ADVERTISEMENT

ಸಂತೇಮರಹಳ್ಳಿ: ತಿಂಗಳ ಸಂಬಳದಲ್ಲಿ ಮಕ್ಕಳಿಗೊಂದಿಷ್ಟು!

ಕಣ್ಣೇಗಾಲ: 13 ವರ್ಷಗಳಿಂದ ಪುಸ್ತಕ, ಲೇಖನ ಸಾಮಗ್ರಿ ವಿತರಿಸುತ್ತಿರುವ ಪ್ರಸಾದ್‌

ಮಹದೇವ್ ಹೆಗ್ಗವಾಡಿಪುರ
Published 25 ಜೂನ್ 2022, 6:48 IST
Last Updated 25 ಜೂನ್ 2022, 6:48 IST
ಚಾಮರಾಜನಗರ ತಾಲ್ಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲು ಸಿದ್ಧತೆ ನಡೆಸುತ್ತಿರುವ ಪ್ರಸಾದ್‌ (ಎಡದಿಂದ ನಾಲ್ಜನೆಯವರು)
ಚಾಮರಾಜನಗರ ತಾಲ್ಲೂಕಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲು ಸಿದ್ಧತೆ ನಡೆಸುತ್ತಿರುವ ಪ್ರಸಾದ್‌ (ಎಡದಿಂದ ನಾಲ್ಜನೆಯವರು)   

ಸಂತೇಮರಹಳ್ಳಿ: ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಪ್ರತಿ ವರ್ಷ ₹ 1.5 ಲಕ್ಷ ಮೌಲ್ಯದ ನೋಟ್‌ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದ್ದಾರೆಕಣ್ಣೇಗಾಲ ಗ್ರಾಮದ ಪ್ರಸಾದ್ ಶಿವಯ್ಯ ಶೆಟ್ಟಿ ಅವರು.

13 ವರ್ಷಗಳಿಂದ ನಿರಂತರವಾಗಿ ಈ ಕಾರ್ಯವನ್ನು ಅವರು ಮಾಡುತ್ತಾ ಬಂದಿದ್ದಾರೆ. ಆದರೆ, ಅದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಸೇವಾ ಕಾರ್ಯವನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ ಎಂದು ಹೇಳುತ್ತಾರೆ ಪ್ರಸಾದ್‌.

ನೋಟ್ ಪುಸ್ತಕ, ಕನ್ನಡ ಹಾಗೂ ಇಂಗ್ಲಿಷ್ ಕಾಪಿ ಪುಸ್ತಕ, ಪೆನ್ನು, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಹಾಗೂ ಮಗ್ಗಿಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ವಿಶೇಷವಾಗಿ, ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂಗ್ಲಿಷ್ –ಕನ್ನಡ ನಿಘಂಟುಗಳನ್ನು ನೀಡುತ್ತಿದ್ದಾರೆ.

ADVERTISEMENT

ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮಗಳ ಶಾಲೆಗಳಲ್ಲಿ ಓದುತ್ತಿರುವ ಬಡತನದ ರೇಖೆಗಿಂತ ಕೆಳಗಿರುವ ಮಕ್ಕಳನ್ನು ಕೇಂದ್ರೀಕರಿಸಿ ಅವರ ಕೊಡುಗೆ ನಡೆಯುತ್ತಿದೆ.

ಹುಟ್ಟೂರು ಕಣ್ಣೇಗಾಲದಲ್ಲಿ ತಮ್ಮ ವಿದ್ಯಾಬ್ಯಾಸದ ಅವಧಿಯಲ್ಲಿ ತಮಗಾದ ಕಹಿ ಅನುಭವಗಳು ಈಗಿನ ಮಕ್ಕಳಿಗೆ ಆಗಬಾರದು ಎಂಬ ಉದ್ದೇಶ ಈ ಉದಾರ ಕಾಯಕದ ಹಿಂದಿದೆ.

