ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ತಮಿಳುನಾಡಿನ ಮೆಟ್ಟೂರು ಜಲಾಶಯದ 16 ಗೇಟ್‌ಗಳ ಮೂಲಕ 1.70 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದೆ.
ವಯನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜಲಾಶಯ ಭರ್ತಿಯಾಗಿದ್ದು ಮನಮೋಹಕವಾಗಿ ಕಾಣುತ್ತಿದೆ. ಜಲಾಶಯ 95.6 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು ಸದ್ಯ 93.4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಗುರುವಾರ ಜಲಾಶಯದ ಒಳ ಹರಿವು 1.70 ಲಕ್ಷ ಕ್ಯೂಸೆಕ್ ತಲುಪಿದ್ದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ.
ಕುಡಿಯುವ ಉದ್ದೇಶಕ್ಕಾಗಿ ಹಾಗೂ ಕೃಷಿಗೆ ನೀರು ಹೊರಬಿಡಲಾಗುತ್ತಿದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿರುವ ಮೆಟ್ಟೂರು ಜಲಾಶಯ ಸತತ ಐದು ವರ್ಷ ಭರ್ತಿಯಾಗುತ್ತಿದ್ದು ಕಳೆದ ವರ್ಷ ಕೂಡ ಜುಲೈನಲ್ಲಿಯೇ ತುಂಬಿತ್ತು.
ಈ ವರ್ಷ ಮೆಟ್ಟೂರು ಜಲಾಶಯದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಅಣೆಕಟ್ಟೆಗೆ ಕೇವಲ 7 ದಿನಗಳಲ್ಲಿ 59 ಅಡಿಗಳಷ್ಟು ನೀರು ಬಂದಿದೆ. ಜುಲೈ 20ರಂದು ಮೆಟ್ಟೂರು ಜಲಾಶಯದಲ್ಲಿ 61 ಅಡಿ ನೀರು ಸಂಗ್ರಹವಾಗಿತ್ತು. ಜುಲೈ 27ರಂದು 120 ಅಡಿಗೆ ಏರಿಕೆಯಾಗಿದೆ.
ಮತ್ತೊಂದೆಡೆ, ಕೆಆರ್‌ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಬಿಡುತ್ತಿರುವ ನೀರು ಸಮುದ್ರದ ಪಾಲಾಗುತ್ತಿದೆ. ಮೆಟ್ಟೂರು ಜಲಾಶಯದ ಹಿನ್ನೀರು ಪ್ರದೇಶ ಪಾಲಾರ್ ಸಮೀಪದ ಸೋರೆಕಾಯಿ ಮಡುವಿನಿಂದ ಹಿಡಿದು ಗೋಪಿನಾಥಂ ಹಾಸುಪಾಸು ಹಾಗೂ ಹೊಗೆನಕಲ್ ಜಲಪಾತದವರೆಗೂ ಮೆಟ್ಟೂರು ಜಲಾನಯನ ವ್ಯಾಪಿಸಿದ್ದು ತಮಿಳುನಾಡಿನ ಸೇಲಂ ಜಿಲ್ಲೆ ಸೇರಿದಂತೆ 12 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಜತೆಗೆ, 16.4 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ಅಣೆಕಟ್ಟೆ ನೀರು ಆಧಾರವಾಗಿದೆ.
ತಮಿಳುನಾಡಿನ ದೊಡ್ಡ ಜಲಾಶಯ ಎಂಬ ಹಿರಿಮೆಗೆ ಪಾತ್ರವಾಗಿರುವ ಮೆಟ್ಟೂರು ಜಲಾಶಯದಿಂದ ನೀರು ಹೊರಬಿಟ್ಟಿರುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಜಲಾಶಯವನ್ನು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.