ಕೊಳ್ಳೇಗಾಲ: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಅಲ್ಲಿ ಓದಿದರೆ ಮಕ್ಕಳು ಏನೂ ಸಾಧನೆ ಮಾಡುವುದಿಲ್ಲ ಎಂಬ ಮನಃಸ್ಥಿತಿ ಅನೇಕ ಪೋಷಕರಲ್ಲಿದೆ.
ಆದರೆ, ನಗರದ ಮುಡಿಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೆ ಅಪವಾದ. ಇಲ್ಲಿ ಮಕ್ಕಳು ಉತ್ತಮವಾಗಿ ಇಂಗ್ಲಿಷ್ ಕಲಿಯುತ್ತಿದ್ದಾರೆ. ಆಟ, ನೃತ್ಯದ ಮೂಲಕ ಇಂಗ್ಲಿಷ್ ಭಾಷೆ ಹೇಳಿಕೊಡಲಾಗುತ್ತದೆ. ಮಕ್ಕಳು ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಾರೆ.
ಶಾಲೆಯಲ್ಲಿ 1 ರಿಂದ 7ನೇ ತರಗತಿಗಳಿದ್ದು, 175 ಮಕ್ಕಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 6 ಮಂದಿ ನುರಿತ ಶಿಕ್ಷಕರು ಇದ್ದಾರೆ. ಕಂಪ್ಯೂಟರ್ ಕೊಠಡಿ, ಆಟದ ಮೈದಾನ, ತರಗತಿ, ಗ್ರಂಥಾಲಯ, ಕ್ರೀಡಾ ಕೊಠಡಿ, ಗೋಡೆ ಬರಹಗಳ ಚಿತ್ರ ಹಾಗೂ ಆಕರ್ಷಕವಾದ ಪರಿಸರ ಇದೆ.
'ಮಕ್ಕಳು ಅತ್ಯಂತ ಆಸಕ್ತಿಯಿಂದ ಶಾಲೆಗೆ ಬರುತ್ತಾರೆ. ಯಾವ ಮಕ್ಕಳು ಶಾಲೆಗೆ ತಪ್ಪಿಸಿಕೊಳ್ಳುವುದಿಲ್ಲ' ಎಂದು ಹೇಳುತ್ತಾರೆ ಶಿಕ್ಷಕ ಪಾಂಡುರಂಗಯ್ಯ.
ಮಕ್ಕಳಿಗೆ ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆ. ಸರಳ ಹಾಗೂ ಸುಲಭವಾಗಿ ಮಕ್ಕಳಿಗೆ ಕಲಿಸುವುದು ದೊಡ್ಡ ಸವಾಲು. ಈ ಶಾಲೆಯ ಶಿಕ್ಷಕರು ಮಕ್ಕಳಿಗೆ ಸುಲಭವಾಗಿ ಇಂಗ್ಲಿಷ್ ಕಲಿಸಲು ಆಟ ಹಾಗೂ ನೃತ್ಯದ ಮೊರೆ ಹೋಗಿದ್ದಾರೆ.
ತರಗತಿಯಲ್ಲಿ ಇಂಗ್ಲಿಷ್ ಭಾಷಾ ಶಿಕ್ಷಕಿ ಸರಸ್ವತಿ ಅವರು ಮಕ್ಕಳಿಗೆ ನೃತ್ಯ, ಆಟ, ವಸ್ತುಗಳು, ಭಾಷಾ ಆಟಗಳು, ಚಿತ್ರ ಪಟ, ಪಿಪಿಟಿ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಕಲಿಸುತ್ತಾರೆ.
‘ಇಂಗ್ಲಿಷ್ ತರಗತಿಯಲ್ಲಿ ಮಕ್ಕಳು ಇಂಗ್ಲಿಷ್ ನಲ್ಲೇ ಸಂವಹನ ಮಾಡುವುದು ಕಡ್ಡಾಯ. ಶಿಕ್ಷಕರು ಇಲ್ಲದಿದ್ದಾಗ ಮಕ್ಕಳೇ ಶಿಕ್ಷಕರಾಗುತ್ತಾರೆ’ ಎಂದು ಶಿಕ್ಷಕಿ ಸರಸ್ವತಿ 'ಪ್ರಜಾವಾಣಿ'ಗೆ ತಿಳಿಸಿದರು.
ಓದು ಕಾಯಕ ಕಾರ್ಯಕ್ರಮ: ಶಿಕ್ಷಕರು ಮಕ್ಕಳಿಗೆ ಮನೆಕೆಲಸಗಳನ್ನು ನೀಡುತ್ತಾರೆ. ಅವುಗಳ ಮೇಲೆ ನಿಗಾ ಇಡಲು ಓದು ಕಾಯಕ ಎಂಬ ವಿಶಿಷ್ಟ ವ್ಯವಸ್ಥೆ ಇಲ್ಲಿದೆ.
ಮಕ್ಕಳು ಶಾಲೆಯಿಂದ ಮನೆಗೆ ಹೋದ ಮೇಲೆ, ‘ಪ್ರತಿ ನಿತ್ಯ ಏನು ಓದಿದೆ ಮತ್ತು ಯಾವ ವಿಷಯವನ್ನು ಹೆಚ್ಚಾಗಿ ಕಲಿತೆ’ ಎಂಬುದನ್ನು ಓದು ಕಾಯಕ ಪುಸ್ತಕದಲ್ಲಿ ಬರೆಯಬೇಕು. ಅದಕ್ಕೆ ಪೋಷಕರೂ ಸಹಿ ಮಾಡಬೇಕು. ಶಿಕ್ಷಕರು ಪ್ರತಿದಿನ ಆ ಪುಸ್ತಕವನ್ನು ಪರಿಶೀಲಿಸುತ್ತಾರೆ.
‘ಯಾವ ಮಕ್ಕಳು ಮನೆಯಲ್ಲಿ ಓದುವುದಿಲ್ಲವೋ, ಅವರ ಮನೆಗೆ ಶಿಕ್ಷಕರು ಖುದ್ದು ಭೇಟಿ ನೀಡಿ ಮಕ್ಕಳಿಗೆ ಕಲಿಸುತ್ತಾರೆ’ ಎಂದು ಶಿಕ್ಷಕ ಮುರುಳಿ ರಾಜ್ ಹೇಳಿದರು.
ದಾನಿಗಳ ಸಹಕಾರ ಹೆಚ್ಚು: ಈ ಶಾಲೆಗೆ ದಾನಿಗಳ ಸಹಕಾರ ಹೆಚ್ಚಾಗಿದೆ. ಶಾಲೆಯನ್ನು ಒಬ್ಬರು ದಾನ ಮಾಡಿದ್ದಾರೆ. ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳು, ಕುರ್ಚಿ, ಕಂಪ್ಯೂಟರ್, ಕ್ರೀಡಾ ಸಾಮಾಗ್ರಿ, ಪ್ರಿಂಟರ್, ತಟ್ಟೆ, ಲೋಟ, ಸೇರಿದಂತೆ ಅನೇಕ ವಸ್ತುಗಳನ್ನು ಹೆಚ್ಚಾಗಿ ದಾನ ಮಾಡಿದ್ದಾರೆ. ಇವರ ಜೊತೆಗೆ ಎಸ್.ಡಿ.ಎಂ.ಸಿ ಸಹಕಾರವೂ ಇದೆ ಎಂದು ಹೇಳುತ್ತಾರೆ ಶಿಕ್ಷಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.