ADVERTISEMENT

123 ದಿನಗಳ ಪ್ರತಿಭಟನೆಗೆ ತಿರುವು; ದೂರು, ಪ್ರತಿ ದೂರು

ರೈತರು ಹಾಗೂ ಅರಣ್ಯ ಇಲಾಖೆಗಳ ಅಧಿಕಾರಿಗಳ ನಡುವೆ ಹಗ್ಗಜಗ್ಗಾಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:28 IST
Last Updated 1 ಡಿಸೆಂಬರ್ 2022, 16:28 IST
ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕೊಳ್ಳೇಗಾಲ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು
ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಕೊಳ್ಳೇಗಾಲ ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು   

ಕೊಳ್ಳೇಗಾಲ:ತಾಲ್ಲೂಕಿನ ಬೂದಗಟ್ಟೆದೊಡ್ಡಿಯ ಗ್ರಾಮದ ಮೂರು ರೈತರಿಗೆ ಸೇರಿದ 13 ಎಕರೆ ಸಾಗುವಳಿ ಜಮೀನನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ ಎಂದು ಆರೋಪಿಸಿ 123 ದಿನಗಳಿಂದ ಮಲೆ ಮಹದೇಶ್ವರ ವನ್ಯ ಜೀವಿ ವಿಭಾಗದ ಡಿಸಿಎಫ್ ಕಚೇರಿ ಮುಂಭಾಗದಲ್ಲಿ ರೈತರು ಹಾಗೂ ರೈತ ಸಂಘದ ಪದಾಧಿಕಾರಿಗಳು ನಡೆಸುತ್ತಿರುವ ಪ್ರತಿಭಟನೆಗೆ ಈಗ ತಿರುವು ಸಿಕ್ಕಿದೆ.

ರೈತರು ಇಲಾಖೆಗೆ ತೊಂದರೆ ನೀಡುತ್ತಿದ್ದಾರೆ. ಇಲಾಖೆಯ ಕೆಲಸಗಳು ಆಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ಪ್ರತಿಭಟನೆ ನಿರತ ರೈತರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದರೆ, ಡಿಸಿಎಫ್‌ ಸಂತೋಷ್‌ ಸೇರಿದಂತೆ ಅರಣ್ಯ ಅಧಿಕಾರಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಮಧುವನಹಳ್ಳಿ ಬಸವರಾಜು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಈ ಮಧ್ಯೆ, ಅರಣ್ಯ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಡಿಸಿಎಫ್‌ ಕಚೇರಿ ಹಾಗೂ ಪೊಲೀಸ್‌ ಠಾಣೆ ಮುಂದೆ ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಆರ್‌ಎಫ್ಒ ದೂರು: ‘ಬೂದಗಟ್ಟೆದೊಡ್ಡಿಯ ರೈತರು ನಮ್ಮ ಇಲಾಖೆಗೆ ತೊಂದರೆ ನೀಡುತ್ತಿದ್ದಾರೆ. ಇದರಿಂದ ಯಾವ ಕೆಲಸಗಳು ಆಗುತ್ತಿಲ್ಲ’ ಎಂದು ಆರ್.ಎಫ್.ಒ ಭರತ್ ಬುಧವಾರ ರಾತ್ರಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ, ಜಿಲ್ಲಾ ಕಾಯಂ ಸದಸ್ಯ ಮಧುವನಹಳ್ಳಿ ಬಸವರಾಜು, ಚಂದ್ರಭೋವಿ, ವೆಂಕಟರಾಮ ಬೋವಿ ಸೇರಿದಂತೆ 30ಕ್ಕೂ ಹೆಚ್ಚು ರೈತರ ಮೇಲೆ ಅವರು ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರತಿಭಟನೆ: ಹಲ್ಲೆ ಪ್ರಕರಣ ಖಂಡಿಸಿ ರೈತರು ಗುರುವಾರ ಡಿಸಿಎಫ್‌ ಕಚೇರಿ ಹಾಗೂ ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು.

ಡಿಸಿಎಫ್‌ ಕಚೇರಿಯಲ್ಲಿ ಮಾತನಾಡಿದರೈತ ಸಂಘದ ಮುಖಂಡ ಅಣಗಳ್ಳಿ ಬಸವರಾಜು, ‘ಅರಣ್ಯ ಇಲಾಖೆಯವರು ರೈತರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಸರ್ಕಾರ ಹಾಗೂ ಅಧಿಕಾರಿಗಳು ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ರೈತರ ಚಳವಳಿ ಹತ್ತಿಕ್ಕಲು ರೈತರ ಮೇಲೆ ಹಲ್ಲೆ ಮಾಡುವುದಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ನೂರಾರು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಅರಣ್ಯ ಅಧಿಕಾರಿಗಳು ಹಲ್ಲೆ ಮಾಡಿರುವುದನ್ನು ಖಂಡಿಸುತ್ತೇವೆ. ಶುಕ್ರವಾರ ರಾಜ್ಯದ ನಾಯಕರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಾರೆ. ರೈತರ ಹೋರಾಟ ಅಂದರೆ ಏನು ಎಂದು ತೋರಿಸುತ್ತೇವೆ’ ಎಂದರು.

