ADVERTISEMENT

ಬರಗಾಲ ತೀವ್ರ | ಒಣಗಿ ಹೋದ ಬಯಲು: ಆಡು ಕುರಿಗಳಿಗೆ ಮೇವು ಸಂಗ್ರಹವೇ ಸವಾಲು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 5:44 IST
Last Updated 29 ಏಪ್ರಿಲ್ 2024, 5:44 IST
ಸಂತೇಮರಹಳ್ಳಿಯ ಸಂತೆಯಲ್ಲಿ ಆಡು ಕುರಿಗಳ ಮಾರಾಟದಲ್ಲಿ ತೊಡಗಿರುವ ಸಾಕಣೆದಾರರು
ಸಂತೇಮರಹಳ್ಳಿಯ ಸಂತೆಯಲ್ಲಿ ಆಡು ಕುರಿಗಳ ಮಾರಾಟದಲ್ಲಿ ತೊಡಗಿರುವ ಸಾಕಣೆದಾರರು   

ಸಂತೇಮರಹಳ್ಳಿ: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿರು ಬಿಸಿಲಿನ ನಡುವೆ ಒಂದೆರಡು ಮಳೆಯಾದರೂ ಬಂದಿದೆ. ಆದರೆ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಮಳೆಗಾಗಿ ಹಾತೊರೆಯುತ್ತಿರುವ ಜನರಿಗೆ ಈಗ ಜಾನುವಾರುಗಳಿಗೆ ಮೇವು ಸಂಗ್ರಹಿಸುವುದೇ ಸವಾಲಾಗಿದೆ. 

ಹೋಬಳಿ ಕೇಂದ್ರದಲ್ಲಿ ಪ್ರತಿ ಮಂಗಳವಾರ ನಡೆಯುವ ಸಂತೆಗೆ ಕುರಿ ಆಡುಗಳನ್ನು ತರುವ ರೈತರು ಜಾನುವಾರುಗಳಿಗೆ ಮೇವು ಸಂಗ್ರಹಿಸಲು ಆಗುತ್ತಿರುವ ಕಷ್ಟವನ್ನು ವಿವರಿಸುತ್ತಾರೆ. 

‘ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು, ಮಕ್ಕಳನ್ನು ಓದಿಸಬಹುದು, ಈ ಬರಗಾಲದಲ್ಲಿ ಆಡು ಕುರಿ ಜಾನುವಾರುಗಳನ್ನು ಸಾಕುವುದೇ ಕಷ್ಟವಾಗಿದೆ’ ಎಂಬುದು ಚಾಮರಾಜನಗರ ತಾಲ್ಲೂಕಿನ ದೊಡ್ಡಮೋಳೆ ಗ್ರಾಮದ ಮಹದೇವಶೆಟ್ಟಿಯವರ ಮಾತು. ಕಳೆದ ಮಂಗಳವಾರ ಸಂತೇಮರಹಳ್ಳಿಯಲ್ಲಿ ನಡೆದ ಸಂತೆಗೆ ತಮ್ಮ ಎಳೆಯ ಮೇಕೆ ಮರಿಗಳನ್ನು ಅವರು ಮಾರಾಟಕ್ಕೆ ತಂದಿದ್ದರು. 

ADVERTISEMENT

ಇದು ಮಹದೇವ ಶೆಟ್ಟಿ ಒಬ್ಬರ ಕಥೆ ಮಾತ್ರ ಅಲ್ಲ. ಜಾನುವಾರುಗಳನ್ನು ಸಾಕುತ್ತಿರುವ ಎಲ್ಲರ ಸಮಸ್ಯೆ. ಜಿಲ್ಲೆಯಲ್ಲಿ ಮನೆಗಳಲ್ಲೇ ಹಸು, ಆಡು ಕುರಿಗಳನ್ನು ಕಟ್ಟಿ ಸಾಕುವವರು ಕಡಿಮೆ. ಬಯಲಿನಲ್ಲಿ ಮೇಯಲು ಬಿಡುವವರೇ ಜಾಸ್ತಿ.

ಹಿಂದಿನ ವರ್ಷದ ಮುಂಗಾರು, ಹಿಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿದ್ದರೆ, ಫೆಬ್ರುವರಿ, ಮಾರ್ಚ್‌ವರೆಗೂ ಹಸಿರುವ ಮೇವು ಇರುತ್ತದೆ. ಮಾರ್ಚ್‌ ಕೊನೆ, ಏ‍ಪ್ರಿಲ್‌ ಆರಂಭದಲ್ಲಿ ಒಂದೆರಡು ಮಳೆ ಬಿದ್ದರೆ, ಮತ್ತೆ ಹಸಿರು ಚಿಗುರುತ್ತದೆ. ಹೀಗಾದರೆ ಜಾನುವಾರುಗಳ ಮೇವಿಗೆ ತೊಂದರೆಯಾಗುವುದಿಲ್ಲ. ಕಳೆದ ವರ್ಷ ಹಿಂಗಾರು, ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಾಗಿರುವುದರಿಂದ ಫೆಬ್ರುವರಿ ಹೊತ್ತಿಗೇ ಹಸಿರು ಮೇವು ಒಣಗಿ ಹೋಗಿದೆ. ಈಗ ಬಯಲಿನಲ್ಲಿ ಎಲ್ಲೂ ಹಸಿರು ಕಾಣುತ್ತಿಲ್ಲ. ಕೆರೆಕಟ್ಟೆಗಳಲ್ಲಿ ನೀರು ಕೂಡ ಬರಿದಾಗಿರುವುದರಿಂದ ಮೇವಿನೊಂದಿಗೆ ನೀರಿನ ಕೊರತೆಯೂ ಎದುರಾಗಿದೆ. 

