ಗುಂಡ್ಲುಪೇಟೆ: ‘ಜ್ಞಾನದಿಂದ ಮನುಷ್ಯನ ಬದುಕು ಬೆಳಕಾಗುತ್ತದೆ. ಇಂತಹ ಜ್ಞಾನವನ್ನು ಹಂಚುವ ಪ್ರಕ್ರಿಯೆ ನಿರಂತರವಾಗಿರಬೇಕು’ ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಹೇಳಿದರು.
ತಾಲ್ಲೂಕಿನ ಉಪಕಾರ ಗ್ರಾಮದಲ್ಲಿ ಜೈಭೀಮ್ ಬಳಗದಿಂದ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಾವು ಗಳಿಸಿದ ಪಾಂಡಿತ್ಯವನ್ನು ಸಮಾಜಕ್ಕೆ ಧಾರೆ ಎರೆದಿದ್ದಾರೆ. ಅವರು ಹಂಚಿದ ಜ್ಞಾನದ ಬೆಳಕಿನಲ್ಲಿ ಸಮಾಜ ಸುಧಾರಣೆ ಕಂಡಿತು. ಹಾಗಾಗಿ ಜ್ಞಾನ ಹಂಚುವ ಪ್ರಕ್ರಿಯೆ ನಿರಂತರವಾಗಿ ಇರಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಜಡತ್ವ ಮನೆ ಮಾಡುತ್ತದೆ’ ಎಂದರು.
ಸಾಹಿತಿ ಕಾಳಿಂಗಸ್ವಾಮಿ ಸಿದ್ದಾರ್ಥ ಮಾತನಾಡಿ, ‘ಕೀಳರಿಮೆ ನಮ್ಮ ಸಾಧನೆಗೆ ಅಡ್ಡಿಯಾಗಿದೆ. ಶಿಕ್ಷಿತರಾದಾಗ ನಮಗೆ ಸರ್ವ ಕ್ಷೇತ್ರದಲ್ಲಿ ಅವಕಾಶಗಳು ಸೃಷ್ಟಿ ಆಗುತ್ತವೆ’ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೋರಾಟಗಾರ ಪಿ.ಸಂಘ ಸೇನಾ, ‘ಮೌಢ್ಯತೆ ನಮ್ಮಲ್ಲಿ ತುಂಬಿದೆ. ಮೂಢನಂಬಿಕೆ, ಕಂದಾಚಾರ ಅಭಿವೃದ್ಧಿಗೆ ತೊಡಕಾಗಿವೆ. ಬುದ್ಧರ ವೈಚಾರಿಕ ಮಾರ್ಗ ಇದಕ್ಕೆ ಪರಿಹಾರ ಆಗಿದೆ’ ಎಂದರು.
ಗ್ರಾಮಸ್ಥರಾದ ಆರ್.ಸೋಮಣ್ಣ, ಆರ್.ಡಿ.ಉಲ್ಲಾಸ್, ಯಳಂದೂರು ಕೃಷ್ಣ ಮೂರ್ತಿ, ಗೌತಮ್ ದೊಡ್ಡತುಪ್ಪೂರು, ರಾಜೇಂದ್ರ, ಶಿನಪ್ಪ, ಶಂಕರ್, ರಾಜು ಚಿರಕನಹಳ್ಳಿ, ರಾಜಣ್ಣ, ನಾಗರಾಜ್, ಕುಮಾರ್, ಶಿವಕುಮಾರ್, ಗಂಗಾಧರ್, ತಿರುಪತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.