ADVERTISEMENT

ಯಳಂದೂರು: ಭತ್ತದ ಹುಲ್ಲಿನ ಪಿಂಡಿಗೆ ಹೆಚ್ಚಿದ ಬೇಡಿಕೆ

ಭತ್ತದ ಕೊಯ್ಲೋತ್ತರ ಚಟುವಟಿಕೆ ಬಿರುಸು: ಮೇವು ಸಂಗ್ರಹಕ್ಕೆ ಮುಂದಾದ ರೈತರು

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 5:30 IST
Last Updated 12 ಜನವರಿ 2024, 5:30 IST
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ಹೊರವಲಯದಲ್ಲಿ ಯಾಂತ್ರೀಕೃತ ಭತ್ತದ ಪಿಂಡಿಗಳನ್ನು ಕೊಳ್ಳಲು ಮುಂದಾಗ ಜಾನುವಾರು ಸಾಕಣೆದಾರರು  
ಯಳಂದೂರು ತಾಲ್ಲೂಕಿನ ಮದ್ದೂರು ಗ್ರಾಮದ ಹೊರವಲಯದಲ್ಲಿ ಯಾಂತ್ರೀಕೃತ ಭತ್ತದ ಪಿಂಡಿಗಳನ್ನು ಕೊಳ್ಳಲು ಮುಂದಾಗ ಜಾನುವಾರು ಸಾಕಣೆದಾರರು     

ಯಳಂದೂರು: ಗಡಿ ಜಿಲ್ಲೆಯಲ್ಲಿ ನೀರಾವರಿ ಭಾಗದ ಭತ್ತದ ಹುಲ್ಲಿನ ಪಿಂಡಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಮುಂಗಾರು ಕೊರತೆಯಿಂದ ಸಾಗುವಳಿದಾರರಿಗೆ ಬೆಳೆ ಕೈಸೇರಿದ್ದು ಕಡಿಮೆ. ಇಳುವರಿ ಕಡಿಮೆಯಾದರೂ ಭತ್ತದ ಹುಲ್ಲಿಗೆ ಬೇಡಿಕೆ ಇರುವುದನ್ನು ಗುರುತಿಸಿ, ಯಾಂತ್ರೀಕೃತ ಪಿಂಡಿ ಕಟ್ಟಿ, ಮಾರಾಟ ಮಾಡುವ ಮೂಲಕ ರೈತರು ಅಲ್ಪಸ್ವಲ್ಪ ವರಮಾನ ಗಳಿಸುತ್ತಿದ್ದಾರೆ. 

ಬರಗಾಲದ ಬವಣೆಯಿಂದ ಬೇಸತ್ತಿರುವ ಬೇರೆ ತಾಲ್ಲೂಕುಗಳು ಮತ್ತು ಜಿಲ್ಲೆಯ ಗಡಿಭಾಗದ  ಕೃಷಿಕರು ತಮ್ಮ ದನಕರುಗಳಿಗೆ ಮೇವು ಒದಗಿಸಲು ಸಿಲಿಂಡರ್ ಆಕೃತಿಯ ಭತ್ತದ ಹುಲ್ಲನ್ನು ಕೊಳ್ಳಲು ಮುಂದಾಗಿದ್ದು, ಸ್ಥಳೀಯ ಭತ್ತ ಬೆಳೆದ ರೈತರಿಗೆ ವರದಾನವಾಗಿದೆ.

ADVERTISEMENT

ಟ್ರಾಕ್ಟರ್ ಪಿಂಡಿ ಕಟ್ಟುವ ಯಂತ್ರಗಳು ಇಲ್ಲಿಲ್ಲ. ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಿಂದ ಬಾಡಿಗೆಗೆ ತಂದು ಬಳಸುತ್ತಿದ್ದಾರೆ. ಯಾಂತ್ರಿಕೃತ ಪದ್ಧತಿಯಲ್ಲಿ ಎಕರೆವಾರು 35 ರಿಂದ 40 ಭತ್ತದ ಹುಲ್ಲಿನ ಪಿಂಡಿಗಳು ಸಿದ್ಧವಾಗುತ್ತವೆ. 1 ಪಿಂಡಿ ಕಟ್ಟಲು ₹50 ದರ ನಿಗದಿಪಡಿಸಿದ್ದು, ಗದ್ದೆಯ ನಿರ್ವಹಣೆಯೂ ಸುಲಭವಾಗಲಿದೆ.

‘2 ಎಕರೆಯಲ್ಲಿ ಯಂತ್ರದಿಂದ 80 ಭತ್ತದ ಹುಲ್ಲಿನ ಪಿಂಡಿ ಕಟ್ಟಬಹುದು. ಪ್ರತಿ ಪಿಂಡಿಗೆ ₹120 ಬೆಲೆ ಇದೆ. ಯಂತ್ರದ ಮಾಲೀಕರಿಗೆ 1 ಪಿಂಡಿಗೆ ₹50 ಬಾಡಿಗೆ ನೀಡಬೇಕು. ರೈತರು ಪ್ರತಿ ಪಿಂಡಿಗೆ ಖರ್ಚು ಕಳೆದು ₹70 ಪಡೆಯುತ್ತಾರೆ. ಎಕರೆಗೆ ಗುಣಮಟ್ಟದ ಆಧಾರದ ಮೇಲೆ ₹3000 ₹4,000 ನಿವ್ವಳ ಆದಾಯ ಗಳಿಸಬಹುದು’ ಎನ್ನುತ್ತಾರೆ ಮದ್ದೂರು ಕೃಷಿಕ ನಂಜುಂಡಸ್ವಾಮಿ.

