ADVERTISEMENT

ದೊಡ್ಡಾಣೆ ಗ್ರಾಮದಲ್ಲಿ ಶೂನ್ಯ ಮತದಾನ-ಬಹಿಷ್ಕಾರ

ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 6:43 IST
Last Updated 19 ಏಪ್ರಿಲ್ 2019, 6:43 IST
ಮತದಾನದಿಂದ ದೂರ ಉಳಿದ ದೊಡ್ಡಾಣೆ ಗ್ರಾಮದ ಮಹಿಳೆಯರು
ಮತದಾನದಿಂದ ದೂರ ಉಳಿದ ದೊಡ್ಡಾಣೆ ಗ್ರಾಮದ ಮಹಿಳೆಯರು   

ಹನೂರು:ತಾಲ್ಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಾಣೆ ಹಾಗೂ ತೋಕರೆ ಗ್ರಾಮಸ್ಥರು ಮೂಲಸೌಕರ್ಯ ಕಲ್ಪಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗುರುವಾರ ಸಾಮೂಹಿಕವಾಗಿ ಮತದಾನ ಬಹಿಷ್ಕರಿಸಿದರು.

ಎರಡು ಗ್ರಾಮಗಳಿಂದ 253 ಮಹಿಳೆಯರು ಹಾಗೂ 219 ಪುರುಷರು ಸೇರಿ 472 ಮತದಾರರಿದ್ದಾರೆ. ಗ್ರಾಮದ ಶಾಲೆಯಲ್ಲಿ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 151ರಲ್ಲಿ ಅಧಿಕಾರಿಗಳು ಮತದಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡರು.

‘ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದುವರೆಗೂ ಗ್ರಾಮಕ್ಕೆ ಸೌಜನ್ಯಕ್ಕಾದರೂ ಭೇಟಿ ನೀಡಿ ನಮ್ಮ ಅಹವಾಲು ಕೇಳಿಲ್ಲ’ ಎಂದು ಆರೋಪಿಸಿ ಎರಡು ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಸೇರಿದಂತೆ ಮತದಾನವನ್ನು ಬಹಿಷ್ಕರಿಸಿದ್ದಾರೆ.

ADVERTISEMENT

ಬಹಿಷ್ಕಾರ ಸುದ್ದಿ ತಿಳಿಯುತ್ತಿದ್ದಂತೆ ಮಹದೇಶ್ವರ ಬೆಟ್ಟ ಪೊಲೀಸ್ ಇನ್‌ಸ್ಪೆಕ್ಟರ್‌ ಗೋಪಾಲಕೃಷ್ಣ, ಮಲೆಮಹದೇಶ್ವರ ವನ್ಯಧಾಮದ ಪಾಲಾರ್ ವನ್ಯಜೀವಿ ವಲಯ ಅರಣ್ಯಾಧಿಕಾರಿ ಅರುಣ್‍ಕುಮಾರ್, ಕಂದಾಯ ಇಲಾಖೆಯ ವಿನೋದ್ ಅವರು ಮಧ್ಯಾಹ್ನದ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇದಕ್ಕೊಪ್ಪದ ಗ್ರಾಮಸ್ಥರು, ‘ಚುನಾವಣೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ಗ್ರಾಮಕ್ಕೆ ಬಂದು ಮೂಲಸೌಕರ್ಯ ಕಲ್ಪಿಸಿಕೊಡುವುದಾಗಿ ಭರವಸೆ ನೀಡುವವರೆಗೂ ಮತದಾನ ಮಾಡುವುದಿಲ್ಲ’ ಎಂದರು.

