ADVERTISEMENT

ವಾರಾಂತ್ಯ ಕರ್ಫ್ಯೂ: ಚಾಮರಾಜನಗರದ ಮಾದಪ್ಪ, ರಂಗಪ್ಪನ ದರ್ಶನ ಇಲ್ಲ

​ಪ್ರಜಾವಾಣಿ ವಾರ್ತೆ
Published 7 ಜನವರಿ 2022, 12:55 IST
Last Updated 7 ಜನವರಿ 2022, 12:55 IST
ಮಲೆ ಮಹದೇಶ್ವರಸ್ವಾಮಿ ದೇವಾಲಯದ ನೋಟ
ಮಲೆ ಮಹದೇಶ್ವರಸ್ವಾಮಿ ದೇವಾಲಯದ ನೋಟ   

ಮಹದೇಶ್ವರ ಬೆಟ್ಟ/ಯಳಂದೂರು: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಾರಾಂತ್ಯದಲ್ಲಿ ಕರ್ಫ್ಯೂ ಹೇರಿರುವುದರಿಂದ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯ ಹಾಗೂ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ದೇವಾಲಯದಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶದಂತೆ ಶುಕ್ರವಾರ ಸಂಜೆ (5 ಗಂಟೆ) ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಸೋಮವಾರ (ಜ.10) ಬೆಳಿಗ್ಗೆ7 ಗಂಟೆವರೆಗೆ ದೇವರ ದರ್ಶನ, ಬೆಟ್ಟದಲ್ಲಿ ತಂಗುವ ವ್ಯವಸ್ಥೆ ಸೇರಿದಂತೆ ಯಾವುದೇ ಸೇವೆಗಳು ಹಾಗೂ ಸೌಲಭ್ಯಗಳು ಇರುವುದಿಲ್ಲ. ದೇವಾಲಯದ ಒಳಾವರಣಕ್ಕೆ ಸೀಮಿತವಾಗಿ ಎಂದಿನಂತೆ ಪೂಜೆ ಪುನಸ್ಕಾರಗಳು ನಡೆಯಲಿವೆ‘ ಎಂದು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

’ವಾರದ ದಿನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಎಂದಿನಂತೆ ದೇವಸ್ಥಾನ ತೆರೆಯಲಿದೆ. ದರ್ಶನಕ್ಕೆ ಅವಕಾಶ ಇದೆ. ಒಂದು ಬಾರಿಗೆ 50 ಜನರನ್ನು ಮಾತ್ರ ಒಳಗಡೆ ಬಿಡಲಾಗುವುದು. ಸೋಮವಾರದಿಂದ ಗುರುವಾರದವರೆಗೆ ರಾತ್ರಿ ಕೊಠಡಿ ಕಾಯ್ದಿರಿಸಲು ಅವಕಾಶ ಇದೆ. ಆದರೆ, ಚಿನ್ನದ ತೇರು, ರುದ್ರಾಕ್ಷಿ ವಾಹನ ಸೇರಿದಂತೆ ವಿವಿಧ ಸೇವೆ ಉತ್ಸವಗಳು ಇರುವುದಿಲ್ಲ. ಲಾಡು ಪ್ರಸಾದವೂ ಲಭ್ಯವಿರುವುದಿಲ್ಲ. ದಾಸೋಹ ಸದ್ಯಕ್ಕೆ ಮುಂದುವರೆಯಲಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ಆದೇಶದಂತೆ ನಡೆದುಕೊಳ್ಳಲಾಗುವುದು‘ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ರಂಗನಾಥನ ದರ್ಶನವೂ ಇಲ್ಲ: ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲೂ ಶನಿವಾರ ಭಾನುವಾರ ರಂಗನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ಇಲ್ಲ.

’ಮುಂಜಾನೆ ಅರ್ಚಕರು ಎಂದಿನಂತೆ ಬಾಗಿಲಿಗೆ ಪೂಜೆ ನೆರವೇರಿಸಿ ಬಾಗಿಲನ್ನು ಮುಚ್ಚುತ್ತಾರೆ. ಯಾವುದೇ ವಿಶೇಷ ಪೂಜೆಗಳು ಇರುವುದಿಲ್ಲ‘ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೈ ಎನ್ ಮೋಹನ್ ಕುಮಾರ್ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.