ಚಾಮರಾಜನಗರ: ವನ್ಯಪ್ರಾಣಿಗಳ ದಾಳಿಯಿಂದ ಹಸು, ಎತ್ತು, ಎಮ್ಮೆ ಮತ್ತು ಕೋಣ ಸತ್ತರೆ ಅವುಗಳ ಮಾಲೀಕರಿಗೆ ನೀಡು ಪರಿಹಾರದ ಮೊತ್ತವನ್ನು ₹10 ಸಾವಿರದಿಂದ ಗರಿಷ್ಠ ₹75 ಸಾವಿರಕ್ಕೆ ಹೆಚ್ಚಿಸಿರುವ ಅರಣ್ಯ ಇಲಾಖೆಯ ಕ್ರಮವನ್ನು ಜಿಲ್ಲೆಯ ರೈತರು ಸ್ವಾಗತಿಸಿದ್ದಾರೆ.
ನಾಲ್ಕು ರಕ್ಷಿತಾರಣ್ಯಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ತೀವ್ರವಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕುಗಳಲ್ಲಿ ಮಲೆ ಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಹುಲಿ, ಚಿರತೆಯಂತಹ ಪ್ರಾಣಿಗಳು ಕಾಡಂಚಿನ ಪ್ರದೇಶಗಳಲ್ಲಿ ರೈತರ ಜಾನುವಾರುಗಳ ಮೇಲೆ ದಾಳಿ ಮಾಡಿ ಕೊಲ್ಲುವ ಪ್ರಕರಣ ಆಗಾಗ ವರದಿಯಾಗುತ್ತಲೇ ಇರುತ್ತವೆ.
ಇದುವರೆಗೂ ಹಸು, ಎತ್ತು, ಎಮ್ಮೆ ಕೋಣಗಳ ಮೇಲೆ ಪ್ರಾಣಿಗಳು ದಾಳಿ ನಡೆಸಿ ಕೊಂದರೆ ಮಾಲೀಕರಿಗೆ ₹10 ಸಾವಿರ ಪರಿಹಾರವನ್ನು ಇಲಾಖೆ ನೀಡುತ್ತಿತ್ತು. ಆಡು, ಕುರಿ ಇನ್ನಿತರ ಪ್ರಾಣಿಗಳು ಸತ್ತರೆ ₹5,000 ಪರಿಹಾರ ಮೊತ್ತ ಸಿಗುತ್ತಿತ್ತು. ಈ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂದು ರೈತ ಸಂಘಗಳು, ಸ್ಥಳೀಯರು ಹಲವು ವರ್ಷಗಳಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಇದ್ದರು.
ಇಲಾಖೆಯು ಈಗ ಈ ಮೊತ್ತವನ್ನು ಪರಿಷ್ಕರಿಸಿದ್ದು, ಹಸು, ಎಮ್ಮೆ, ಎತ್ತು ಕೋಣಗಳು ಮೃತಪಟ್ಟರೆ ಗರಿಷ್ಠ ₹75 ಸಾವಿರ ಹಾಗೂ ಇತರೆ ಜಾನುವಾರುಗಳು ಸತ್ತರೆ ₹10 ಸಾವಿರ ನಿಗದಿಪಡಿಸಿದೆ.
ಹಸು, ಎತ್ತು, ಎಮ್ಮೆ, ಕೋಣಗಳು ಸತ್ತ ಸಂದರ್ಭದಲ್ಲಿ ₹20 ಸಾವಿರ ಪರಿಹಾರವನ್ನು ಡಿಸಿಎಫ್‌ಗಳು ತಕ್ಷಣ ನೀಡಲಿದ್ದಾರೆ. ಉಳಿದ ಹಣವನ್ನು ಪಶುವೈದ್ಯರು ನೀಡುವ ಪ್ರಮಾಣಪತ್ರದ ಆಧಾರದಲ್ಲಿ ವಿತರಣೆ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
ಅರಣ್ಯ ಇಲಾಖೆಯ ನಿರ್ಧಾರದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಮಹೇಶ್ ಪ್ರಭು ಅವರು, ‘ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಿ ಎಂಬುದು ನಮ್ಮ ಬೇಡಿಕೆ ಆಗಿರಲಿಲ್ಲ. ಬದಲಿಗೆ ಒತ್ತಾಯ ಆಗಿತ್ತು. ಪರಿಹಾರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಸ್ವಲ್ಪ ನೆಮ್ಮದಿ ಸಿಗಬಹುದೇನೋ. ಆದರೆ, ರೈತರ ಜೀವ, ಬೆಳೆ, ಜಾನುವಾರುಗಳ ಹಾನಿಗೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ’ ಎಂದರು.
‘ಹೆಚ್ಚಿನ ಧನ ಸಹಾಯ ಘೋಷಿಸಿರುವುದು ಸಂತಸದ ಸಂಗತಿ. ಜಾನುವಾರುಗಳನ್ನೇ ಬದುಕಿನ ಆಧಾರವಾಗಿ ಮಾಡಿಕೊಂಡಿರುವ ಗ್ರಾಮೀಣ ಜನರಿಗೆ, ಅವುಗಳು ಹತ್ಯೆಯಾದಾಗ ಅಥವಾ ಪ್ರಾಣಿಗಳಿಂದ ಉಪಟಳ ಉಂಟಾದಾಗ ಯಾರಿಗೆ ದೂರು ಕೊಡಬೇಕು ಎಂಬುದರ ಬಗ್ಗೆ ಅರಿವಿಲ್ಲ’ ಎಂದು ಯಳಂದೂರು ತಾಲ್ಲೂಕಿನ ಮಲಾರಪಾಳ್ಯದರಾಜಣ್ಣ ನಾಯಕ ಅವರು ತಿಳಿಸಿದರು.
‘ಈವರೆಗೂ ಅರಣ್ಯ ಇಲಾಖೆ ನೀಡುತ್ತಿದ್ದ ಪರಿಹಾರದಲ್ಲಿ ಹೊಸ ಹಸುಗಳನ್ನು ಕೊಳ್ಳಲು ಆಗುತ್ತಿರಲಿಲ್ಲ. ಇದರಿಂದ ಅನೇಕರು ಹೈನುಗಾರಿಕೆ ತ್ಯಜಿಸಿದ್ದರು. ಇನ್ನು ಮುಂದೆ ಪರಿಹಾರ ಹಣ ಹೆಚ್ಚು ಸಿಗುವುದರಿಂದ ರೈತರಿಗೆ ಅನುಕೂಲವಾಗಲಿದೆ’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಮಗುವಿನಹಳ್ಳಿ ಚಿನ್ನಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.