ADVERTISEMENT

ಬಂಡೀಪುರ: ವಿದ್ಯುತ್‌ ತಂತಿ ಸ್ಪರ್ಶಿಸಿ ಅಸ್ವಸ್ಥಗೊಂಡಿದ್ದ ಹೆಣ್ಣಾನೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2023, 15:56 IST
Last Updated 14 ಫೆಬ್ರುವರಿ 2023, 15:56 IST
   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವನ್ಯಜೀವಿ ವಲಯದ ವ್ಯಾಪ್ತಿಯ ಬರಗಿ ಗ್ರಾಮದಲ್ಲಿ ಜಮೀನೊಂದಕ್ಕೆ ಅಳವಡಿಸಲಾಗಿದ್ದ ಅಕ್ರಮ ವಿದ್ಯುತ್‌ ತಂತಿ ಬೇಲಿಯನ್ನು ಸ್ಪ‍ರ್ಶಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಹೆಣ್ಣು ಕಾಡಾನೆಯ ಪ್ರಾಣ ಉಳಿಸುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಪಶುವೈದ್ಯರು ಯಶಸ್ವಿಯಾಗಿದ್ದಾರೆ.

ಚಿಕಿತ್ಸೆಯ ಬಳಿಕ 25ರಿಂದ 30 ವರ್ಷ ವಯಸ್ಸಿನ ಹೆಣ್ಣಾನೆ ವಾಪಸ್‌ ಕಾಡಿನತ್ತ ಹೆಜ್ಜೆ ಹಾಕಿದೆ.

ವಿದ್ಯುತ್‌ ಆಘಾತದ ನಂತರ ತೀವ್ರವಾಗಿ ನಿತ್ರಾಣಗೊಂಡಿದ್ದ ಆನೆಗೆ ಪಶುವೈದ್ಯ ಡಾ.ವಾಸೀಂ ಮಿರ್ಜಾ ಅವರು ಚಿಕಿತ್ಸೆ ನೀಡಿದ್ದರು. ಚೇತರಿಕೆ ಕಂಡ ಬಳಿಕ ಜೆಸಿಬಿ ಸಹಾಯದಿಂದ ಆನೆಯನ್ನು ಎದ್ದು ನಿಲ್ಲಿಸಲಾಯಿತು. ಆನೆಯ ಪ್ರಾಣಕ್ಕೆ ಅಪಾಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ನಾಗಪಟ್ಟಣ ಗ್ರಾಮದ ಪುತ್ರನಪುರರಾಜು ಎಂಬುವರಿಗೆ ಸೇರಿದ ಜಮೀನಿನಲ್ಲಿ ಆನೆ ವಿದ್ಯುತ್‌ ಆಘಾತಕ್ಕೆ ಒಳಗಾಗಿತ್ತು. ಬೆಳೆ ರಕ್ಷಣೆಗಾಗಿ ಹಾಕಲಾಗಿದ್ದ ತಂತಿ ಬೇಲಿಗೆ ಜಮೀನಿನ ಮಾಲೀಕ ಅಕ್ರಮವಾಗಿ ವಿದ್ಯುತ್‌ ಹರಿಸಿದ್ದರು.

ಮಂಗಳವಾರ ಬೆಳಿಗ್ಗೆ ಹೆಣ್ಣಾನೆ ಜಮೀನಿನಲ್ಲಿ ಬಿದ್ದು ನರಳಾಡುತ್ತಿರುವ ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

‘ಎರಡು ತೆಂಗಿನ ಮರಗಳ ನಡುವೆ ನೆಲದಿಂದ ಎರಡು ಅಡಿ ಎತ್ತರದಲ್ಲಿ ತಂತಿ ಬೇಲಿಯನ್ನು ಹಾಕಿ ಅನಧಿಕೃತವಾಗಿ ವಿದ್ಯುತ್‌ ಸಂಪರ್ಕ ನೀಡಿರುವುದು ಕಂಡು ಬಂದಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಅವರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಹೇಳಿದ್ದಾರೆ.

ಎಸಿಎಫ್‌ ಜಿ.ರವೀಂದ್ರ, ಓಂಕಾರ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಕೆ.ಪಿ.ಸತೀಶ್‌ ಕುಮಾರ್, ವಿಶೇಷ ಹುಲಿ ಸಂರಕ್ಷಣಾ ದಳ, ಪ್ಲೇಟೋನ್-1ರ ವಲಯ ಅರಣ್ಯಾಧಿಕಾರಿ ಎನ್.ಪಿ.ನವೀನ್‌ಕುಮಾರ್, ಮದ್ದೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್ ಸ್ಥಳದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.