ADVERTISEMENT

ಗುಂಡ್ಲುಪೇಟೆ: ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ‘ಇಂಗ್ಲಿಷ್‌ ಕಾರ್ನರ್‌’

ಅಂಕಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಮಹೇಶ್ವರಿ ಪ್ರಯತ್ನ

ಮಲ್ಲೇಶ ಎಂ.
Published 22 ಅಕ್ಟೋಬರ್ 2022, 5:18 IST
Last Updated 22 ಅಕ್ಟೋಬರ್ 2022, 5:18 IST
ಮಕ್ಕಳಿಗೆ ಇಂಗ್ಲಿಷ್‌ ಕಲಿಸಲು ಶಿಕ್ಷಕಿ ಮಹೇಶ್ವರಿ ಅವರು ನಡೆಸಿದ ಸ್ಪರ್ಧೆಯೊಂದರ ನೋಟ
ಮಕ್ಕಳಿಗೆ ಇಂಗ್ಲಿಷ್‌ ಕಲಿಸಲು ಶಿಕ್ಷಕಿ ಮಹೇಶ್ವರಿ ಅವರು ನಡೆಸಿದ ಸ್ಪರ್ಧೆಯೊಂದರ ನೋಟ   

ಗುಂಡ್ಲುಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಗರ ವಿದ್ಯಾರ್ಥಿಗಳಂತೆ ಇಂಗ್ಲಿಷ್‌ ಭಾಷೆಯಲ್ಲಿ ಹಿಡಿತ ಸಾಧಿಸಬೇಕು ಎಂಬ ಉದ್ದೇಶದಿಂದ ತಾಲ್ಲೂಕಿನ ಶಿಕ್ಷಕಿಯೊಬ್ಬರು ಶಾಲಾ ಮಕ್ಕಳಿಗೆ ವಿನೂತನ ರೀತಿಯಲ್ಲಿ ಇಂಗ್ಲಿಷ್‌ ಕಲಿಸಲು ಪ್ರಯತ್ನಿಸುತ್ತಾ ಇದ್ದಾರೆ.

ತಾಲ್ಲೂಕಿನಅಂಕಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಮಹೇಶ್ವರಿ ಅವರು, ‘ಇಂಗ್ಲಿಷ್‌ ಕಾರ್ನರ್‌’ ಎಂಬ ಪರಿಕಲ್ಪನೆಯನ್ನು ರೂಪಿಸಿದ್ದು, ಇದರ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನುನಡೆಸಿ ಮಕ್ಕಳು ಸುಲಭವಾಗಿ ಇಂಗ್ಲಿಷ್ ಕಲಿಸಲು ಪ್ರೇರೇಪಿಸುತ್ತಿದ್ದಾರೆ.

ಪ್ರತಿ ದಿನ ಬಳಸುವ ಪದಗಳು, ಮಾನವ ಸಂಬಂಧಗಳು, ವಸ್ತುಗಳು, ದೇಹದ ಭಾಗಗಳ ಇಂಗ್ಲಿಷ್‌, ಕನ್ನಡದ ಹೆಸರುಗಳನ್ನು ತರಗತಿಯ ಗೋಡೆಯಲ್ಲಿ ಅವರು ಬರೆಸಿದ್ದಾರೆ.

ADVERTISEMENT

ಮಕ್ಕಳು ಇಂಗ್ಲಿಷ್‌ ಸಂವಹನದಲ್ಲಿ ಪರಿಣತಿ ಸಾಧಿಸಲು ರಸಪ್ರಶ್ನೆ ಕಾರ್ಯಕ್ರಮ, ಪದಗಳನ್ನು ಬರೆಸುವುದು, ಹಕ್ಕಿಗಳು, ತರಕಾರಿ, ದಿನ ಬಳಕೆಯ ವಿವಿಧ ವಸ್ತುಗಳು ಮರ, ಗಿಡ, ಹೂ, ಹಣ್ಣುಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಗುರುತಿಸುವ ಸ್ಪರ್ಧೆಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಚಾರ್ಟ್‌ಗಳನ್ನು ಬರೆದು ಪ್ರತಿನಿತ್ಯ ಮಕ್ಕಳಿಗೆ ಹೊಸ ಇಂಗ್ಲಿಷ್‌ ಪದಗಳನ್ನು ಕಲಿಯುವಂತೆ ಪ್ರೇರಣೆ ನೀಡುತ್ತಿದ್ದಾರೆ.