‘ಸಾಂಪ್ರದಾಯಿಕವಾಗಿ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ ಟ್ರೇಲರ್‌ಗೆ ಏರಿಸಿ, ಹಗ್ಗ ಬಿಗಿದು ಸಾಗಣೆ ಮಾಡಬೇಕಿತ್ತು. ಇದು ಹೆಚ್ಚಿನ ವೆಚ್ಚಕ್ಕೆ ಕಾರಣವಾಗಿತ್ತು. ಸಂರಕ್ಷಣೆಯ ಸವಾಲು   ಎದುರಾಗಿತ್ತು. ಆದರೆ, ಪಿಂಡಿ ಕಟ್ಟಿ ಸುಲಭವಾಗಿ ಸಾಗಿಸಬಹುದು. 1 ಟ್ರಾಕ್ಟರ್ ಲೋಡಿನಲ್ಲಿ 40 ರಿಂದ 45 ಪಿಂಡಿ ಒಮ್ಮೆಗೆ ಏರಿಸಿ, ಸಾಗಿಸಬಹುದು’ ಎಂದು ಚಾಮರಾಜನಗರದ ಕೆಕೆ ಹುಂಡಿಯ ರೈತ ಗೋವಿಂದೇಗೌಡ ಹೇಳಿದರು.

ತಾಲ್ಲೂಕಿನ ಮದ್ದೂರು, ಅಗರ, ಗುಂಬಳ್ಳಿ ಬಯಲಿನಲ್ಲಿ ಕೊಯ್ಲು ಮುಗಿದಿದೆ. ಈಗ ತಾಕಿನಲ್ಲಿ ಬಿದ್ದ ಹುಲ್ಲು ಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಶೇ 90 ಭಾಗ ಕಟಾವು ಪೂರ್ಣಗೊಂಡಿದ್ದು, ಭತ್ತದ ಹುಲ್ಲಿಗೆ ದಿಢೀರ್ ಬೇಡಿಕೆ ಕಂಡುಬಂದಿದೆ.

‘ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ದನಕರುಗಳಿಗೆ ಮೇವು ಸಿಗುತ್ತಿಲ್ಲ. ಬೆಳೆ ಒಣಗಿದ್ದು, ಮುಂಬರುವ ಬೇಸಿಗೆಗೆ ಜಾನುವಾರುಗಳಿಗೆ ಆಹಾರದ ಸಮಸ್ಯೆ ಕಾಡಲಿದೆ. ಭತ್ತದ ಹುಲ್ಲು ಖರೀದಿಗೆ ನೀರಾವರಿ ಪ್ರದೇಶದತ್ತ ಹೆಜ್ಜೆ ಇಟ್ಟಿದ್ದೇವೆ’ ಎಂದು ಗೋವಿಂದೇಗೌಡ ಹೇಳಿದರು. 

ಯಂತ್ರದ ಬೆಲೆ ₹3 ಲಕ್ಷ

‘ಹುಲ್ಲು ಕಟ್ಟುವ ಯಂತ್ರಕ್ಕೆ ₹3 ಲಕ್ಷ ವೆಚ್ಚ ತಗುಲುತ್ತದೆ. ಕಟಾವಿನ ಸಮಯದಲ್ಲಿ ಬೇಡಿಕೆ ಹೆಚ್ಚು. ಹಗಲು ರಾತ್ರಿ ದುಡಿದರೆ 400 ರಿಂದ 500 ಪಿಂಡಿ ಕಟ್ಟಬಹುದು. ಬರಗಾಲ ಎದುರಾದರೆ ಯಂತ್ರಗಳಿಗೆ ಕೆಲಸ ಸಿಗದು. ಹಾಗಾಗಿ ಯಂತ್ರ ಕೊಳ್ಳುವುದಕ್ಕಿಂತ ಬಾಡಿಗೆಗೆ ತಂದು ಕೆಲಸ ಮಾಡಿದರೆ ಸ್ವಲ್ಪ ವರಮಾನ ಕೈಸೇರುತ್ತದೆ’ ಎಂದು ತಮಿಳುನಾಡಿನ ಸೆಲ್ವಂ ಹೇಳಿದರು.

‘ತಾಲ್ಲೂಕಿನಲ್ಲಿ 780 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಕೊಯ್ಲಿನ ನಂತರ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಿದ್ದು ಉದ್ಯಮದ ರೂಪದ ಸ್ವರೂಪ ಪಡೆದಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು. ಬರಗಾಲದ ಕಾರಣಕ್ಕೆ ಮೇವನ್ನು ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಮಾಡುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಒಣಹುಲ್ಲು ಹೊರಗಡೆ ಹೋಗುತ್ತಿಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.