ADVERTISEMENT

ಯಳಂದೂರು | ಸುಂದರ ಗಣಿಗನೂರು ಸೃಷ್ಟಿಕರ್ತೆ ಸುವರ್ಣೆ

ಯಳಂದೂರು: ಕಾಲುವೆ ನೀರು ಹರಿದಾಗ, ಕೆರೆ ಕಟ್ಟೆಗಳಲ್ಲಿ ಜೀವಾಂಕುರ

ನಾ.ಮಂಜುನಾಥ ಸ್ವಾಮಿ
Published 21 ಏಪ್ರಿಲ್ 2020, 19:43 IST
Last Updated 21 ಏಪ್ರಿಲ್ 2020, 19:43 IST
ಯಳಂದೂರು ತಾಲ್ಲೂಕಿನ ಸುವರ್ಣಾವತಿ ನದಿಗೆ ಕಾಲುವೆ ನೀರು ಬಿಟ್ಟಾಗ ಗಣಿಗನೂರು ಭೂ ಪ್ರದೇಶದಲ್ಲಿ ಜೀವಂತಿಕೆಯ ಸೆಲೆ ಮೂಡುತ್ತದೆ
ಯಳಂದೂರು ತಾಲ್ಲೂಕಿನ ಸುವರ್ಣಾವತಿ ನದಿಗೆ ಕಾಲುವೆ ನೀರು ಬಿಟ್ಟಾಗ ಗಣಿಗನೂರು ಭೂ ಪ್ರದೇಶದಲ್ಲಿ ಜೀವಂತಿಕೆಯ ಸೆಲೆ ಮೂಡುತ್ತದೆ   

ಯಳಂದೂರು: ಸುವರ್ಣಾವತಿ ನದಿಗೆ ಕಾಲವೆ ನೀರು ಹರಿಸಿದಾಗ, ಗಣಿಗನೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಡು ಬೇಸಿಗೆಯಲ್ಲೂ ಸುಂದರವಾದ ಅರೆಕಾಲಿಕ ಪರಿಸರ ನಿರ್ಮಾಣವಾಗುತ್ತದೆ.

ಸುವರ್ಣೆಯ ನೀರು ಹರಿಯುತ್ತಲೇಇಲ್ಲಿನ ಕೆರೆ, ಕಟ್ಟೆಗಳಲ್ಲಿ ಜೀವಾಂಕುರ‌ವಾಗುತ್ತದೆ.ಅಳಿವಿನಂಚಿನ ನೀರುನಾಯಿ, ಬಣ್ಣದ ಕೊಕ್ಕರೆ, ಮಳ್ಳಿಮೀನು, ಹಾವು, ಏಡಿ, ಕಪ್ಪೆಗಳ ಸಪ್ಪಳ ಮಾರ್ಧನಿಸುತ್ತವೆ. ಕಾಲುವೆಯಲ್ಲಿ ಹರಿವ ನೀರು ಮೂರ್ನಾಲ್ಕು ಕವಲಾಗಿ, ಸಣ್ಣ ತೊರೆಯಾಗಿ ಹರಿದು ಸುತ್ತಲ ಇಳೆಯನ್ನು ತಂಪಾಗಿಸುತ್ತದೆ.

‘ವನರಾಶಿಯ ನಡುವೆ ಅಪರೂಪದ ಪ್ರಾಣಿ ಸಂಕುಲವೇ ಇಲ್ಲಿ ಕಂಡು ಬರುತ್ತವೆ.ಸದಾ ನೀರನ್ನೆ ನೆಚ್ಚಿಕೊಂಡ ನೀರು ನಾಯಿಗಳು ಕಾಣಿಸುತ್ತವೆ. ಸಮೃದ್ಧ ಸಣ್ಣಮೀನು ಇಣುಕುತ್ತವೆ. ಇವುಗಳನ್ನು ವೀಕ್ಷಿಸಲೆಂದೇ ಪ್ರಕೃತಿ ಪ್ರಿಯರು, ವಿದ್ಯಾರ್ಥಿಗಳು,ಸುತ್ತಲ ಗ್ರಾಮಸ್ಥರು ಇಲ್ಲಿಗೆ ಭೇಟಿ ನೀಡುತ್ತಾರೆ’ ಎಂದು ಹೇಳುತ್ತಾರೆ ಗ್ರಾಮದ ಸುರೇಶ್.