ಸ್ನಾತಕೋತ್ತರ ಪದವಿ ಮುಗಿಸಿರುವ ಪ್ರಸಾದ್‌, ಬೆಂಗಳೂರಿನ ಖಾಸಗಿ ವಿದ್ಯಾ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿದ್ದಾರೆ. ಪ್ರತಿ ತಿಂಗಳ ತಮ್ಮ ವೇತನದಲ್ಲಿ ಮಕ್ಕಳಿಗಾಗಿ ಒಂದಿಟ್ಟು ಹಣ ಕೂಡಿಡುತ್ತಾರೆ. ಶೈಕ್ಷಣಿಕ ವರ್ಷದ ಆರಂಭದಲ್ಲಿ ಪುಸ್ತಕಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ಖರೀದಿಸಲು ಆ ಹಣವನ್ನು ವಿನಿಯೋಗಿಸುತ್ತಾರೆ. ಸಹೋದರ ನಿರಂಜನ ಶಿವಯ್ಯ ಶೆಟ್ಟಿ ಅಣ್ಣನ ಕಾರ್ಯಕ್ಕೆ ಜೊತೆಯಾಗುತ್ತಾರೆ.

ನಕ್ಷತ್ರ ಫೌಂಡೇಷನ್ ಎಂಬ ಸಂಸ್ಥೆ ಸ್ಥಾಪಿಸಿ, ಈ ಹೆಸರಿನಲ್ಲಿ ಕಣ್ಣೇಗಾಲ, ಭೋಗಾಪುರ, ಮಂಗಲ ಹೊಸೂರು, ನಡುಕಲಮೋಳೆ, ಸಿಂಗನಪುರ, ಹೊಸಮೋಳೆ ಹಾಗೂ ಸಂತೇಮರಹಳ್ಳಿ ಮೋಳೆಯ ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಲೇಖನ ಸಾಮಗ್ರಿಗಳನ್ನು ಪ್ರಸಾದ್‌ ವಿತರಿಸಿದ್ದಾರೆ.

ಪ್ರಾಥಮಿಕ ಶಾಲಾ ಮಕ್ಕಳಿಗೆ ತಲಾ ₹ 600 ಹಾಗೂ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ತಲಾ ₹ 1000 ಮೌಲ್ಯದ ಲೇಖನ ಸಾಮಗ್ರಿಗಳನ್ನು ನೀಡುತ್ತಾ ಬರುತ್ತಿದ್ದಾರೆ.

‘ಆತ್ಮ ತೃಪ್ತಿಯ ಕೆಲಸ’
ತಾವು ಮಾಡುತ್ತಿರುವ ಕಾರ್ಯದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಪ್ರಸಾದ್‌, ‘‘ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಇತರ ಸಾಮಗ್ರಿಗಳನ್ನು ನೀಡುವುದರಿಂದ ನಮಗೆ ಆತ್ಮ ತೃಪ್ತಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳು ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳಿಗೆ ಲೇಖನಿ ಸಾಮಗ್ರಿ ವಿತರಿಸಬೇಕು ಎಂಬ ಆಲೋಚನೆ ಇದೆ. ಇದಕ್ಕೆ ಸ್ನೇಹಿತರು, ಸಮಾನ ಮನಸ್ಕರ ಸಹಕಾರವಿದೆ’ ಎಂದರು.

‘ಪ್ರಸಾದ್‌ ಅವರು ಬಡ ಮಕ್ಕಳನ್ನು ಗುರುತಿಸಿ ಪ್ರತಿ ವರ್ಷ ಲೇಖನಿ ಸಾಮಗ್ರಿ ವಿತರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಇದರಿಂದ ಮಕ್ಕಳು ಸಂತೋಷದಿಂದ ಶಾಲೆಗೆ ದಾಖಲಾಗಲು ಅನುಕೂಲವಾಗಿದೆ’ ಎಂದು ಹೊಸಮೋಳೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಬಸವರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.