ಇಲ್ಲಿ ನಾಲ್ಕನೇ ತರಗತಿಯಿಂದ ಮಕ್ಕಳಿಗೆ ಇಂಗ್ಲಿಷ್‌ ಹೇಳಿ ಕೊಡಲಾಗುತ್ತದೆ. ಕಂಪ್ಯೂಟರ್‌ ಶಿಕ್ಷಣವನ್ನೂ ನೀಡಲಾಗುತ್ತಿದೆ.

‘ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸಲು ಎಲ್ಲರೂ ಪ್ರಯತ್ನಿಸುತ್ತಿದ್ದೇವೆ. ಇಂಗ್ಲಿಷ್‌ ಕಲಿಸಲು ಹೆಚ್ಚು ಒತ್ತು ನೀಡುತ್ತಿದ್ದೇನೆ. ಗ್ರಾಮಸ್ಥರೂ ಸಹಕಾರ ನೀಡುತ್ತ ಶಾಲೆಯ ಮಕ್ಕಳ ಕಲಿಕೆಗೆ ಬೆನ್ನೆಲುಬಾಗಿದ್ದಾರೆ’ ಎಂದು ಶಿಕ್ಷಕಿ ಮಹೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ವರ್ಷ ಈ ಶಾಲೆಯ ಮಕ್ಕಳು ಆದರ್ಶ ವಿದ್ಯಾಲಯಗಳು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ.

ಈ ಶಾಲೆಯ ಶಿಕ್ಷಣದ ವ್ಯವಸ್ಥೆ, ಶಿಕ್ಷಕರ ಕರ್ತವ್ಯ ನಿಷ್ಠೆ ಮತ್ತು ಮಕ್ಕಳಿಗೆ ಕಲಿಕೆಗೆ ಪ್ರೇರೇಪಿಸುವ ವಿಧಾನಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಕಲಿಕೆಗೆ ಪೂರಕ ವಾತಾವರಣ
ಶಾಲೆಯಲ್ಲಿ 1ರಿಂದ 7ತರಗತಿಯ ವರೆಗೆ 150 ಮಕ್ಕಳಿದ್ದು, ಉತ್ತಮ ಮೌಲ್ಯಯುತ ಶಿಕ್ಷಣ ದೊರೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ಕೆಲವು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ವರ್ಗಾವಣೆ ಮಾಡಿಸಿ ಈ ಶಾಲೆಗೆ ಪ್ರತಿ ವರ್ಷ ಸೇರಿಸುತ್ತಿದ್ದಾರೆ.

ಶಿಕ್ಷಕಿ ಮಹೇಶ್ವರಿ ಹಾಗೂ ಮುಖ್ಯ ಶಿಕ್ಷಕ ನಾಗಮಲ್ಲೇಗೌಡ ಅವರು ತಮ್ಮ ಖರ್ಚಿನಿಂದ ಮಕ್ಕಳಿಗೆ ಅಗತ್ಯವಿರುವ ಲ್ಯಾಪ್‌ಟಾಪ್, ಚಾರ್ಟ್‌ಗಳನ್ನು ಖರೀದಿ ಮಾಡಿದ್ದಾರೆ. ದಾನಿಗಳು, ಗ್ರಾಮಸ್ಥರು, ಪಂಚಾಯಿತಿ ಮತ್ತು ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಸ್ಮಾರ್ಟ್ ಕ್ಲಾಸ್ ಕಲಿಕೆಗೆ ಪ್ರಾಜೆಕ್ಟ್‌ಗಳು, ಶುದ್ದಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ಇಲ್ಲಿವೆ.

*
ಶಿಕ್ಷಕಿ ಮಹೇಶ್ವರಿ ಸ್ವಂತ ಆಸಕ್ತಿಯಿಂದ ಮಕ್ಕಳಿಗೆ ಇಂಗ್ಲಿಷ್ ಕಲಿಸಲು ತರಗತಿ ಕೊಠಡಿಯನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ
-ಎಸ್.ಸಿ.ಶಿವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.