ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ (ಬಿಆರ್‌ಟಿ) ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಅಧಿಸೂಚನೆ ಹೊರಡಿಸಿರುವ ಬೆನ್ನಲ್ಲೇ, ಅರಣ್ಯದ ಅಂಚಿನಲ್ಲಿ ಗಣಿ ಚಟುವಟಿಕೆಗಳು ಹೆಚ್ಚಾಗುವ ಆತಂಕವನ್ನು ಪರಿಸರವಾದಿಗಳು ವ್ಯಕ್ತಪಡಿಸಿದ್ದಾರೆ. ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಕಡಿಮೆಯಾಗಿರುವುದು ಇದಕ್ಕೆ ಕಾರಣ.
ಹುಲಿ ಸಂರಕ್ಷಿತ ಪ್ರದೇಶದ ಗಡಿಯಿಂದ ಕನಿಷ್ಠ 0.5 ಕಿ.ಮೀನಿಂದ ಗರಿಷ್ಠ 6 ಕಿ.ಮೀ ವ್ಯಾಪ್ತಿವರೆಗೆ ‘ಪರಿಸರ ಸೂಕ್ಷ್ಮ ವಲಯ’ ಎಂದು ಕೇಂದ್ರ ಸರ್ಕಾರ ಘೋಷಿಸಿ ಅಧಿಸೂಚನೆ ಹೊರಡಿಸಿದೆ.
ಇದುವರೆಗೆ, ಅರಣ್ಯ ಇಲಾಖೆಯು ಸುಪ್ರೀಂ ಕೋರ್ಟ್ ಸೂಚನೆಯಂತೆ ಅರಣ್ಯದ ಗಡಿಭಾಗದಿಂದ 10 ಕಿ.ಮೀ ವ್ಯಾಪ್ತಿಯವರೆಗೂ ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿತ್ತು. ಹಾಗಾಗಿ, ಕರಿಕಲ್ಲು ಗಣಿಗಾರಿಕೆ, ಕ್ವಾರಿ ಹಾಗೂ ಇನ್ನಿತರ ಯಾವುದೇ ಅಭಿವೃದ್ಧಿ ಚಟುವಟಿಕೆಗಳಿಗೆ ಅವಕಾಶ ನೀಡಿರಲಿಲ್ಲ.
ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಗರಿಷ್ಠ 6 ಕಿ.ಮೀ ನಿಗದಿಪಡಿಸಲಾಗಿದೆ (ಮಲೆ ಮಹದೇಶ್ವರ ವನ್ಯಧಾಮ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶ ಬಳಿ ಮಾತ್ರ ಇದು ಕಡಿಮೆ ಇದೆ). ಹಿಂದಿನ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಹೋಲಿಸಿದರೆ 4 ಕಿ.ಮೀ ಕಡಿಮೆಯಾಗಿದೆ. ನಿಗದಿತ ವ್ಯಾಪ್ತಿಯ ಹೊರಗಡೆ ಗಣಿಗಾರಿಕೆ, ಕ್ವಾರಿ, ಕ್ರಷರ್ ಸೇರಿದಂತೆ ಇತರ ನಿರ್ಬಂಧಿತ ಚಟುವಟಿಕೆಗಳು ನಡೆಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಹಾಗಾಗಿ, ಅಲ್ಲಿ ಮತ್ತೆ ಗಣಿಗಾರಿಕೆ ಅಥವಾ ಬೇರೆ ಯಾವುದೇ ಚಟುವಟಿಕೆಗಳು ಆರಂಭಗೊಂಡರೂ ಆಶ್ಚರ್ಯವಿಲ್ಲ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು ಹಾಗೂ ಪರಿಸರವಾದಿಗಳು.
‘ಇದುವರೆಗೂ ನಾವು 10 ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಿದ್ದೆವು. ಸರ್ಕಾರದ ಅಧಿಸೂಚನೆಯ ಪ್ರಕಾರ 49 ಗ್ರಾಮಗಳು ಈ ವ್ಯಾಪ್ತಿಯಲ್ಲಿವೆ. ಈ ಪೈಕಿ ಮೂರು ಗ್ರಾಮಗಳಲ್ಲಿ 1 ಕಿ.ಮೀ ಮಾತ್ರ ಗುರುತಿಸಲಾಗಿದೆ’ ಎಂದು ಬಿಆರ್‌ಟಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕರಿ ಕಲ್ಲು ಗಣಿಗಾರಿಕೆ ಹೆಚ್ಚು ನಡೆಯುತ್ತಿರುವಚಾಮರಾಜನಗರ ತಾಲ್ಲೂಕಿನ ಜ್ಯೋತಿಗೌಡನಪುರ, ಯಳಂದೂರಿನ ತಾಲ್ಲೂಕಿನ ಯರಗಂಬಳ್ಳಿ ಮತ್ತು ಗುಂಬಳ್ಳಿ ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಒಂದು ಕಿ.ಮೀಗೆ ನಿಗದಿಪಡಿಸಲಾಗಿದೆ.
‘ಈ ಪ್ರದೇಶದಲ್ಲಿ ಮಾತ್ರ ಹೆಚ್ಚು ಗುಣಮಟ್ಟದ ಕರಿಕಲ್ಲು ಸಿಗುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಈ ಗ್ರಾಮಗಳಲ್ಲಿ ವ್ಯಾಪ್ತಿಯನ್ನು ಸರ್ಕಾರ ಕಡಿಮೆ ಮಾಡಿರುವ ಸಾಧ್ಯತೆ ಇದೆ’ ಎಂದು ಭೂ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕೂಲಂಕಷ ಚರ್ಚೆಯ ನಂತರ ನಿರ್ಧಾರ: ‘ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಎಲ್ಲ ವಿಚಾರಗಳ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಮಾಡುವ ಶಿಫಾರಿಸಿನ ಮೇಲೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತದೆ. ಅದಕ್ಕೂ ಮೊದಲು ಜಿಲ್ಲಾಮಟ್ಟದಲ್ಲಿ ಎಲ್ಲ ವಿಷಯಗಳನ್ನು ಗಣನೆಗೆ ತೆಗೆದುಕೊಂಡು ಸಂಬಂಧಿಸಿದ ಇಲಾಖೆಗಳು ಸಮಗ್ರವಾಗಿ ಚರ್ಚಿಸಿದ ನಂತರವಷ್ಟೇ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ’ ಎಂದು ಪಿ.ಶಂಕರ್ ಮಾಹಿತಿ ನೀಡಿದರು.
ವಿಳಂಬವಾಗಿ ಅಧಿಸೂಚನೆ
ಬೇರೆ ವನ್ಯಧಾಮಗಳಿಗೆ ಹೋಲಿಸಿದರೆ,ಬಿಆರ್‌ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ವಲಯ ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಾಗ ವಿಳಂಬವಾಗಿದೆ.
ಇದಕ್ಕೂ ಮೊದಲು ಎರಡು ಬಾರಿ ಅಂದರೆ, 2016 ಮತ್ತು 2018ರಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.