ಚಾಮರಾಜನಗರ: ವಿಚಾರವಾದಿ ಕೆ.ಎಸ್.ಭಗವಾನ್ ಹಾಗೂ ಇತರರು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಕೆ.ಗುಡಿಯಲ್ಲಿ ಸಫಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಆನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿದೆ.
ಸಫಾರಿ ವಾಹನದ ಚಾಲಕ ವಾಹನವನ್ನು ಕ್ಷಿಪ್ರವಾಗಿ ಹಿಮ್ಮುಖವಾಗಿ ತೆಗೆದಿದ್ದರಿಂದ ಅನಾಹುತ ತಪ್ಪಿದೆ. ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭಗವಾನ್ ಸೇರಿದಂತೆ ಎಂಟು ಮಂದಿ ಸಫಾರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ದಾರಿಯಲ್ಲಿ ಆನೆಯ ಹಿಂಡು ಕಂಡು ಬಂತು. ಹಿಂಡಿನಲ್ಲಿ ಮರಿಯಾನೆಯೂ ಇತ್ತು.
ಈ ವೇಳೆ ಹೆಣ್ಣಾನೆಯೊಂದು, ಸಫಾರಿ ವಾಹನದತ್ತ ನುಗ್ಗಿತು. ಎಚ್ಚೆತ್ತುಕೊಂಡ ಚಾಲಕ ತಕ್ಷಣವೇ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾರೆ. ಒಂದಷ್ಟು ದೂರ ವಾಹನವನ್ನು ಅಟ್ಟಿಸಿಕೊಂಡು ಬಂದ ಆನೆ ನಂತರ ರಸ್ತೆ ಮಧ್ಯೆ ನಿಂತಿತು.
‘ಹಿಂಡಿನಲ್ಲಿ ಒಂದು ಮರಿಯಾನೆ ಸೇರಿ ಏಳು ಆನೆಗಳಿದ್ದವು. ಒಂದು ಆನೆ ನಮ್ಮ ವಾಹನದತ್ತ ಮುನ್ನುಗಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿದೆ’ ಎಂದು ಭಗವಾನ್ ಜೊತೆ ಸಫಾರಿಗೆ ಹೋಗಿದ್ದ ಚಾಮರಾಜನಗರದ ಮುಖಂಡ ವೆಂಕಟರಮಣಸ್ವಾಮಿ (ಪಾಪು) ‘ಪ್ರಜಾವಾಣಿ’ಗೆ ತಿಳಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.