ಯಳಂದೂರು: ತಾಲ್ಲೂಕಿನಲ್ಲಿ ಬರದ ಬೇಗೆ ಹೆಚ್ಚಾಗುತ್ತಿದೆ. ಬಿಸಿಲ ತಾಪವೂ ಏರಿಕೆಯತ್ತ ದಾಪುಗಾಲು ಇಟ್ಟಿದೆ. ಜೋಳ, ಭತ್ತ, ಕಬ್ಬು ಹಾಗೂ ಚಿಯಾ ಬೆಳೆಗಳು ಬಾಡುತ್ತಿವೆ. ಈ ನಡುವೆ ವಿದ್ಯುತ್ ನೀಡುವ ಅವಧಿ ಕಡಿತಗೊಂಡ ಪರಿಣಾಮ, ಬಾವಿ, ಕೊಳವೆಬಾವಿಗಳಲ್ಲಿ ನೀರು ಹರಿಯುತ್ತಿಲ್ಲ. ಹೀಗಾಗಿ, ಕೈಗೆ ಬಂದ ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ಸಾಗುವಳಿದಾರರು ದಿನ ನೂಕುತ್ತಿದ್ದಾರೆ.
ಈಚೆಗೆ ಕೃಷಿಕರು ವಾಣಿಜ್ಯ ಬೆಳೆ ಚಿಯಾ ಬಿತ್ತನೆ ಮಾಡಿದ್ದಾರೆ. ಬಿಳಿಗಿರಿರಂಗನಬೆಟ್ಟ ಮತ್ತು ಕಾಡಂಚಿನ ಪ್ರದೇಶಗಳಲ್ಲಿ ಮೊದಲ ಸಲ ಪ್ರಾಯೋಗಿಕ ಕೃಷಿ ನಡೆದಿದೆ. ಬೆಟ್ಟ, ಗುಡ್ಡಗಳಲ್ಲಿ ಬೆಳೆ ಒಣಗುತ್ತಿದ್ದರೆ, ಬಯಲು ಪ್ರದೇಶದಲ್ಲಿ ಕೊಳವೆ ಬಾವಿಯಿಂದ ನೀರು ಹರಿಸಿ, ಬೆಳೆ ಉಳಿಸುವತ್ತ ಚಿತ್ತ ಹರಿಸಿದ್ದಾರೆ. ಆದರೆ, ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದ ಪರಿಣಾಮ ಬೆಳೆ ಕೈಸೇರದ ಪರಿಸ್ಥಿತಿ ಅನ್ನದಾತರಿಗೆ ಎದುರಾಗಿದೆ.
‘ಸೌತೆ, ಹಸಿಮೆಣಸು, ತರಕಾರಿ ಸೇರಿದಂತೆ ವೈವಿಧ್ಯಮಯ ಬೆಳೆ ಬೆಳೆದರೂ ನಿರೀಕ್ಷಿತ ಆದಾಯ ಬರಲಿಲ್ಲ. ಹಾಗಾಗಿ, ಒಂದು ಎಕರೆ ಪ್ರದೇಶದಲ್ಲಿ ಪ್ರತ್ಯೇಕ ಪ್ಲಾಟ್ ನಿರ್ಮಿಸಿ ಚಿಯಾ ಬಿತ್ತನೆ ಮಾಡಿದ್ದೇನೆ. ಎಕೆರೆಗೆ ₹8000 ಖರ್ಚು ಮಾಡಿದ್ದು, ಆರಂಭದಲ್ಲಿ ಸುರಿದ ಮಳೆಗೆ ಬೆಳೆಯೂ ಬಂದಿದೆ. ತಡ ಮುಂಗಾರು ಸುರಿಯದ ಕಾರಣ ಕೊಳವೆ ಬಾವಿ ಬಳಸಿಕೊಂಡು ನೀರು ಹಾಯಿಸುತ್ತಿದ್ದೇನೆ. ಆದರೆ. ಸೆಸ್ಕ್ ವಿದ್ಯುತ್ ಪೂರೈಸುವ ಅವಧಿ ಕಡಿತಗೊಳಿಸಿದೆ. ಇದರಿಂದ ನೀರು ಕಾಣದ ಬೆಳೆ ಬಾಡುತ್ತಿದ್ದು, ಹೂ ಬಿಡುವ ಹಂತದಲ್ಲಿ ಚಿಯಾ ಒಣಗುವ ಪರಿಸ್ಥಿತಿಗೆ ಬಂದಿದೆ’ ಎಂದು ಆಮೆಕೆರೆ ಸಮೀಪದ ಕೃಷಿಕ ಮಹದೇವಸ್ವಾಮಿ ಹೇಳಿದರು.
