್ಗರ್ ಮುನ್ನಾ, ಮುಖಂಡರಾದ ಎಂ.ಶಿವಮೂರ್ತಿ, ಬಸವರಾಜು ಭಾಗವಹಿಸಿದ್ದರು.
ಮತಯಾಚನೆ: ಸುದ್ದಿಗೋಷ್ಠಿಯ ನಂತರ ಸಚಿವ ಮುನಿಯಪ್ಪ ಅವರು ನಗರದ ಬಾಬು ಜಗಜೀವನರಾಂ ಬಡಾವಣೆಯಲ್ಲಿ ಬೋಸ್ ಪರವಾಗಿ ಮತಯಾಚನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.