ADVERTISEMENT

ಶಿವಾನಂದ ಪಾಟೀಲ ವಿರುದ್ಧ ಮುಂದುವರಿದ ಆಕ್ರೋಶ

ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 7:59 IST
Last Updated 27 ಡಿಸೆಂಬರ್ 2023, 7:59 IST
ಸಚಿವ ಶಿವಾನಂದ ಪಾಟೀಲ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ‍ಪ‍ದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು
ಸಚಿವ ಶಿವಾನಂದ ಪಾಟೀಲ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ‍ಪ‍ದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮಂಗಳವಾರ ಚಾಮರಾಜನಗರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟನೆ ನಡೆಸಿದರು   

ಚಾಮರಾಜನಗರ: ರೈತರು ಬರಗಾಲ ಬರಲಿ, ಸಾಲ ಮನ್ನಾ ಮಾಡಲಿ ಎಂದು ಆಶಿಸುತ್ತಾರೆ ಎಂದು ಹೇಳಿಕೆ ನೀಡಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ಜಿಲ್ಲೆಯಲ್ಲಿ ರೈತರ ಆಕ್ರೋಶ ಮುಂದುವರಿದಿದೆ. 

ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯಲ್ಲಿ ರೈತ ಸಂಘಟನೆಗಳು ಮಂಗಳವಾರವೂ ಪ್ರತಿಭಟನೆ ನಡೆಸಿವೆ. 

ಹೆದ್ದಾರಿ ತಡೆ: ನಗರದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ತಡೆದು ಸಚಿವರ ವಿರು‌ದ್ಧ  ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

ಚಾಮರಾಜನಗರ–ಸಂತೇಮರಹಳ್ಳಿ ರಸ್ತೆಯ ಜಾಲಹಳ್ಳಿ ಹುಂಡಿಕ್ರಾಸ್‌ ಬಳಿ ಹೆದ್ದಾರಿಯಲ್ಲಿ ಧರಣಿ ಕುಳಿತು ವಾಹನಗಳ ಸಂಚಾರ ತಡೆದರು. 

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾ‌ಯಂ ಆಹ್ವಾನಿತ ಸದಸ್ಯ ಜ್ಯೋತಿಗೌಡನಪುರ ಸಿದ್ದರಾಜು ಮಾತನಾಡಿ, ‘ಸಚಿವ ಶಿವಾನಂದ ಪಾಟೀಲ ಅವರು ರೈತರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ. ‘ರೈತರು ಸೋಮಾರಿಗಳು, ಸಾಲ ಮನ್ನಾ ಮಾಡಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇವರ ಮೋಜಿಗಾಗಿ ಸಾಲ ಮನ್ನಾ ಮಾಡಬೇಕು’ ಎಂದೆಲ್ಲ ಅವಿವೇಕದ ಮಾತುಗಳನ್ನಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ನಾವು ಪುಕ್ಕಟೆಯಾಗಿ ಸಾಲ ಮನ್ನಾ ಕೇಳುತ್ತಿಲ್ಲ. ಸಾವಿರಾರು ವರ್ಷಗಳಿಂದ ಈ ದೇಶಕ್ಕೆ ಅನ್ನ ಕೊಡುತ್ತಾ ಇದ್ದೇವೆ’ ಎಂದು ಹೇಳಿದರು.   

‘ನಮಗೆ ಸಾಲ ಮನ್ನಾ, ಸಬ್ಸಿಡಿ ಬೇಡ ಎಂದು ಅಂದಿನಿಂದ ಹೇಳುತ್ತಲೇ ಬಂದಿದ್ದೇವೆ. ನಾವು ಬೆಳೆದಿರುವ ಉತ್ಪನ್ನಗಳಿಗೆ ಉತ್ತಮ ಬೆಲೆ ಕೊಡಿ ಎಂದು ಹಿಂದಿನಿಂದಲೂ ಒತ್ತಾಯ ಮಾಡುತ್ತಿದ್ದೇವೆ. ರೈತ ಯಾವತ್ತೂ ಸಾಲಗಾರ ಅಲ್ಲ’ ಎಂದು ಹೇಳಿದರು. 

‘ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ, ರೈತರನ್ನು ಅವಮಾನಿಸಿದ ಸಚಿವ ಶಿವಾನಂದ ಪಾಟೀಲ ಅವರನ್ನು ಸಂಪುಟದಿಂದ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ ನಡೆಸಿ ತಕ್ಕ ಪಾಠ ಕಲಿಸಬೇಕಾಗುತ್ತದೆ’ ಎಂದು ಸಿದ್ದರಾಜು ಎಚ್ಚರಿಸಿದರು. 

ಸಂಘದ ಜಿಲ್ಲಾ ಅಧ್ಯಕ್ಷ ಶಾಂತಮಲ್ಲಪ್ಪ, ತಾಲ್ಲೂಕು ಅಧ್ಯಕ್ಷ ಮಹೇಶ್‌, ಮುಖಂಡರಾದ ಹೆಗ್ಗವಾಡಿಪುರ ಮಹೇಶ್‌ಕುಮಾರ್‌, ಹೆಬ್ಬಸೂರು ಬಸವಣ್ಣ, ದೇಮಹಳ್ಳಿ ಪ್ರಸಾದ್‌, ಹೊನ್ನೇಗೌಡರಹುಂಡಿ ಸಿದ್ದರಾಜು, ಮೂಡ್ನಾಕೂಡು ಮಹೇಶ್‌, ಉಮ್ಮತ್ತೂರು ಲಿಂಗರಾಜು, ಬೇಡರಪುರ ಬಸವಣ್ಣ, ಕಾಡಹಳ್ಳಿ ಚಿನ್ನಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.