ಕಬ್ಬಿನ ಸೋಗೆಗೂ ದುಡ್ಡು: ಮೊದಲೆಲ್ಲ ಕಬ್ಬು ಕಟಾವು ಮಾಡಿದ ನಂತರ ಅದ ಸೋಗೆಯನ್ನು (ತೊಂಡೆ) ರೈತರು ಉಚಿತವಾಗಿ ನೀಡುತ್ತಿದ್ದರು. ಬರ ಪರಿಸ್ಥಿತಿ ಇರುವುದರಿಂದ ಈಗ ಅದಕ್ಕೂ ದುಡ್ಡು ಕೊಡಬೇಕು. ಕಟ್ಟಿನ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಜಾನುವಾರು ಸಾಕಣೆದಾರರು ಇದಕ್ಕೂ ಹಣ ತೆರಬೇಕಾಗಿದೆ. 

ಹಾಲು ಉತ್ಪಾದನೆ ಕುಂಠಿತ: ಹಸಿರು ಮೇವು ಹಾಗೂ ನೀರಿನ ಕೊರತೆಯಿಂದ ಹಾಲಿನ ಇಳುವರಿ ಕುಂಠಿತವಾಗಿದೆ ಎಂದು ಹೇಳುತ್ತಾರೆ ಕೆಂ‍ಪನಪುರ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಹದೇವಶೆಟ್ಟಿ. 

‘ರಾಸುಗಳು ಮೇವು ಕೊರತೆಯಿಂದ ಹಾಲನ್ನು ಸರಿಯಾಗಿ ಕೊಡುತ್ತಿಲ್ಲ. ಸರ್ಕಾರದಿಂದ ಪ್ರೋತ್ಸಾಹ ಧನವೂ ಬಂದಿಲ್ಲ. ಹಸುಗಳನ್ನು ಮಾರಾಟ ಮಾಡಬೇಕೆಂದರೆ ಕಡಿಮೆ ಬೆಲೆಗೆ ಕೇಳುತ್ತಾರೆ. ಮಳೆ ಬರುವವರೆಗೆ ಕಷ್ಟ ಪಟ್ಟು ತಡೆಯಬೇಕಾಗಿದೆ. ಜತೆಗೆ ಬಿಸಿಲಿನ ತಾಪಕ್ಕೆ ರಾಸುಗಳು ಗರ್ಭ ಧರಿಸುತ್ತಿಲ್ಲ, ರೋಗ ರುಜಿನಗಳಿಗೆ ತುತ್ತಾಗುತ್ತಿವೆ’ ಎಂದು ಕೆಂಪನಪುರ ತಾಯಮ್ಮ ಅಳಲು ತೋಡಿಕೊಂಡರು. 

ಗೋಶಾಲೆ ತೆರೆಯಲು ಒತ್ತಾಯ

ಗುಂಡ್ಲುಪೇಟೆ ಹಾಗೂ ಹನೂರು ಭಾಗಗಳಲ್ಲಿ ಈಗಾಗಲೇ ಗೋಶಾಲೆ ಅರಂಭವಾಗಿದೆ. ಹಿಂದಿನ ವರ್ಷಗಳಲ್ಲಿ ಮಂಗಲ ಬಳಿಯ ಶಂಕರೇಶ್ವರ ಬೆಟ್ಟದ ತಪ್ಪಲಿನಲ್ಲಿ ಗೋಶಾಲೆ ಆರಂಭಿಸಲಾಗಿತ್ತು.  ಅಲ್ಲಿ ಕಾವೇರಿ ಕುಡಿಯುವ ನೀರಿನ ಘಟಕ ಇರುವುದರಿಂದ ಮೇವಿನ ಜತೆಗೆ ನೀರಿನ ಸಮಸ್ಯೆ ಇರಲಿಲ್ಲ. ಈ ಭಾಗದಲ್ಲಿ ರಾಸುಗಳ ಉಳಿವಿಗಾಗಿ ಜಿಲ್ಲಾಡಳಿತ ಗೋಶಾಲೆ ಆರಂಭಿಸಬೇಕು ಎಂದು ಹೋಬಳಿ ವ್ಯಾಪ್ತಿಯ ರೈತರು ಒತ್ತಾಯಿಸಿದ್ದಾರೆ.  ‘ಮಳೆ ಕೊರತೆಯಿಂದಾಗಿ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಿ ಜನರು ಟ್ಯಾಂಕರ್ ನೀರು ಅವಲಂಬಿಸುತ್ತಿದ್ದಾರೆ. ಉಮ್ಮತ್ತೂರು ಹಾಗೂ ಯಡಿಯೂರು ಕೆರೆಗಳಲ್ಲಿ ನೀರು ತುಂಬಿಸಿದ ಫಲವಾಗಿ ಈ ಭಾಗದ ಪಂಪ್‌ಸೆಟ್‌ಗಳು ಸ್ವಲ್ಪ ಪ್ರಮಾಣದಲ್ಲಿ ನೀರು ಕಾಣುತ್ತಿವೆ. ಉಳಿದ ಭಾಗಗಳಲ್ಲಿ ಶೇ 90ರಷ್ಟು ನೀರಿನ ಪ್ರಮಾಣ ಕಡಿಮೆಯಾಗಿದೆ. ಕಬ್ಬು ಬಾಳೆ ಹಾಗೂ ತೆಂಗು ಬಳೆಗಳು ಒಣಗಿ ನಿಂತಿವೆ. ಫಸಲು ನಷ್ಟವಾದರೆ ಸರ್ಕಾರ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಬಸವಣ್ಣ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.