ADVERTISEMENT

ಗುಂಡ್ಲುಪೇಟೆ: ಕುಸಿದ ಅಂತರ್ಜಲ, ಕೃಷಿ ಚಟುವಟಿಕೆ ಮುಂದೂಡಿಕೆ

ವರ್ಷಾರಂಭದಲ್ಲೇ ಬರಿದಾದ ಕೆರೆ ಕಟ್ಟೆಗಳು, ಕೊಳವೆ ಬಾವಿಗಳಲ್ಲಿ ನೀರಿಲ್ಲ

ಮಲ್ಲೇಶ ಎಂ.
Published 29 ಮಾರ್ಚ್ 2024, 6:57 IST
Last Updated 29 ಮಾರ್ಚ್ 2024, 6:57 IST
ಗುಂಡ್ಲುಪೇಟೆ ತಾಲ್ಲೂಕಿನ ರೈತರೊಬ್ಬರು ಭೂಮಿ ಉಳುಮೆ ಮಾಡಿ ಹಾಗೇ ಬಿಟ್ಟಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ರೈತರೊಬ್ಬರು ಭೂಮಿ ಉಳುಮೆ ಮಾಡಿ ಹಾಗೇ ಬಿಟ್ಟಿರುವುದು   

ಗುಂಡ್ಲುಪೇಟೆ: ಬೇಸಿಗೆಯ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದರಿಂದ ತಾಲ್ಲೂಕಿನ ಕೆಲಭಾಗಗಳಲ್ಲಿ ಕೊಳವೆ ಬಾವಿಗಳಲ್ಲಿನ ನೀರು ಕಡಿಮೆಯಾಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳನ್ನು ಮುಂದೂಡುತ್ತಿದ್ದಾರೆ. 

ತಾಲ್ಲೂಕಿನ ಮಳೆಯನ್ನೇ ನಂಬಿ ಕೃಷಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊಳವೆ ಬಾವಿಗಳನ್ನು ಹೊಂದಿರುವರ ಸಂಖ್ಯೆ ಕಡಿಮೆ. ಕೊಳವೆ ಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಿದ್ದರೆ ಕೃಷಿಕರು ಸುಡು ಬೇಸಿಗೆಯಲ್ಲೂ ಕೃಷಿಯಲ್ಲಿ ತೊಡಗುತ್ತಾರೆ. ಕಳೆದ ಬೇಸಿಗೆಯಲ್ಲಿ ಅಂತರ್ಜಲ ಮಟ್ಟ ಚೆನ್ನಾಗಿ ಇದ್ದುದರಿಂದ ವ್ಯವಸಾಯಕ್ಕೆ ತೊಂದರೆಯಾಗಿರಲ್ಲಿಲ್ಲ. 

ಹೋದ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಉಂಟಾಗಿದ್ದರಿಂದ ಕೆರೆ ಕಟ್ಟೆಗಳು ಭರ್ತಿಯಾಗಿರಲಿಲ್ಲ. ತುಂಬಿದ್ದ ಅಲ್ಪ ಸ್ವಲ್ಪ ನೀರು ವರ್ಷಾರಂಭದಲ್ಲೇ ಬರಿದಾಗಿದೆ. ಇದರಿಂದಾಗಿ ಕೆರೆಗಳ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಗಣನೀಯವಾಗಿ ಕುಸಿದಿದೆ. 

ADVERTISEMENT

ಗುಂಡ್ಲುಪೇಟೆ ಪಟ್ಟಣ, ಹಂಗಳ ವ್ಯಾಪ್ತಿ, ಕಾಡಂಚಿನ ಪ್ರದೇಶಗಳೂ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಕೃಷಿ ಮಾತ್ರವಲ್ಲ, ಕುಡಿಯುವ ನೀರಿನ ಸಮಸ್ಯೆ ತಲೆದೋರಲು ಆರಂಭಿಸಿದೆ.   

‘ಹಂಗಳ ಭಾಗದಲ್ಲಿ ಯಾವುದೇ ಕೆರೆಗಳಲ್ಲಿ ನೀರಿಲ್ಲ. ಈ ಭಾಗದಲ್ಲಿ ಅನೇಕ ಕೊಳವೆ ಬಾವಿಗಳು ನಿಷ್ಕ್ರಿಯಗೊಳ್ಳುವ ಸ್ಥಿತಿಗೆ ಬಂದಿವೆ. ಮಳೆಯಾದ ಸಂದರ್ಭದಲ್ಲಿ 8 ರಿಂದ 10 ಸ್ಪ್ರಿಂಕ್ಲರ್‌ಗಳು ಹಾರುತ್ತಿದ್ದವು. ಕೆಲವು ದಿನಗಳಿಂದ 4 ರಿಂದ 5 ಸ್ಪ್ರಿಂಕ್ಲರ್‌ಗಳು ಓಡಿದರೆ ಹೆಚ್ಚು. ಕೆಲವು ರೈತರ ಜಮೀನುಗಳಲ್ಲಿನ ಕೊಳವೆ ಬಾವಿಗಳಲ್ಲಿ ನೀರೇ ಬರುತ್ತಿಲ್ಲ’ ಎಂದು ಕಲ್ಲಿಗೌಡನಹಳ್ಳಿಯ ರೈತ ಮಲ್ಲೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೇಸಿಗೆಯಲ್ಲಿ ಬೆಳೆಗಳಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ. ಬಿಸಿಲಿನ ತೀವ್ರತೆ ಜಾಸ್ತಿ ಇರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿನ ಸಮಯ ನಿಲ್ಲುವುದಿಲ್ಲ. ಹಾಗಾಗಿ, ಪ್ರತಿ ದಿನ ನೀರು ಬಿಡಬೇಕು. ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆ. ಹಾಗಾಗಿ, ಮಳೆಗೆ ಕಾಯುತ್ತಿದ್ದೇವೆ. ಒಂದೆರಡು ಮಳೆಯಾದರೂ ಕೃಷಿಗೆ ಅನುಕೂಲವಾಗುತ್ತದೆ’ ಎಂದು ಮಗುವಿನಹಳ್ಳಿಯ ಚಿನ್ನಸ್ವಾಮಿ ತಿಳಿಸಿದರು.