ಮಳೆ ಬಂದರೆ ಚಿಯಾ: ‘ಪುರಾಣಿಪೋಡಿನ ಸುತ್ತಮುತ್ತಲೂ ಹತ್ತಾರು ಎಕೆರೆ ಪ್ರದೇಶದಲ್ಲಿ ಚಿಯಾ ಬೇಸಾಯ ಮಾಡಲಾಗಿದೆ. ಬೆಟ್ಟದ ಸುತ್ತಮುತ್ತ ಆಗಾಗ ತುಂತುರು ಮಳೆ ಸುರಿಯುವುದರಿಂದ ಚಿಯಾ ಚಿಗುರಿದೆ. ವಾತಾವರಣದಲ್ಲಿ ಉತ್ತಮ ಹವೆ ಮುಂದುವರಿದಿದ್ದು, ಮಳೆ ಬೀಳುವ ನಿರೀಕ್ಷೆ ಮೂಡಿಸಿದೆ. 90 ರಿಂದ 100 ದಿನದಲ್ಲಿ ಕೊಯ್ಲಿಗೆ ಬರುವ ನಿರೀಕ್ಷೆ ಇದೆ. ಜಾನುವಾರು ಮತ್ತು ಪ್ರಾಣಿಗಳ ಉಪಟಳವೂ ಈ ಬೆಳೆಯನ್ನು ಕಾಡದು. ಕಡಿಮೆ ಖರ್ಚು ಬೇಡುವ ಚಿಯಾ 1 ಎಕರೆಗೆ 4 ರಿಂದ 5 ಕ್ವಿಂಟಲ್ ಪಡೆಯಬಹುದು. ಧಾರಣೆ ಗುಣಮಟ್ಟ ಆಧರಿಸಿ ಕ್ವಿಂಟಲ್‌ಗೆ ₹7000ದಿಂದ ₹20 ಸಾವಿರ ತನಕ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ರೈತ ಮಹಿಳೆ ಸುಂದರಮ್ಮ ಮತ್ತು ಮಹದೇವಮ್ಮ.
1 ಗಂಟೆ ವಿದ್ಯುತ್: ಸೆಸ್ಕ್ ಪ್ರತಿದಿನ 5ರಿಂದ 6 ಗಂಟೆ ವಿದ್ಯುತ್ ಪೂರೈಸುತ್ತಿತ್ತು. ಬೇಸಿಗೆ ಮುಂದುವರಿದಂತೆ ವಿದ್ಯುತ್ ನೀಡುವ ಅವಧಿಯನ್ನು ಇಳಿಸಿದೆ. ಈಗ 1 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದೆ. ಉಳಿದ ಸಮಯ ರಿಪೇರಿ ಮತ್ತು ಸಿಂಗಲ್ ಫೇಸ್ ಮತ್ತಿತರ ಕಾರಣ ನೀಡಲಾಗುತ್ತದೆ. ಇದರಿಂದ ಚಿಯಾ ಸೇರಿದಂತೆ ಮೆಕ್ಕೆಜೋಳ, ಕಬ್ಬು, ಸೂರ್ಯಕಾಂತಿ ಹಾಗೂ ತರಕಾರಿ ಬೆಳೆಗಾರರು ಆತಂಕಕ್ಕೆ ಸಿಲುಕಿದ್ದು, ಬೆಳೆ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಗೌಡಹಳ್ಳಿ ಹೊರವಲಯದ ರೈತ ಪ್ರದೀಪ್ ಅಲವತ್ತುಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.