ADVERTISEMENT

ಇತ್ತೀಚಿಗೆ ಕೃಷಿಯಲ್ಲಿ ಬಳಕೆಯಾಗುವ ಕೀಟ ಮತ್ತು ಕಳೆನಾಶಕಗಳು ಇಲ್ಲಿನ ಜಲ, ನೆಲಮೂಲವನ್ನು ವಿಷಮಯ ಮಾಡುತ್ತಿದೆ. ಅಪಾಯಕಾರಿ ಆನೆ ಮೀನಿನ ಹಾವಳಿಯೂ ಹೆಚ್ಚಿದೆ.ಇದರಿಂದ ಭೂ ಪರಿಸರದಲ್ಲಿ ವಾಸಿಸುವ ಅಳಿವಿನಂಚಿನ ಜೀವ ಪ್ರಭೇದಗಳನ್ನು ಸಂರಕ್ಷಿಸಬೇಕುಎನ್ನುತ್ತಾರೆ ಪರಿಸರ ಪ್ರಿಯರು.

ಇಲ್ಲಿ ನೂರಾರು ವರ್ಷಗಳಿಂದ ಸುವರ್ಣಾವತಿ ನೀರು ಹರಿದ ಪರಿಣಾಮಸಣ್ಣಸಣ್ಣ ಕಲ್ಲಿನ ರಚನೆಗಳು ರೂಪಿತವಾಗಿದೆ. ಕಲ್ಲನ್ನು ತಿದ್ದಿ, ತೀಡಿ ಭೂ ಸವಕಳಿಆಗದಂತೆ ತಡೆದಿದೆ. ನೀರು ಸಾಗುವಾಗ ಸಂಚಯಿಸಿದ ಮರಳಿನ ಉಸುಕುಗಳಲ್ಲಿ ಕೆಲವುಗಿಡಗಂಟಿಗಳು ಹತ್ತಾರು ವರ್ಣದ ಪುಷ್ಪಗಳನ್ನು ಸೃಷ್ಟಿಸುತ್ತವೆ. ಇಷ್ಟೆಲ್ಲಾವೈವಿಧ್ಯತೆಯನ್ನು ತುಂಬಿರುವ ತಾಣವನ್ನು ಪ್ರವಾಸೋದ್ಯಮ ತಾಣವಾಗಿಅಭಿವೃದ್ಧಿಗೊಳಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ಭುವಿಯ ಕತೆ ಹೇಳುವ ಕಲ್ಲು:ನೀರಿನಲ್ಲಿ ಸಂಚಯವಾದ ಕಪ್ಪುಶಿಲೆ ಭೂಮಿಯ ಕತೆ ಹೇಳಬಲ್ಲದು. ಇಲ್ಲಿನ ಅಪರೂಪದ
ಜೀವಿಗಳು ಪರಿಸರದ ಕತೆ ಕಟ್ಟಿಕೊಡಬಲ್ಲವು. ಸಮೀಪದ ದೇವಾಲಯ ಚರಿತ್ರೆಕಟ್ಟಿಕೊಡುತ್ತದೆ. ಆದರೆ, ಇಲ್ಲಿನ ಜನವಸತಿಯಿಂದ ಹರಿಯುವ ಕೊಳಚೆ ನೀರು ಹಾಗೆಯೇ ನದಿಗೆ ಸೇರುತ್ತಿದೆ. ನದಿ ಬತ್ತಿದಾಗ ತ್ಯಾಜ್ಯಗಳನ್ನು ತುಂಬಲಾಗುತ್ತದೆ.

