ADVERTISEMENT

ಬಂಡೀಪುರ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ಬೆದರಿಕೆ: ಪ್ರಕರಣ ದಾಖಲು

ಟ್ವಿಟರ್‌ನಲ್ಲಿ ಹರಿದಾಡಿದ ವಿಡಿಯೊ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 4:34 IST
Last Updated 7 ಆಗಸ್ಟ್ 2023, 4:34 IST
ರಸ್ತೆ ಮದ್ಯೆ ವಾಹನ ಅಡ್ಡಗಟ್ಟಿದ ಕಿಡಿಗೇಡಿಗಳು
ರಸ್ತೆ ಮದ್ಯೆ ವಾಹನ ಅಡ್ಡಗಟ್ಟಿದ ಕಿಡಿಗೇಡಿಗಳು   (ಟ್ವಿಟರ್‌ ವಿಡಿಯೊದಿಂದ ಸ್ಕ್ರೀನ್‌ಶಾಟ್‌ ತೆಗೆದ ಚಿತ್ರ)

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ನೋಂದಣಿ ಸಂಖ್ಯೆಯ ವಾಹನದಲ್ಲಿದ್ದ ನಾಲ್ವರು, ವಾಹನವೊಂದನ್ನು ಅಡ್ಡಗಟ್ಟಿ ಅದರಲ್ಲಿದ್ದವರೊಂದಿಗೆ ಜಗಳವಾಡಿ ಬೆದರಿಕೆ ಹಾಕಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಜೂನ್ ತಿಂಗಳ 17ರಂದು ಊಟಿ ರಸ್ತೆಯ ಮೇಲುಕಾಮನಹಳ್ಳಿ- ಕೆಕ್ಕನಹಳ್ಳಿ ಚೆಕ್ ಪೋಸ್ಟ್ ನಡುವೆ, ತಮಿಳುನಾಡಿನ ಗಡಿ ಸಮೀಪ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಘಟನೆಯು ಕಾರಿನಲ್ಲಿದ್ದ ಡ್ಯಾಶ್ ಕ್ಯಾಮ್‌ನಲ್ಲಿ ಸೆರೆಯಾಗಿದ್ದು, ಯೂಟ್ಯೂಬರ್ (ಥರ್ಡ್ಐ) ಒಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೊ ಪೋಸ್ಟ್ ಮಾಡಿ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರನ್ನೂ ಟ್ಯಾಗ್ ಮಾಡಿದ್ದಾರೆ.

ADVERTISEMENT

ತಮಿಳುನಾಡು ಕಡೆಗೆ ಹೋಗುತ್ತಿದ್ದವರು ಮಲಯಾಳ ಭಾಷೆಯಲ್ಲಿ ಮಾತನಾಡುವುದು ವಿಡಿಯೊದಲ್ಲಿ ಕೇಳಿಸುತ್ತಿದೆ. ಇವರು ಇರುವ ವಾಹನವನ್ನು ಹಿಂದಿಕ್ಕಿದ ಥಾರ್ ವಾಹನದಲ್ಲಿದ್ದ ನಾಲ್ವರು ರಸ್ತೆ ಮಧ್ಯೆ ವಾಹನ ನಿಲ್ಲಿಸಿ ವಾಹನದಿಂದ ಇಳಿದು, ವಾಹನದಲ್ಲಿದ್ದವರೊಂದಿಗೆ ಜಗಳ ಮಾಡುವ ಧ್ವನಿ ವಿಡಿಯೊದಲ್ಲಿ ಕೇಳಿಸುತ್ತದೆ.

ಈ ಪೋಸ್ಟ್ ಅನ್ನು ಮರುಪೋಸ್ಟ್ ಮಾಡಿರುವ ಬಿಜೆಪಿ ಶಾಸಕ ಸುರೇಶ್ ಕುಮಾರ್, 'ಈ ರೀತಿಯ ವರ್ತನೆ ಯಾರಿಗೂ ಒಳಿತಲ್ಲ, ಬಂಡೀಪುರ ಪ್ರಾಣಿಗಳೂ ಹೀಗೆ ಹೆದರಿಸಿ ಆಕ್ರಮಣ ಮಾಡುವುದಿಲ್ಲ' ಎಂದು ಹೇಳಿದ್ದಾರೆ.

ಥರ್ಡ್ಐ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಎಡಿಜಿಪಿ ಅಲೋಕ್ ಕುಮಾರ್, 'ಜೂನ್ 17ರಂದು ಘಟನೆ ನಡೆದಿದೆ. ಈವರೆಗೆ ಯಾರೂ ಗುಂಡ್ಲುಪೇಟೆ ಠಾಣೆಯನ್ನು‌ ಸಂಪರ್ಕಿಸಿಲ್ಲ. ಕ್ಷಿಪ್ರ ಕ್ರಮಕ್ಕಾಗಿ ಗುಂಡ್ಲುಪೇಟೆ ಪೊಲೀಸ್ ಇನ್‌ಸ್ಪೆಕ್ಟರ್ ಅವರನ್ನು ಸಂತ್ರಸ್ತ ಸಂಪರ್ಕಿಸಬಹುದು' ಎಂದು ಹೇಳಿದ್ದಾರೆ.

ಎಫ್‌ಐಆರ್ ದಾಖಲು: ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.