ಚಾಮರಾಜನಗರ: ಮೂರು ವಾರಗಳಿಂದ ನಗರದಲ್ಲಿ ತಾಟಿ ನಿಂಗು (ತಾಳೆ ಹಣ್ಣು) ಸದ್ದು ಮಾಡುತ್ತಿದ್ದು, ಭರ್ಜರಿಯಾಗಿ ವ್ಯಾಪಾರವಾಗುತ್ತಿದೆ.
ತಮಿಳುನಾಡಿನ ವ್ಯಾಪಾರಿಗಳು ಸತ್ಯಮಂಗಲ ಭಾಗದಿಂದ ಈ ಹಣ್ಣನ್ನು ತಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಚಳಿಗಾಲ–ಬೇಸಿಗೆಗಾಲದಲ್ಲಿ ಮಾತ್ರ ಸಿಗುವ ತಾಟಿ ನಿಂಗು ರುಚಿ ಸವಿಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.
ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣನ್ನು ತಮಿಳು ಭಾಷೆಯಲ್ಲಿ ನಿಂಗು ಎಂದು ಕರೆಯುತ್ತಾರೆ. ಚಾಮರಾಜನಗರದಲ್ಲಿ ತಾಟಿ ನಿಂಗು ಎಂಬ ಹೆಸರಿದೆ. ತಾಳೆ ಹಣ್ಣು ಎಂದೂ ಕರೆಯಲಾಗುತ್ತದೆ. ಒಂದು ತೊಳೆಗೆ (ಪೀಸ್) ₹ 10ರಂತೆ ಮಾರುತ್ತಿದ್ದಾರೆ. ಒಂದು ಹಣ್ಣು (ಎರಡು ಇಲ್ಲವೇ ಮೂರು ತೊಳೆ ಇರುತ್ತದೆ) ಹಾಗೂ ಅದರ ನೀರನ್ನು ಜೊತೆಯಾಗಿ ₹ 50ಕ್ಕೆ ನೀಡುತ್ತಿದ್ದಾರೆ.
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆ, ಸತ್ಯಮಂಗಲ ರಸ್ತೆ, ನಂಜನಗೂಡು ರಸ್ತೆಗಳಲ್ಲಿ ತಾಟಿ ನಿಂಗುವನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದಾರೆ. ಎಳನೀರಿನಷ್ಟೇ ಔಷಧ ಗುಣವನ್ನು ಹೊಂದಿರುವ ಈ ಹಣ್ಣನ್ನು, ಚಳಿ ವಾತಾವರಣದ ನಡುವೆಯೂ ಗ್ರಾಹಕರು ಇಷ್ಟ ಪಟ್ಟು ಖರೀದಿಸುತ್ತಿದ್ದಾರೆ.
‘ತಾಟಿ ನಿಂಗು ಸೀಸನ್ ಈಗ ಆರಂಭಗೊಂಡಿದ್ದು, ಪ್ರಖರ ಬಿಸಿಲಿನ ವಾತಾವರಣದಲ್ಲಿ ಬೇಡಿಕೆ ಹೆಚ್ಚಿರುತ್ತದೆ. ನಾವು ಸತ್ಯಮಂಗಲದಿಂದ ಬಂದು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಬೆಳಿಗ್ಗೆ 9, 10 ಗಂಟೆಗೆ ಬಂದರೆ, ಸಂಜೆ 4 ಗಂಟೆ ಹೊತ್ತಿಗೆ ಎಲ್ಲ ವ್ಯಾಪಾರವಾಗುತ್ತದೆ’ ಎನ್ನುತ್ತಾರೆ ವ್ಯಾಪಾರಿ ವೆಂಕಟೇಶ್.
ಮಾರುಕಟ್ಟೆಗೆ ಬಂದ ಕಪ್ಪು ದ್ರಾಕ್ಷಿ: ಹಣ್ಣಿನ ಮಾರುಕಟ್ಟೆಗೆ ಕಪ್ಪು ದ್ರಾಕ್ಷಿ ಬಂದಿದೆ. ಹಸಿರು ಸೀಡ್‌ಲೆಸ್ ದ್ರಾಕ್ಷಿ ಕೂಡ ಬಂದಿದೆ. ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವುದರಿಂದ ಬೆಲೆ ಕೊಂಚ ದುಬಾರಿಯಾಗಿದೆ.
