ADVERTISEMENT

ಆಪತ್ಕಾಲದಲ್ಲಿ ಉಳಿತಾಯವೇ ಬಂಧು: ಪುಟ್ಟರಂಗಶೆಟ್ಟಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ: ಸ್ವ ಉದ್ಯೋಗಾಧರಿತ ಸಮಾವೇಶ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 16:19 IST
Last Updated 25 ಫೆಬ್ರುವರಿ 2023, 16:19 IST
ಚಾಮರಾಜನಗರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ನಡೆದ ಸ್ವ ಉದ್ಯೋಗಾಧರಿತ ಸಮಾವೇಶ ಮತ್ತು ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣ್ಯರು ಫಲಾನುಭವಿಗಳಿಗೆ ವಾಹನದ ಕೀಯನ್ನು ಹಸ್ತಾಂತರಿಸಿದರು
ಚಾಮರಾಜನಗರದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ನಡೆದ ಸ್ವ ಉದ್ಯೋಗಾಧರಿತ ಸಮಾವೇಶ ಮತ್ತು ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣ್ಯರು ಫಲಾನುಭವಿಗಳಿಗೆ ವಾಹನದ ಕೀಯನ್ನು ಹಸ್ತಾಂತರಿಸಿದರು   

ಚಾಮರಾಜನಗರ: ‘ಉಳಿತಾಯ ಆಪತ್ಕಾಲದ ಬಂಧು ಇದ್ದಂತೆ. ಕಷ್ಟ ಕಾಲದಲ್ಲಿ ಅದು ತುಂಬಾ ನೆರವಿಗೆ ಬರುತ್ತದೆ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶನಿವಾರ ತಿಳಿಸಿದರು.

ನಗರದ ಶಿವಕುಮಾರಸ್ವಾಮಿ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್‌ ವತಿಯಿಂದ ನಡೆದ ಸ್ವ ಉದ್ಯೋಗಾಧರಿತ ಸಮಾವೇಶ ಮತ್ತು ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಸಹಾಯ ಸಂಘಗಳಲ್ಲಿ ಉಳಿತಾಯ ಬಹಳ ಮುಖ್ಯ. ಈ ಸಭೆಯನ್ನು ನೋಡಿ ಪುರುಷ ಸಂಘ ಕಲಿಯಬೇಕು. ಸಂಘಗಳಲ್ಲಿ ಮೊದಲನೇ ಪ್ರತಿನಿಧಿ, ಎರಡನೇ ಪ್ರತಿನಿಧಿಯಾಗಿರುವವರು ಪ್ರಾಮಾಣಿಕ ಕೆಲಸ ಮಾಡಿದಾಗ ಮಾತ್ರ ಸಂಘ ಅಭಿವೃದ್ದಿ ಆಗುತ್ತದೆ’ ಎಂದರು.

ADVERTISEMENT

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೌಶಲ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದೆ. ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರಿಗೂ ಉದ್ಯೋಗ ಅವಕಾಶ ನೀಡುತ್ತಿದೆ. ರಾಜ್ಯ 37 ತಾ‌ಲ್ಲೂಕುಗಳು ಹಿಂದುಳಿದಿವೆ ಎಂದು ನಂಜುಂಡಪ್ಪ ವರದಿ ಹೇಳಿತ್ತು. ಅದರಲ್ಲಿ ಚಾಮರಾಜನಗರ ಕೂಡ ಸೇರಿತ್ತು. ಆದರೆ ಈಗ ಜಿಲ್ಲೆಗೆ ಅನೇಕ ಸೌಲಭ್ಯಗಳು ದೊರಕಿವೆ. ಆದರೆ ಜಿಲ್ಲಾ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ’ ಕೋವಿಡ್‌ ಬಂದ ಮೇಲೆ ಮೇಲೆ ಸರ್ಕಾರದಿಂದ ಅನುದಾನಗಳು ಸಿಗದೆ ಅಭಿವೃದ್ದಿಯಲ್ಲಿ ಕುಂಠಿತ ಆಗಿತ್ತು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಅನೇಕ ಸೌಲಭ್ಯಗಳು ಜನರಿಗೆ ದೊರಕಿತು’ ಎಂದರು.

‘ಯಾವುದೇ ರಾಷ್ಟ್ರ ಮುಂದುವರಿಯಬೇಕಾದರೆ ಶಿಕ್ಷಣ ಮುಖ್ಯ. ಧರ್ಮಸ್ಥಳದ ಸಂಸ್ಥೆಯು ಜನರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಶಿಕ್ಷಣದ ಅರಿವನ್ನೂ ಮೂಡಿಸುವ ಕೆಲಸ ಮಾಡುತ್ತಿದೆ. ಕುಡಿತದ ಚಟ ಬಿಡಿಸುವ ಕೆಲಸ ಮಾಡುತ್ತಿದೆ. ನಿರುದ್ಯೋಗ ಯುವಕರಿಗೆ ವಾಹನ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಪುಟ್ಟರಂಗಶೆಟ್ಟಿ ಹೇಳಿದರು.

ಇದೇ ಸಂದರ್ಭದಲ್ಲಿ 25 ಮಂದಿಗೆ ವಾಹನ ಹಸ್ತಾಂತರಿಸಲಾಯಿತು.

ಜಿಲ್ಲಾ ಜನಜಾಗೃತಿ ವೇದಿಕ ಅಧ್ಯಕ್ಷ ಎಂ.ಎನ್.ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಎಂ.ಸುಧಾಮಣಿ, ಎಸ್.ಬಿ.ಐ. ವ್ಯವಸ್ಥಾಪಕ ಮಹೇಶ್, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತಾಯ, ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ಶಿವಕುಮಾರಸ್ವಾಮಿ ಭವನದ ಕುಮಾರಸ್ವಾಮಿ ಇದ್ದರು.

‘ಸ್ವಸಹಾಯ ಸಂಘಗಳಿಂದ ಬದುಕು ಸುಧಾರಣೆ’

ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಮಾತನಾಡಿ, ‘ಜನರು ಬಡತನ ರೇಖೆಯಿಂದ ಹೊರಗೆ ಬರುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಹಾಗೂ ಸ್ವಸಹಾಯ ಸಂಘಗಳು. ಇಂತಹ ಸಂಘಗಳನ್ನು ಎಲ್ಲಾ ರಾಜ್ಯಗಳಲ್ಲೂ ಮಾಡಬೇಕು ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ವೀರೇಂದ್ರ ಹೆಗಡೆಯವರು’ ಎಂದರು.

‘ನಿಸ್ವಾರ್ಥವಾಗಿ ಮಾಡುವ ಸೇವೆ ಶ್ರೇಷ್ಠ ಪ್ರಭಾವ ಬೀರುತ್ತದೆ. ಬಡತನ ನಿವಾರಣೆಗಾಗಿ, ರೈತರ ಉದ್ಧಾರಕ್ಕಾಗಿ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮಗಳು ಸಂಸ್ಥೆಯ ವತಿಯಿಂದ ನಡೆಯುತ್ತಿವೆ’ ಎಂದರು.

‘ಈಗಾಗಲೇ 1.26 ಲಕ್ಷ ಮಂದಿಗೆ ಕುಡಿತದ ಚಟ ಬಿಡಿಸಿದ್ದೇವೆ. ನಮ್ಮಲ್ಲಿ ಪ್ರಗತಿಯ ಪಾಲುದಾರರು ಇದ್ದಾರೆ. ಬದುಕಿನ ಚೌಕಟ್ಟಿನಲ್ಲಿ ನಡೆಯಬೇಕಾದರೆ ಸಜ್ಜನರಾಗಿ ನಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.