ಚಾಮರಾಜನಗರ/ಯಳಂದೂರು: ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿಗೆ ನಾಟಿ ಮಾಡಿದ್ದ ಭತ್ತ ಕೊಯ್ಲಿಗೆ ಬಂದಿದ್ದು ರೈತರು ಕಟಾವಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳು ತೆರೆಯದಿರುವುದು ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೆಲೆ ಹಾಗೂ ಬೇಡಿಕೆ ಕುಸಿಯುವಂತೆ ಮಾಡಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 12,552 ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು 8452 ಹೆಕ್ಟೇರ್‌ನಲ್ಲಿ ಭತ್ತ ನಾಟಿ ನಡೆದಿದೆ. ಉಳಿದಂತೆ ಯಳಂದೂರು ತಾಲ್ಲೂಕಿನಲ್ಲಿ 3150 ಹೆಕ್ಟೇರ್ ಹಾಗೂ ಚಾಮರಾಜನಗರ ತಾಲ್ಲೂಕಿನಲ್ಲಿ 950 ಹೆಕ್ಟೇರ್ ನಾಟಿ ನಡೆದಿದೆ.
9,194 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ನಡೆದಿದ್ದು ಹನೂರು ತಾಲ್ಲೂಕಿನಲ್ಲಿ ಗರಿಷ್ಠ 7,070, ಚಾಮರಾಜನಗರ ತಾಲ್ಲೂಕಿನಲ್ಲಿ 693, ಕೊಳ್ಳೇಗಾಳ ತಾಲ್ಲೂಕಿನಲ್ಲಿ 638, ಯಳಂದೂರು 400 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 393 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ.
ಬಹುತೇಕ ಜಿಲ್ಲೆಯಾದ್ಯಂತ ಡಿಸೆಂಬರ್‌ನಲ್ಲಿ ಭತ್ತದ ಕೊಯ್ಲಿನ ಸುಗ್ಗಿ ವೇಗ ಪಡೆದುಕೊಳ್ಳಲಿದ್ದು, ಪ್ರಸ್ತುತ ಕಟಾವಿಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಯಳಂದೂರು ತಾಲ್ಲೂಕಿನಲ್ಲಿ ಭತ್ತ ಮತ್ತು ರಾಗಿ ಕೊಯ್ಲಿಗೆ ಬಂದಿದೆ. ಮಳೆ ಹಾಗೂ ನೀರಾವರಿ ಲಭ್ಯತೆಯಿಂದ ಈ ಬಾರಿ ಹೆಚ್ಚಿನ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಸ್ಥಾಪನೆ ಆರಂಭವಾಗದ ಪರಿಣಾಮ ರೈತರು ಕಟಾವು ಮಾಡಲಾದ ಭತ್ತವನ್ನು ದಲ್ಲಾಳಿಗಳಿಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ತಾಲ್ಲೂಕಿನಲ್ಲಿ 3150 ಹೆಕ್ಟೇರ್ ಭತ್ತ ಮತ್ತು 500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ನಡೆದಿದೆ. ಈ ಬಾರಿ ಕೆರೆಕಟ್ಟೆ ಮತ್ತು ಕಾಲುವೆಗಳಲ್ಲಿ ಸಮೃದ್ಧವಾಗಿ ನೀರು ಹರಿದಿರುವುದರಿಂದ ಉತ್ತಮ ಬೆಳೆ ರೈತರ ಕೈಸೇರುವ ನಿರೀಕ್ಷೆ ಇದೆ. ಕೊಯ್ಲಿನ ಯಂತ್ರಗಳು ಈಗಾಗಲೇ ತಾಲ್ಲೂಕಿನಾದ್ಯಂತ ಬಿಡಾರ ಹೂಡಿದ್ದು, ಮಂಗಳವಾರದಿಂದ ಕೊಯ್ಲು ಕಾರ್ಯ ಆರಂಭವಾಗಲಿದೆ.
ದಲ್ಲಾಳಿಗಳ ದರ ನಿಗದಿ:
ಇನ್ನೂ ಭತ್ತ ಖರೀದಿ ಕೇಂದ್ರ ಆರಂಭವಾಗದಿರುವುದರಿಂದ ದಲ್ಲಾಗಳಿಗಳೇ ದರ ನಿಗದಿ ಮಾಡಿದ್ದು ಖರೀದಿಗೆ ಸಿದ್ಧತೆ ನಡೆಸಿದ್ದಾರೆ. ಆರ್‌ಎನ್‌ಆರ್ ಭತ್ತ ಕ್ವಿಂಟಲ್‌ಗೆ ₹ 2,400 ಜ್ಯೋತಿ ₹ 2,600 ಹಾಗೂ ಮಿನಿಲಾಂಗ್ ಭತ್ತಕ್ಕೆ ₹ 2,150 ಧಾರಣೆ ಇದೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ರಾಗಿ ಖರೀದಿಸಲು ಸರ್ಕಾರ ಇಷ್ಟೊತ್ತಿಗೆ ನೋಂದಣಿ ಪ್ರಕ್ರಿಯೆ ಆರಂಭಿಸುತ್ತಿತ್ತು. ಆದರೆ, ಈ ಬಾರಿ ಇನ್ನೂ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ. ಹಾಗಾಗಿ ಮಾರುಕಟ್ಟೆಯಲ್ಲಿ ದರವೂ ಕಡಿಮೆ ಇದೆ ಎನ್ನುತ್ತಾರೆ ಕೃಷಿಕ ವೈ.ಕೆ.ಮೋಳೆ ಬಸವಶೆಟ್ಟಿ.
