ಚಾಮರಾಜನಗರ: ರಾಜ್ಯ ಸರ್ಕಾರವು ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ದೇವಾಂಗ ಅಭಿವೃದ್ದಿ ನಿಗಮ ಹಕ್ಕು ಹೋರಾಟ ಸಮಿತಿ ಹಾಗೂ ದಕ್ಷಿಣ ಭಾರತ ದೇವಾಂಗ ಸೇವಾ ಸಂಘದ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ದಕ್ಷಿಣ ಭಾರತ ದೇವಾಂಗ ಸೇವಾ ಸಂಘದ ಅಧ್ಯಕ್ಷ ವೆಂಕಟೇಶ್ ಅವರು ಮಾತನಾಡಿ, ‘ನೇಕಾರಿಕೆಯನ್ನು ಕುಲಕಸುಬಾಗಿ ಸ್ವೀಕರಿಸಿರುವ ದೇವಾಂಗ ಸಮುದಾಯದವು ಹಲವು ಕಷ್ಟಗಳನ್ನು ಅನುಭವಿಸುತ್ತಿದೆ. ಸಮುದಾದಯದ ಬಹುತೇಕ ಕುಟುಂಬಗಳು ಬದುಕಿಗೆ ನೇಕಾರಿಕೆಯನ್ನೇ ಅವಲಂಬಿಸಿದ್ದಾರೆ. ಅದು ಬಿಟ್ಟು ಅವರಿಗೆ ಬೇರೆನೂ ತಿಳಿದಿಲ್ಲ. ದುಬಾರಿ ಬೆಲೆಯ ಕಚ್ಚಾ ಸಾಮಗ್ರಿಗಳನ್ನು ಬಳಸಿ ನೇಯ್ದ ಸೀರೆ ಹಾಗೂ ಬಟ್ಟೆಗಳನ್ನು ಕಡಿಮೆ ಬೆಲೆಗೆ ಮಾರುವಂತಹ ಪರಿಸ್ಥಿತಿ ಇದೆ. ಕೇವಲ ಕೂಲಿಯಾಗಿ ನೇಯುತ್ತಿರುವ ಸಹಸ್ರಾರು ಹೆಣ್ಣಗುಮಕ್ಕಳು, ಗಂಡು ಮಕ್ಕಳು ಹಣ ಗಳಿಸದೆ ಪರಿತಪಿಸುತ್ತಿದ್ದಾರೆ’ ಎಂದು ಹೇಳಿದರು.
ಸಮುದಾಯದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಆಗದ ಸ್ಥಿತಿ ಇದೆ. ಬಂಡವಾಳಕ್ಕೆ ಹಣ ಸಾಲದೆ ಮಾಡಿಕೊಂಡ ಸಾಲಗಳನ್ನು ತೀರಿಸಲಾಗದೆ ನೂರಾರು ಕುಟುಂಬಗಳು ಒತ್ತಡ ಅನುಭವಿಸುತ್ತಿದ್ದಾರೆ ಎಂದರು.
‘ರಾಜ್ಯದಲ್ಲಿ ಕನ್ನಡ ಮತ್ತು ತೆಲಗು ಮಾತನಾಡುವ 50 ಲಕ್ಷದಿಂದ 60 ಲಕ್ಷ ಮಂದಿ ದೇವಾಂಗ ಸಮುದಾಯದವರಿದ್ದಾರೆ. ಕೋವಿಡ್‌ನಿಂದಾಗಿ ಜನಾಂಗದವರ ಆರ್ಥಿಕ ಪರಿಸ್ಥಿತಿ ಜರ್ಜರಿತವಾಗಿದೆ. ರಾಜ್ಯ ಸರ್ಕಾರ ಘೋಷಿಸಿದ ಪ್ರೋತ್ಸಾಹ ಧನ ನೇಕಾರರಿಗೆಲ್ಲರಿಗೂ ತಲುಪಿಲ್ಲ. ಸಮುದಾಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದರ ಅಡಿಯಲ್ಲಿ ಸಮುದಾಯಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು’ ಎಂದು ವೆಂಕಟೇಶ್ ಅವರು ಒತ್ತಾಯಿಸಿದರು.
ಅರವಿಂದ, ವಿಕ್ರಮ್, ಶಿವಕುಮಾರ್, ಗೋಪಾಲಕೃಷ್ಣ, ಆರ್.ಸುಂದರ್, ಕೃಷ್ಣ, ವೆಂಕಟೇಶ್, ಕೃಷ್ಣಯ್ಯ, ರಾಜೇಶ್, ರತ್ನ, ನಾಗಲಕ್ಷ್ಮಿ, ಗಂಗಾಧರ್, ಶ್ರೀನಿವಾಸ, ರಾಜೇಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.