ADVERTISEMENT

1,800 ಬುಡಕಟ್ಟು ಕುಟುಂಬಕ್ಕೆ ವಿದ್ಯುತ್

₹ 42 ಕೋಟಿ ವೆಚ್ಚದಲ್ಲಿ ಭೂಗತ ವಿದ್ಯುತ್ ಕೇಬಲ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 19:12 IST
Last Updated 27 ಅಕ್ಟೋಬರ್ 2024, 19:12 IST
<div class="paragraphs"><p> ವಿದ್ಯುತ್</p></div>

ವಿದ್ಯುತ್

   

ಚಾಮರಾಜನಗರ: ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ 1,800 ಕುಟುಂಬಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಲು ₹ 42 ಕೋಟಿ ವೆಚ್ಚದಲ್ಲಿ ಭೂಗತ (ಯುಜಿ) ಕೇಬಲ್‌ ಅಳವಡಿಕೆ ಕಾಮಗಾರಿ ಶೀಘ್ರ ಆರಂಭವಾಗಲಿದೆ.

ಜಿಲ್ಲಾಡಳಿತ ಹಾಗೂ ‘ಸೆಸ್ಕ್‌’ನಿಂದ 15 ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ. 4 ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಉದ್ದೇಶಿತ ಕಾಮಗಾರಿ ಪೂರ್ಣಗೊಂಡರೆ ಮೊದಲ ಬಾರಿಗೆ ಆದಿವಾಸಿಗಳ ಹಾಡಿಗೆ ವಿದ್ಯುತ್ ಸಂಪರ್ಕ ದೊರೆತಂತಾಗಲಿದೆ.

ADVERTISEMENT

ಹಿಂದೆ ವಿದ್ಯುತ್ ಕಂಬಗಳ ಮೂಲಕ ಹಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡುವ ಜಿಲ್ಲಾಡಳಿತದ ಪ್ರಸ್ತಾವಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿತ್ತು. ಕಾಡಿನೊಳಗೆ ವಿದ್ಯುತ್ ಮಾರ್ಗ ಬಂದರೆ ವಿದ್ಯುತ್ ಅವಘಡಗಳು ಸಂಭವಿಸಿ ವನ್ಯಜೀವಿಗಳಿಗೆ ಅಪಾಯವಾಗಬಹುದು ಹಾಗೂ ಅರಣ್ಯಕ್ಕೆ ಹಾನಿಯಾಗಬಹುದು ಎಂಬ ಕಾರಣಕ್ಕೆ ಪ್ರಸ್ತಾವ ತಿರಸ್ಕರಿಸಲಾಗಿತ್ತು. ಈ ಕಾರಣದಿಂದ ಯುಜಿ ಕೇಬಲ್‌ ಅಳವಡಿಕೆ ಪ್ರಸ್ತಾವ ರೂಪಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

‘ಹಿಂದೆ ಹಾಡಿಗಳಿಗೆ ಸೋಲಾರ್ ಉಪಕರಣಗಳ ಮೂಲಕ ವಿದ್ಯುತ್ ಸಂಪರ್ಕ ನೀಡುವ ಪ್ರಯತ್ನ ನಡೆದಿತ್ತು. ಆದರೆ, ನಿರ್ವಹಣೆ ಕೊರತೆಯಿಂದ ನಿರೀಕ್ಷಿತ ಯಶಸ್ಸು ದೊರೆತಿರಲಿಲ್ಲ. ಇದೀಗ ಯುಜಿ ಕೇಬಲ್ ಅಳವಡಿಕೆಯಿಂದ ವಿದ್ಯುತ್ ಸಂಪರ್ಕ ದೊರೆತರೆ ಆದಿವಾಸಿಗಳ ಜೀವನಮಟ್ಟ ಸುಧಾರಿಸಲಿದೆ. 1,854 ಕುಟಂಬಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.

‘ಜಿಲ್ಲಾಡಳಿತ ಸೆಸ್ಕ್‌ ಜೊತೆಗೂಡಿ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಅರಣ್ಯ ಇಲಾಖೆಯಿಂದ ಅಗತ್ಯ ಅನುಮತಿ ಕೋರಿ 6 ತಿಂಗಳ ಹಿಂದೆಯೇ ಯೋಜನೆಯ ಪ್ರಸ್ತಾವ ಸಲ್ಲಿಸಿತ್ತು. ಇದೀಗ ಯೋಜನೆ ಅಂತಿಮ ಹಂತದಲ್ಲಿದೆ. ಮುಖ್ಯಮಂತ್ರಿಯವರ ಸೂಚನೆಯಂತೆ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ 15 ದಿನಗಳಲ್ಲಿ ಆರಂಭವಾಗಲಿದೆ’ ಎಂದು ತಿಳಿಸಿದರು.

‘ಹಾಡಿಗಳಿಗೆ ಭೂಗತ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಸ್ತಾವ ಸಂಬಂಧ ಎರಡು ಪ್ರದೇಶಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಬಾಕಿ ಇದೆ. ಪ್ರಾಣಿಗಳ ಆವಾಸಸ್ಥಾನಕ್ಕೆ ಅಡಚಣೆಯಾಗದಂತೆ, ಕನಿಷ್ಠ ಹಸ್ತಕ್ಷೇಪದೊಂದಿಗೆ ಪ್ರಸ್ತಾವವನ್ನು ಪರಿಷ್ಕರಿಸಲಾಗಿದೆ’ ಎಂದು ಮಲೆ ಮಹದೇಶ್ವರ ಬೆಟ್ಟ ವಿಭಾಗದ ಉಪ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.

‘ಅರಣ್ಯದೊಳಗೆ ವಿದ್ಯುತ್ ಅವಘಡಗಳು ಸಂಭವಿಸಬಹುದು ಎಂಬ ಕಾರಣಕ್ಕೆ ವಿದ್ಯುತ್ ಕಂಬಗಳ ಮೂಲಕ ಆದಿವಾಸಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಪ್ರಸ್ತಾವವನ್ನು ಹಿಂದೆ ಅರಣ್ಯ ಇಲಾಖೆ ತಿರಸ್ಕರಿಸಿತ್ತು. ಹಾಗಾಗಿ, ಯುಜಿ ಕೇಬಲ್‌ ಅಳವಡಿಕೆಗೆ ನಿರ್ಧರಿಸಲಾಯಿತು. ಇಂಧನ ಇಲಾಖೆಯ ಕಾರ್ಯದರ್ಶಿ ಜೊತೆ ಚರ್ಚಿಸಲಾಗಿದ್ದು ಅನುಷ್ಠಾನಕ್ಕೆ ಅಗತ್ಯ ಅನುದಾನ ಬಿಡುಗಡೆಯ ಭರವಸೆ ನೀಡಿದ್ದಾರೆ. ಮುಂದೆ ಮಡಿಕೇರಿ, ಹಾಸನ ಹಾಗೂ ಸಕಲೇಶಪುರ ತಾಲ್ಲೂಕಿನ ಹಾಡಿಗಳಲ್ಲೂ ಇಂತಹ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶವಿದೆ’ ಎಂದು ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.