ನೀರು ಅಗತ್ಯವಾಗಿರುವುದರಿಂದ ರೈತರು ಜಮೀನುಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಗುಂಡ್ಲುಪೇಟೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ತಗ್ಗಿರುವುದರಿಂದ ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆಯುವಂತಿಲ್ಲ. ಹಾಗಿದ್ದರೂ, ಬಹುತೇಕ ಮಂದಿ ಅನುಮತಿ ಪಡೆಯದೆ ಕೊರೆಯುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು. 

‘ಅನುಮತಿ ಇಲ್ಲದೆ ಕೊಳವೆ ಬಾವಿಗಳನ್ನು ಕೊರೆದರೆ ವಾಹನ ಜಪ್ತಿ ಮಾಡಿ ಪ್ರಕರಣ ದಾಖಲು ಮಾಡಲಾಗುತ್ತದೆ’ ಎಂದು ಎಂದು ಹಂಗಳ ನಾಡಕಚೇರಿಯ ಗ್ರಾಮ ಲೆಕ್ಕಾಧಿಕಾರಿ ಅರುಣ್ ತಿಳಿಸಿದರು. 

ಹೊರಗಿನವರಿಂದ ಅಂತರ್ಜಲ ಕುಸಿತ: ಆರೋಪ

‘ತಾಲ್ಲೂಕಿನಲ್ಲಿ ಕೇರಳ ಮತ್ತು ತಮಿಳುನಾಡಿನ ಕೆಲ ಶ್ರೀಮಂತರು ಇಲ್ಲಿನ ಬಡವರಿಂದ ಭೂಮಿಯನ್ನು ಗುತ್ತಿಗೆ ಪಡೆದು ಬೇರೆ ಜಮೀನುಗಳಿಂದ ಕಿಲೋ ಮೀಟರ್‌ ದೂರದವರೆಗೂ ಪೈಪ್ ಅಳವಡಿಸಿ ನೀರಿನ ಸಂಪರ್ಕ ಪಡೆದು ಶುಂಠಿ ಬೆಳೆ ಬೆಳೆಯುತ್ತಾರೆ. ಶುಂಠಿ ಬೆಳೆಗೆ ನೀರು ಹೆಚ್ಚು ಬೇಕಾಗಿರುವುದರಿಂದ ನೀರು ಕಡಿಮೆಯಾದಂತೆ ಅನುಮತಿ ಪಡೆಯದೆ ರಾತ್ರೋರಾತ್ರಿ ಕೊಳವೆಬಾವಿಗಳನ್ನು ಕೊರೆಸಿ ನೀರು ತೆಗೆಯುತ್ತಾರೆ’ ಎಂದು ಸ್ಥಳೀಯ ರೈತರು ಆರೋಪಿಸುತ್ತಾರೆ. 

‘ಸ್ಥಳೀಯ ರೈತರು ಮೂರು ಫೇಸ್‌ ಇದ್ದಾಗ ಮಾತ್ರ ಬೆಳೆಗಳಿಗೆ ನೀರು ಬಿಡುತ್ತಾರೆ. ಹೊರಗಿನವರು ವಿದ್ಯುತ್ ಮೀಟರ್ ಬಾಕ್ಸ್‌ಗೆ ಕಂಡೆಂಸರ್ ಅಳವಡಿಸಿಕೊಂಡು ಸಿಂಗಲ್ ಫೇಸ್‌ನಲ್ಲೂ ಪಂಪು ಚಾಲೂ ಆಗುವಂತೆ ಮಾಡಿ ನೀರು ಬಿಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲಿನ ಸ್ಥಳೀಯ ರೈತರ ಕೊಳವೆ ಬಾವಿಗೆ ತೊಂದರೆಯಾಗುವುದರ ಜೊತೆಗೆ ಗ್ರಾಮದ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ’ ಎಂದು ಮೇಲುಕಾಮನಹಳ್ಳಿ ಗ್ರಾಮದ ಚಿಕ್ಕಣ್ಣ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.