ನಗರದ ಹಾಪ್‌ಕಾಮ್ಸ್‌ನಲ್ಲಿ ಕಪ್ಪು ದ್ರಾಕ್ಷಿ ಕೆ.ಜಿ ಗೆ ₹ 120 ಇದೆ. ಸೀಡ್‌ಲೆಸ್ ಹಸಿರು ದ್ರಾಕ್ಷಿಗೆ ₹ 160 ಇದೆ. ಗ್ರಾಹಕರಿಂದ ನಿಧಾನವಾಗಿ ಬೇಡಿಕೆ ಬರುತ್ತಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.
ಎರಡು ರೀತಿಯ ಕಿತ್ತಳೆ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬೆಲೆ ₹ 100ರಿಂದ ₹ 120ರವರೆಗೆ ಇದೆ. ದಾಳಿಂಬೆ ದುಬಾರಿ ಬೆಲೆ ಮುಂದುವರಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹ 160ರಿಂದ ₹ 180ರವರೆಗೆ ಇದೆ.
ಈ ವಾರ ಪಚ್ಚೆ ಬಾಳೆ ಬೆಲೆಯಲ್ಲಿ ಏರಿಕೆಯಾಗಿದೆ. ಕೆಜಿಗೆ ₹ 30ರಿಂದ ₹ 40ಕ್ಕೆ ಹೆಚ್ಚಳವಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.
ತರಕಾರಿಗಳ ಬೆಲೆ ಸ್ಥಿರ: ಎರಡು ವಾರಗಳಿಂದ ತರಕಾರಿಗಳ ಬೆಲೆ ಸ್ಥಿರವಾಗಿದೆ. ಟೊಮೆಟೊ (₹20), ಕ್ಯಾರೆಟ್, ಬೀನ್ಸ್ (₹30), ಆಲೂಗಡ್ಡೆ (₹40), ಈರುಳ್ಳಿ (₹30), ಮೂಲಂಗಿ (₹20) ಧಾರಣೆಯಲ್ಲಿ ವ್ಯತ್ಯಾಸವಾಗಿಲ್ಲ.
ತೊಗರಿಕಾಯಿ ಸೀಸನ್ ಮುಗಿಯುತ್ತಾ ಬಂದಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಸಿಗುತ್ತಿಲ್ಲ. ಹಸಿರು ಬಟಾಣಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಕೆ.ಜಿಗೆ ₹ 60ಕ್ಕೆ ಮಾರಾಟವಾಗುತ್ತಿದೆ. ಅವರೆಕಾಯಿ ಬೆಲೆ ₹ 50 ಇದೆ.
ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಚಿಲ್ಲರೆ ಅಂಗಡಿಯಲ್ಲಿ ₹ 180ರಿಂದ ₹ 200ರವರೆಗೆ ಇದೆ. ಮಟನ್ ₹ 560 ಇದೆ.
ಸಂಕ್ರಾಂತಿ: ಹೂವಿಗೆ ಬೇಡಿಕೆ ನಿರೀಕ್ಷೆ
ಸಂಕ್ರಾಂತಿ ಹಬ್ಬಕ್ಕೆ ಇನ್ನೂ ಕೆಲವೇ ದಿನ ಇರುವುದರಿಂದ ಹೂವಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ.
ಎರಡು ವಾರಗಳಿಂದ ಹೂವುಗಳ ಧಾರಣೆ ಸ್ಥಿರವಾಗಿದೆ. ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರಕ್ಕೆ ಬೇಡಿಕೆ ಇದ್ದು, ಕೆ.ಜಿ ಹೂವಿಗೆ ₹ 800ರಿಂದ ₹ 1000ದವರೆಗೆ ಇದೆ.
ಕಾಕಡಕ್ಕೆ ₹ 100ರಿಂದ ₹ 120ರವರೆಗೆ ಇದೆ. ಸೇವಂತಿಗೆ ಕೆ.ಜಿಗೆ ₹ 100 ಮಾರಾಟವಾಗುತ್ತಿದೆ. ಚೆಂಡು ಹೂವಿಗೆ ಮಾತ್ರ ಬೇಡಿಕೆ ಕಡಿಮೆಯಾಗಿದೆ.
‘ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹೂವುಗಳಿಗೆ ಬೇಡಿಕೆ ಇರುತ್ತದೆ. ಆ ಸಂದರ್ಭದಲ್ಲಿ ಬೆಲೆಯೂ ಹೆಚ್ಚಿರುತ್ತದೆ. ಇನ್ನು ಎರಡು ಮೂರು ದಿನದಲ್ಲಿ ಹೂವುಗಳ ಮಾರಾಟ ಬಿರುಸು ಪಡೆಯುವ ನಿರೀಕ್ಷೆ ಇದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.