ನ.15ರಿಂದ ಭತ್ತ ರಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಬೇಕಿತ್ತು. ದತ್ತಾಂಶದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಡಿ.1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.ಯೋಗಾನಂದ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ
ಭತ್ತ ಖರೀದಿ ಕೇಂದ್ರ ಸ್ಥಾಪನೆಯಾಗುವವರೆಗೂ ಕಾಯುವ ವ್ಯವಧಾನ ರೈತರಿಗಿಲ್ಲ. ಪ್ರಸ್ತುತ ಭತ್ತ ಕಟಾವು ಮಾಡಿದರೆ ಗೋದಾಮಿಗೆ ಭತ್ತ ಸಾಗಟ ಮಾಡುವ ವೆಚ್ಚ ಹೊರೆಯಾಗುತ್ತದೆ. ಒಣಗಿಸಿ, ಶೇಖರಿಸಿಡುವ ವ್ಯವಸ್ಥೆ ಎಲ್ಲ ರೈತರ ಬಳಿಯೂ ಇರುವುದಿಲ್ಲ. ಹೆಚ್ಚು ಮಾನವ ಶ್ರಮ ಹಾಗೂ ಕೂಲಿಯಾಳುಗಳ ಬಳಕೆ ಕಾರಣಕ್ಕೆ ಹೆಚ್ಚಿನ ರೈತರು ಜಮೀನಿನಲ್ಲಿಯೇ ದಲ್ಲಾಳಿಗಳಿಗೆ ಭತ್ತ ಮಾರಾಟ ಮಾಡುತ್ತಾರೆ ಎನ್ನುತ್ತಾರೆ ರೈತರು.
ಈ ಬಾರಿ ಫಸಲನ್ನು ಖರೀದಿಸಲು ಹಾಗೂ ಮಾನದಂಡಗಳ ಕುರಿತು ಇನ್ನೂ ಸಮರ್ಪಕ ಪ್ರಚಾರ ಆರಂಭವಾಗಿಲ್ಲ. ದಾಸ್ತಾನು ಮಾಡಲು ಖರೀದಿ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿಲ್ಲ. ಎಫ್ಎಕ್ಯೂ ಗುಣಮಟ್ಟ ಆಧರಿಸಿ ಉತ್ತಮ ಬೆಲೆಗೆ ಖರೀದಿ ಮಾಡುವ ಬಗ್ಗೆಯೂ ಜಾಗೃತಿ ಮೂಡಿಸಿಲ್ಲ. ಗ್ರೇಡರ್ಸ್‌ಗಳನ್ನು ಕೃಷಿ ಇಲಾಖೆ ಇನ್ನೂ ನೇಮಿಸಿಲ್ಲ. ಹಾಗಾಗಿ, ಮಧ್ಯವರ್ತಿಗಳಿಗೆ ಭತ್ತ ಮಾರಾಟ ಮಾಡಬೇಕಾಗಿದೆ ಎನ್ನುತ್ತಾರೆ ರೈತ ಮುಖಂಡ ಹೊನ್ನೂರು ಪ್ರಕಾಶ್.
ಖರೀದಿ ಕೇಂದ್ರಕ್ಕೆ ಸಿದ್ಧತೆ
ಪ್ರತಿ ಕ್ವಿಂಟಲ್ ಸಾಮಾನ್ಯ ಭತ್ತಕ್ಕೆ ₹2300 ‘ಎ’ ಗ್ರೇಡ್ ಭತ್ತಕ್ಕೆ 2320 ಹಾಗೂ ರಾಗಿಗೆ ₹ 4260 ದರ ನಿಗದಿಪಡಿಸಿದ್ದು ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯನ್ನು ಖರೀದಿ ಏಜೆನ್ಸಿಯಾಗಿ ಸರ್ಕಾರ ನೇಮಕ ಮಾಡಿದೆ. ಭತ್ತ ರಾಗಿ ಖರೀದಿಗೆ ಚಾಮರಾಜನಗರ ತಾಲ್ಲೂಕಿನಲ್ಲಿ ಎಪಿಎಂಸಿ ಯಾರ್ಡ್ ಆವರಣ ಸಂತೇಮರಹಳ್ಳಿ ಎಪಿಎಂಸಿ ಯಾರ್ಡ್ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಎಪಿಎಂಸಿ ಯಾರ್ಡ್ ಯಳಂದೂರು ತಾಲ್ಲೂಕಿನಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಆವರಣ ಹಾಗೂ ಹನೂರು ತಾಲ್ಲೂಕಿನಲ್ಲಿ ರಾಗಿ ಖರೀದಿಗೆ ಎಪಿಎಂಸಿ ಯಾರ್ಡ್ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಜಿಲ್ಲಾಡಳಿತ ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.