‘ತಾಲ್ಲೂಕಿನಲ್ಲಿ ನದಿ ಮರಳು ಮತ್ತು ಇಟ್ಟಿಗೆಗೆ ಮಣ್ಣು ಕೊರೆಯುವ ಹಾವಳಿಯಿಂದ ಭೂಚಿಪ್ಪಿನ ಮೇಲ್ಮೈ ಮಣ್ಣು ನಶಿಸುತ್ತದೆ. ಇದರಿಂದ ಲಕ್ಷಾಂತರ ವರ್ಷಗಳಲ್ಲಿ ರೂಪಿತವಾದಫಲವತ್ತಾದ ಮಣ್ಣು ಹಾಳಾಗುತ್ತಿದೆ. ಕಾಡು ಸವಕಳಿಯಿಂದ ವಾಡಿಕೆ ಮಳೆ (ವಾರ್ಷಿಕ ಮಳೆ200 ಸೆ.ಮೀ) ಪ್ರತಿ ವರ್ಷ ಕುಸಿಯುತ್ತಿದೆ. ಹಾಗಾಗಿ, ವಸುಂಧರೆಗೆ ಹಸಿರಹೊದಿಕೆ ಉಡಿಸಿ, ಭೂ ರಕ್ಷಣೆ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ’ ಎಂದು ಸಸ್ಯತಜ್ಞ ರಾಮಾಚಾರಿ ಅವರು ಹೇಳಿದರು.

ಇಂದು ವಿಶ್ವ ಭೂ ದಿನ
ಕೋವಿಡ್–19 ಜಗತ್ತಿನ ಜನರನ್ನು ಒಂದೇ ವೇದಿಕೆಯಲ್ಲಿ ತಂದಿರುವಾಗ ಭೂದಿನಕ್ಕೆ ಹೆಚ್ಚಿನ ಮನ್ನಣೆ ದೊರೆತಿದೆ. 50 ವರ್ಷಗಳಿಂದ ಭೂ ಪರಿಸರ ಉಳಿಸುವ ದೆಸೆಯಲ್ಲಿ ಶ್ರಮಿಸಲಾಗುತ್ತಿದೆ.

ಏಪ್ರಿಲ್‌ 22 ಭೂ ದಿನಾಚರಣೆಗೆ ಮೀಸಲು. ಈ ಬಾರಿಯ ಘೋಷವಾಕ್ಯ‘ಕ್ಲೈಮೇಟ್ ಆ್ಯಕ್ಷನ್’. ಬದಲಾಗುತ್ತಿರುವ ಹವಾಗುಣವನ್ನು ತಡೆಯಲು ಕ್ರಮ ಕೈಗೊಳ್ಳುವುದುಇದರ ಉದ್ದೇಶ. 195 ದೇಶಗಳು ಇಂಗಾಲ ನಿಯಂತ್ರಿಸುವ ನಿಟ್ಟಿನಲ್ಲಿ ಪ್ಯಾರಿಸ್ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತವೂ ನೈಸರ್ಗಿಕ ವಿಕೋಪಗಳ ತಡೆಗಟ್ಟುವ ನಿಟ್ಟಿನಲ್ಲಿಕಾಡು ಉಳಿಸುವ, ಜಲ, ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನಡಿ ಇಟ್ಟಿದೆ.

ಸ್ವಚ್ಛವಾಗುತ್ತಿದೆ ಭೂಮಿ: ಕೋವಿಡ್‌–19ರ ಕಾರಣಕ್ಕೆ ಭಾರತ ಸೇರಿದಂತೆ ವಿಶ್ವದಾದ್ಯಂತ ಮಾನವನ ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹಾಗಾಗಿ, ಕಲುಷಿತಗೊಂಡಿದ್ದ ಭೂಮಿ, ಪರಿಸರ, ನೀರು, ಗಾಳಿ ಎಲ್ಲವೂ ದಿನೇ ದಿನೇ ಸ್ವಚ್ಛವಾಗುತ್ತಿದ್ದು, ಈ ವರ್ಷದ ‘ಭೂ ದಿನ’ ಹೆಚ್ಚು ಅರ್ಥಪೂರ್ಣವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.