‘ಸ್ವಾತಂತ್ರ್ಯ ಬಂದಾಗಿನಿಂದಲೂ ನಾವು ಮೂಲಸೌಕರ್ಯದಿಂದ ವಂಚಿತಗೊಂಡು ಪ್ರಾಣಿಗಳಿಗಿಂತಲೂ ಹೀನಾಯವಾಗಿ ಬದುಕುತ್ತಿದ್ದೇವೆ. ಮೂಲಸೌಕರ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅಲ್ಲದೇ ರೈತ ಸಂಘಟನೆ ಜತೆಗೂಡಿ ಹನೂರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನು ನಡೆಸಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದಾಗ ಮನವಿ ಸಲ್ಲಿಸಲಾಗಿದೆ.ಇಷ್ಟಾದರೂ ನಮ್ಮ ಗ್ರಾಮಕ್ಕೆ ಕನಿಷ್ಠ ಮೂಲಸೌಕರ್ಯವೂ ಸಿಕ್ಕಿಲ್ಲ. ಮತಯಾಚನೆ ಸಂದರ್ಭದಲ್ಲಿ ಬರುವ ಸ್ಥಳೀಯ ನಾಯಕರು ಚುನಾವಣೆ ಮುಗಿದ ಬಳಿಕ ಇತ್ತ ತಲೆ ಹಾಕಿಯೂ ನೋಡುವುದಿಲ್ಲ. ಇದರಿಂದ ಬೇಸತ್ತು ಎರಡು ಗ್ರಾಮಸ್ಥರು ಸೇರಿ ಮತದಾನವನ್ನು ಬಹಿಷ್ಕರಿಸಿದ್ದೇವೆ. ನಮ್ಮ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಅವರಿಗೆ ನಮ್ಮ ಮತ ಯಾತಕ್ಕಾಗಿ’ ಎಂದು ಗ್ರಾಮದ ಮಾದೇವ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಂಜೆ 5:30ರ ವೇಳೆಗೆ ಗ್ರಾಮಕ್ಕೆ ಹನೂರು ತಹಶೀಲ್ದಾರ್ ನಾಗರಾಜು ಅವರು ಭೇಟಿ ನೀಡಿ ಜನರ ಬಳಿ ತೆರಳಿ ಮನವೊಲಿಸಲು ಯತ್ನಿಸಿದರು.

‘ಈಗ ಮತದಾನ ಮಾಡಿ.ಚುನಾವಣೆ ಮುಗಿದ ಬಳಿಕ ಹಿರಿಯ ಅಧಿಕಾರಿಗಳೊಂದಿಗೆ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು. ಅವರು ಅರ್ಧ ಗಂಟೆ ಮನವಿ ಮಾಡಿದರೂ ಗ್ರಾಮಸ್ಥರು ಮತದಾನ ಮಾಡಲು ಮುಂದೆ ಬರಲಿಲ್ಲ.

ಸಮಸ್ಯೆ ಬಗೆಹರಿಯುವವರೆಗೂ ಮತದಾನ ಮಾಡೆವು’

‘ಗ್ರಾಮಕ್ಕೆ ರಸ್ತೆ ಹಾಗೂ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ನಮ್ಮ ಗಂಡು ಮಕ್ಕಳಿಗೆ ಸಂಬಂಧವೇ ಬರುತ್ತಿಲ್ಲ.ಗ್ರಾಮದಲ್ಲಿ ಆರೋಗ್ಯ ಸಮಸ್ಯೆ ಉಂಟಾದರೆ ರೋಗಿಯನ್ನು ಡೋಲಿಯ ಮೂಲಕ ಸಾಗಿಸಬೇಕಾದ ಪರಿಸ್ಥಿತಿ ಇದೆ. ಅರಣ್ಯ ಇಲಾಖೆ ಸಿಬ್ಬಂದಿ ನಮ್ಮ ಜಾನುವಾರುಗಳನ್ನು ಕಾಡಿಗೆ ಬಿಡಲು ಅವಕಾಶ ನೀಡದೆ, ಮೇಲಿಂದ ಮೇಲೆ ನಮಗೆ ತೊಂದರೆ ನೀಡುತ್ತಿದ್ದಾರೆ. ನಮ್ಮ ಎಲ್ಲ ಸಮಸ್ಯೆಗಳು ಬಗೆಹರಿಸಿ ಮೂಲಸೌಕರ್ಯ ಕಲ್ಪಿಸಿಕೊಡುವವರೆಗೂ ಮತದಾನ ಮಾಡುವುದಿಲ್ಲ’ ಎಂದು ಗ್ರಾಮದ ಮಹಿಳೆಯರು ಪಟ್ಟು ಹಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.