ಚಾಮರಾಜನಗರ: 'ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಜಯಂತಿ ಸಮಾವೇಶದಲ್ಲಿ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ವುಮೆನ್ ಇಂಡಿಯಾ ಮೂವ್‌ಮೆಂಟ್‌ನ (ಡಬ್ಲ್ಯುಐಎಂ) ಜಿಲ್ಲಾ ಸಮಿತಿಯು ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದೆ.
ಸಂಘಟನೆಯ ಜಿಲ್ಲಾ ಸಮಿತಿ ಅಧ್ಯಕ್ಷೆ ರೇಷ್ಮಾ ಬಾನು, ಸದಸ್ಯೆ ತೌಸೀಯಾ ಬಾನು ಹಾಗೂ ಇತರರು ಮಂಗಳವಾರ ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಎ.ಕೆ.ರಾಜೇಶ್ ಅವರಿಗೆ ದೂರು ನೀಡಿದರು.
‘ಹನುಮ ಜಯಂತಿ ಸಮಾವೇಶದಲ್ಲಿ ಭಾಷಣ ಮಾಡಿದ್ದ ಪ್ರಭಾಕರ ಭಟ್, ‘ಮುಸ್ಲಿಂ ಮಹಿಳೆಯರಿಗೆ ಮೊದಲು ಶಾಶ್ವತ ಗಂಡ ಇರಲಿಲ್ಲ, ದಿನಕ್ಕೊಬ್ಬರು ಇರುತ್ತಿದ್ದರು. ಈಗ ಶಾಶ್ವತ ಗಂಡ ಕೊಟ್ಟಿರುವುದು ಮೋದಿ ಸರ್ಕಾರ’ ಎಂದು ಹೇಳುವ ಮೂಲಕ ಮುಸ್ಲಿಂ ಮಹಿಳೆಯರನ್ನು ಅವಮಾನಿಸಿದ್ದಾರೆ. ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಏಕೈಕ ಉದ್ದೇಶದೊಂದಿಗೆ ಈ ಹೇಳಿಕೆಯನ್ನು ಅವರು ನೀಡಿದ್ದಾರೆ. ಇದರಿಂದ ಸಮುದಾಯದ ಮಹಿಳೆಯರಿಗೆ ನೋವಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜಕೀಯ ಒತ್ತಡಕ್ಕೆ ಮಣಿಯದೆ ತಕ್ಷಣ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಬೇಕು.ತೌಸಿಯಾ ಬಾನು
‘ಮುಸ್ಲಿಂ ಮಹಿಳೆಯರು ಲವ್ ಜಿಹಾದ್ ಹೆಸರಿನಲ್ಲಿ ಮೋಸ ಮಾಡುತ್ತಾರೆ ಎಂದು ಸುಳ್ಳು ಹೇಳುವ ಮೂಲಕ ಸಮುದಾಯದ ಮಹಿಳೆಯರ ಕುರಿತು ಅವರು ಅಪಪ್ರಚಾರ ಮಾಡಿದ್ದಾರೆ. ಮಂಡ್ಯ ನಿವಾಸಿ ವಿದ್ಯಾರ್ಥಿನಿಯಾದ ಮುಸ್ಕಾನ್ ಕುರಿತು ಮಾತನಾಡುತ್ತಾ, ಮುಸ್ಕಾನ್‌ಗೆ ಅಲ್ ಕೈದಾ ಉಗ್ರ ಸಂಘಟನೆಯ ಸಂಪರ್ಕ ಇದೆ. ಅವಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಸಮಾಜದಲ್ಲಿ ಮುಸ್ಲಿಮರನ್ನು ಅನುಮಾನ ದೃಷ್ಟಿಯಿಂದ ನೋಡುವಂತಹ ವಾತಾವರಣ ಸೃಷ್ಟಿಸುವ ಸಲುವಾಗಿ ‘ಮುಸ್ಲಿಮರು ತೆರಿಗೆ ಪಾವತಿಸುವುದಿಲ್ಲ, ಮೋಸಮಾಡುತ್ತಾರೆ’ ಎಂದು ಭಟ್ ಹೇಳಿದ್ದಾರೆ. ಕೋಮು ಗಲಭೆ ನಡೆಸಲು ಹುನ್ನಾರ ಮಾಡಿರುವ, ಪ್ರಚೋದನಕಾರಿ ಭಾಷಣ, ಮುಸ್ಲಿಂ ಮಹಿಳೆಯರಿಗೆ ಅಗೌರವ ತೋರಿರುವ, ಮುಸ್ಲಿಂ ಮಹಿಳೆಯರ ಕುರಿತು ನಿಂದನತ್ಮಾಕ ಹೇಳಿಕೆ ನೀಡಿರುವ ಹಾಗೂ ಸಮುದಾಯವನ್ನು ಅವಮಾನಿಸಿರುವ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ಸದಸ್ಯರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಂಘಟನೆಯ ಕಾರ್ಯದರ್ಶಿ ರುಮಾನ ತಾಜ್, ಜಿಲ್ಲಾ ಸಮಿತಿ ಸದಸ್ಯರಾದ ಫೌಜಿಯಾ ಬಾನು, ಅಯಷಾ ಹುಧಾ, ಶಬಾನ ಬಾನು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.