ADVERTISEMENT

ಬೆಂಬಲ ಬೆಲೆಯಡಿ ತೆಂಗು ಖರೀದಿಗೆ ಬೆಳೆಗಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 19:19 IST
Last Updated 21 ಅಕ್ಟೋಬರ್ 2022, 19:19 IST
ಬಿ.ಕೆ.ರವಿಕುಮಾರ್‌
ಬಿ.ಕೆ.ರವಿಕುಮಾರ್‌   

ಚಾಮರಾಜನಗರ: ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಧಾರಣೆ ಕಡಿಮೆಯಾಗಿರುವುದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ತೆಂಗು ಖರೀದಿಸಬೇಕು ಎಂದು ತೆಂಗು ಬೆಳೆಗಾರ ಬಿ.ಕೆ.ರವಿ.ಕುಮಾರ್‌ ಶುಕ್ರವಾರ ಒತ್ತಾಯಿಸಿದರು.

ಹಲವು ತೆಂಗು ಬೆಳೆಗಾರರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಈ ವರ್ಷ ತೆಂಗಿನಕಾಯಿ ಬೆಳೆಗಾರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬೆಲೆ ಪಾತಾಳಕ್ಕೆ ಕುಸಿದಿದೆ. ಕಳೆದ ವರ್ಷ ದೀಪಾವಳಿ ಸಮಯದಲ್ಲಿ ತೆಂಗಿನಕಾಯಿಗೆ ಕೆಜಿಗೆ ₹40ರವರೆಗೂ ಬೆಲೆ ಇತ್ತು. ಈ ಬಾರಿ ₹20–₹21 ಇದೆಯಷ್ಟೆ. 20 ವರ್ಷಗಳಿಂದೀಚೆಗೆ ತೆಂಗಿನಕಾಯಿ ಧಾರಣೆ ₹30ಕ್ಕಿಂತ ಕಡಿಮೆಯಾಗಿಲ್ಲ. ರೈತರಿಗೆ ತೆಂಗು ಬೆಳೆಯಲು ಖರ್ಚು ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಬೆಲೆ ಸಿಗುತ್ತಿಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಒಂದು ಕ್ವಿಂಟಲ್‌ ತೆಂಗಿನಕಾಯಿಗೆ ₹2860 ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದೆ. ಆ ಬೆಲೆಗೆ ತೆಂಗು ಖರೀದಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಆಗ ಮಾತ್ರ ರೈತರಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ 13,070 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗು ಬೆಳೆಯಾಗುತ್ತಿದೆ. ಚಾಮರಾಜನಗರ ತಾಲ್ಲೂಕಿನಲ್ಲೇ 8,400 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತೆಂಗು ಬೆಳೆಯುತ್ತಿದ್ದಾರೆ. ಸದ್ಯ ತೆಂಗಿನ ಕಾಯಿ ಕಟಾವು, ಸಾಗಣೆ, ಸಿಪ್ಪೆ ತೆಗೆಯುವುದಕ್ಕೆ ಒಂದು ತೆಂಗಿನಕಾಯಿಗೆ ₹3 ವೆಚ್ಚವಾಗುತ್ತಿದೆ. ಮೊದಲೆಲ್ಲ ತೆಂಗಿನಕಾಯಿ ಸಿಪ್ಪೆಗೆ ₹1 ಸಿಗುತ್ತಿತ್ತು. ಈ ಬಾರಿ ಯಾರಿಗೂ ಬೇಡವಾಗಿದೆ’ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಂಗು ಬೆಳೆಗಾರರನ್ನು ನಿರ್ಲಕ್ಷ್ಯ ಮಾಡುತ್ತಿವೆ. ಬೆಲೆ ಕುಸಿದ ಸಂದರ್ಭದಲ್ಲಿ ಬೆಂಬಲ ಬೆಲೆಯಡಿ ತೆಂಗು ಖರೀದಿಸಿರುವ ಉದಾಹರಣೆಗಳಿವೆ. 2012–13ರಲ್ಲಿ ಕೆಜಿ ತೆಂಗಿಗೆ ₹9 ಇದ್ದ ಸಂದರ್ಭದಲ್ಲಿ ಸರ್ಕಾರ ₹14 ಬೆಂಬಲ ಬೆಲೆ ಘೋಷಿಸಿ ಎಪಿಎಂಸಿ ಮೂಲಕ 4001 ಕ್ವಿಂಟಲ್ ತೆಂಗು ಖರೀದಿಸಿತು. ಇದೇ ರೀತಿ 2016–17ನೇ ಸಾಲಿನಲ್ಲಿ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ಮಾರಾಟ ಮಹಾಮಂಡಲ ಮೂಲಕ ಕೆಜಿಗೆ ₹16 ನಿಗದಿ ಮಾಡಿ 9618 ಕ್ವಿಂಟಲ್ ಖರೀದಿಸಿದೆ. ಇದೇ ಮಾದರಿಯಲ್ಲಿ ಈಗಲೂ ತೆಂಗು ಖರೀದಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಪ್ರಸ್ತುತ ಒಂದು ಕೆಜಿ ತೆಂಗಿಗೆ ₹20 ಇದ್ದು ಕನಿಷ್ಠ ₹35 ನಿಗದಿ ಮಾಡಿ ಖರೀದಿಸಬೇಕು’ ಎಂದು ಮನವಿ ಮಾಡಿದರು.

ತೆಂಗು ಬೆಳೆಗಾರರಾದ ವೆಂಕಟೇಶ್‌, ಸೋಮಶೇಖರ್, ರಾಜೇಂದ್ರ, ರಾಮಸ್ವಾಮಿ, ರವಿಕುಮಾರ್, ಸತೀಶ್, ಕಂಬಳೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.