ಠಾಣೆ ಎದುರು ಪ್ರತಿಭಟನೆ: ಹಲ್ಲೆ ಮಾಡಿರುವ ಡಿಸಿಎಫ್ ಸಂತೋಷ್‌ಕುಮಾರ್‌ ಸೇರಿದಂತೆ ಐವರು ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಸಂಜೆ 7ಗಂಟೆಯವರೆಗೆ ಧರಣಿ ನಡೆಸಿದರು.

ಪಿಎಸ್ಐ ಚೇತನ್ ಪ್ರತಿಕ್ರಿಯಿಸಿ, ‘ನಿಮ್ಮ ದೂರನ್ನು ಸ್ವೀಕರಿಸಿದ್ದೇವೆ. ತನಿಖೆ ನಡೆಸಿ ಎಫ್ಐಆರ್ ದಾಖಲು ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಆ ಬಳಿಕ ರೈತರು ಪ್ರತಿಭಟನೆ ಕೈ ಬಿಟ್ಟರು.

‘ನೀವು ಶುಕ್ರವಾರ ಎಫ್ಐಆರ್ ದಾಖಲು ಮಾಡದಿದ್ದರೆ, ಮತ್ತೆ ಠಾಣೆ ಮುಂದೆ ಪ್ರತಿಭಟನೆ ಮಾಡುತ್ತೇವೆ’ ಎಂದು ಜಿಲ್ಲಾ ಕಾರ್ಯಧ್ಯಕ್ಷ ಶೈಲೇಂದ್ರ ಎಚ್ಚರಿಸಿದರು.

ಅಧಿಕಾರಿಗಳ ವಿರುದ್ಧ ಆರೋಪ
‘ಮಲೆ ಮಹದೇಶ್ವರ ವನ್ಯಧಾಮ ಡಿಸಿಎಫ್ ಡಾ.ಸಂತೋಷ್‌ಕುಮಾರ್‌ ಸೇರಿದಂತೆ ಐವರು ಅರಣ್ಯಾಧಿಕಾರಿಗಳು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದುರೈತ ಸಂಘದಬಸವರಾಜು ಆರೋಪಿಸಿದ್ದಾರೆ. ಸದ್ಯ ಅವರು ಆಸ್ಪತ್ರೆಯಲ್ಲಿದ್ದಾರೆ.

‘ಬುಧವಾರ ಎಂದಿನಂತೆ ಸಂಜೆ ಪ್ರತಿಭಟನೆ ಮುಗಿಸಿ ಜನರು ಮನೆ ತೆರಳುವಾಗ 5.30ರ ಸಮಯದಲ್ಲಿ ಚಂದ್ರ ಬೋವಿ ಮತ್ತು ವೆಂಕಟರಾಮ ಬೋವಿ ಎಂಬ ರೈತರ ಜೊತೆ ನಾನು ಪ್ರತಿಭಟನಾ ಸ್ಥಳದಲ್ಲೇ ಮಾತನಾಡುತ್ತಿದ್ದೆ. ಆಗ ಅರಣ್ಯ ಇಲಾಖೆಯ ಕಚೇರಿ ಹಿಂಭಾಗವಿದ್ದ ಆರ್.ಎಫ್.ಒ ಭರತ್ ನನ್ನನ್ನು ಕರೆದರು. ನಾನು ಒಬ್ಬನೇ ಹೋದೆ. ಈ ವೇಳೆ ಡಿಸಿಎಫ್ ಸಂತೋಷ್‌ಕುಮಾರ್‌ ಮತ್ತು ಭರತ್ ಸೇರಿದಂತೆ ಐವರು ನನ್ನನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದಲ್ಲದೆ ಅರಣ್ಯ ಇಲಾಖೆಯ ತಂಟೆಗೆ ಬಂದರೆ ಇದೇ ಗತಿ ಎಂದು ಹಲ್ಲೆ ಮಾಡಿದ್ದಾರೆ. ನಂತರ ನಾನು ಮನೆಗೆ ಹೋಗಿ ರೈತ ಮುಖಂಡರಿಗೆ ದೂರವಾಣಿಯ ಮೂಲಕ ನಡೆದ ವಿಚಾರ ತಿಳಿಸಿ ರಾತ್ರಿ ನಗರದ ಸರ್ಕಾರಿ ಉಪವಿಭಾಗ ಸರ್ಕಾರಿಗೆ ದಾಖಲಾಗಿದ್ದೇನೆ. ಸ್ಥಳಕ್ಕೆ ಬಂದ ಪೊಲೀಸರಿಗೂ ನಡೆದ ಘಟನೆ ಬಗ್ಗೆ ದೂರಿನಲ್ಲಿ ಹೇಳಿಕೆ ನೀಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.