ADVERTISEMENT

ಯಳಂದೂರು | ಅಡಿಕೆ ಕೃಷಿಯತ್ತ ಅನ್ನದಾತರ ಚಿತ್ತ

ವರ್ಷದಿಂದ ವರ್ಷಕ್ಕೆ ತೆಂಗು-ಕಂಗಿನ ಪ್ರದೇಶ ಹೆಚ್ಚಳ

ನಾ.ಮಂಜುನಾಥ ಸ್ವಾಮಿ
Published 12 ಆಗಸ್ಟ್ 2024, 7:25 IST
Last Updated 12 ಆಗಸ್ಟ್ 2024, 7:25 IST
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಹೊರವಲಯದ ಜಮೀನಿನಲ್ಲಿ ರೈತರು ಅಡಿಕೆ ಸಸಿ ನಾಟಿ ಕಾರ್ಯದಲ್ಲಿ ತೊಡಗಿರುವುದು
ಯಳಂದೂರು ತಾಲ್ಲೂಕಿನ ಅಂಬಳೆ ಗ್ರಾಮದ ಹೊರವಲಯದ ಜಮೀನಿನಲ್ಲಿ ರೈತರು ಅಡಿಕೆ ಸಸಿ ನಾಟಿ ಕಾರ್ಯದಲ್ಲಿ ತೊಡಗಿರುವುದು   

ಯಳಂದೂರು: ತಾಲ್ಲೂಕಿನಲ್ಲಿ ಅಡಿಕೆ ಕೃಷಿಯತ್ತ ರೈತರ ಒಲವು ಹೆಚ್ಚಾಗುತ್ತಿದ್ದು ದಿನಕಳೆದಂತೆ ಅಡಿಕೆ ಬೆಳೆ ಕ್ಷೇತ್ರ ವಿಸ್ತಾರವಾಗುತ್ತಾ ಹೋಗುತ್ತಿದೆ. ಸಾಂಪ್ರದಾಯಿಕವಾಗಿ ಭತ್ತ ಹಾಗೂ ಗೊವಿನಜೋಳ ಬೆಳೆಯುತ್ತಿದ್ದ ಗದ್ದೆಗಳು ನಿಧಾನವಾಗಿ ಅಡಿಕೆ ತೋಟಗಳಾಗಿ ಬದಲಾಗುತ್ತಿವೆ. ವರ್ಷದಿಂದ ವರ್ಷಕ್ಕೆ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಾಗುತ್ತಿದೆ.

ಮಳೆ, ನಾಲೆಯ ಕಾಲುವೆ ನೀರಿನ ಅನುಕೂಲತೆ ಹೊಂದಿರುವವರು ಹಾಗೂ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಹೊಂದಿರುವ ರೈತರು ಅಡಿಕೆ ಹಾಗೂ ತೆಂಗು ಬೆಳೆಯಲು ಉತ್ಸುಕತೆ ತೋರುತ್ತಿದ್ದು ತರಹೇವಾರಿ ತಳಿಗಳ ಸಸಿಗಳು ಹೆಚ್ಚಾಗಿ ಮಾರಾಟವಾಗುತ್ತಿವೆ.

ಶಿವಮೊಗ್ಗ, ತೀರ್ಥಹಳ್ಳಿ ಸಕ್ಕರೆ ಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಅಡಿಕೆ ಸಸಿಗಳು ಜಿಲ್ಲೆಗೆ ಪೂರೈಕೆಯಾಗುತ್ತಿದೆ. 

ADVERTISEMENT

ಅಡಿಕೆ ಬೆಳೆಯತ್ತ ರೈತರು ಆಕರ್ಷಿತರಾಗಲು ಹಲವು ಕಾರಣಗಳಿವೆ. ಭತ್ತ ಹೆಚ್ಚು ಶ್ರಮ, ಕೂಲಿ ಕಾರ್ಮಿಕರು ಬೇಡುವ ಬೆಳೆಯಾಗಿದ್ದು ಲಾಭವೂ ಕಡಿಮೆ. ನಿರಂತರವಾಗಿ ನಿರ್ವಹಣೆ ಮಾಡುವುದರ ಜತೆಗೆ ಹೆಚ್ಚು ನೀರು ಬೇಡುವ ಬೆಳೆಯಾಗಿದೆ. 

ಆದರೆ, ಅಡಿಕೆ ಬೆಳೆ ಭತ್ತಕ್ಕೆ ಹೋಲಿಸಿದರೆ ಶ್ರಮ ಕಡಿಮೆ ಬೇಡುತ್ತದೆ. ಸಸಿನೆಟ್ಟು ನಿರ್ವಹಣೆ ಮಾಡುತ್ತಾ ಹೋದರೆ ಐದಾರು ವರ್ಷಗಳಿಗೆ ಫಸಲು ಆರಂಭವಾಗುತ್ತದೆ. ಮಾರುಕಟ್ಟೆಯಲ್ಲಿ ಅಡಿಕೆಗೆ ಬೇಡಿಕೆ,  ಧಾರಣೆ ಜತೆಗೆ ಲಾಭವೂ ಹೆಚ್ಚು ದೊರೆಯುತ್ತದೆ ಎಂಬ ಕಾರಣಕ್ಕೆ ರೈತರು ಅಡಿಕೆ ಸಸಿ ನೆಡಲು ಭೂಮಿ ಹಸನುಗೊಳಿಸುತ್ತಿದ್ದಾರೆ.

ಸ್ಥಳೀಯ ರೈತರು ಅಡಿಕೆ ಗೋಟು ನಾಟಿಮಾಡಿಕೊಂಡು ತಾವೆ ಸಸಿಗಳನ್ನು ಹೊಲದಲ್ಲಿ ನಾಟಿ ಮಾಡುತ್ತಿದ್ದು ಕೆಲವರು ತುಮಕೂರು, ಚಿತ್ರದುರ್ಗ ಜಿಲ್ಲೆಗಳಿಂದ ಅಡಿಕೆ ಸಸಿಗಳನ್ನು ತಂದು ನಾಟಿ ಮಾಡುತ್ತಿದ್ದಾರೆ. ಕಪ್ಪು ಮಣ್ಣಿನ ಭೂಮಿ ಹೊಂದಿರುವವರು ಕೆಂಪು ಮಣ್ಣು ಸುರಿದು, ಗೊಬ್ಬರ ಸೇರಿಸಿ ಸಸಿ ಹಾಕುತ್ತಿದ್ದಾರೆ ಎಂದು ಅಂಬಳೆ ಗ್ರಾಮದ ಕೃಷಿಕ ಶಿವಕುಮಾರ್ ಹೇಳಿದರು.

ಅಡಿಕೆ ತೆಂಗಿನ ನಡುವೆ ಮಿಶ್ರ ಬೆಳೆಯಾಗಿ ಪಪ್ಪಾಯ, ಬಾಳೆ ಮತ್ತಿತರ ಬೆಳೆಗಳನ್ನು ಬೆಳೆಯಬಹುದು. ಬದುಗಳ ಸುತ್ತಲೂ ನುಗ್ಗೆ ಮತ್ತು ಹೂ ಬೆಳೆಯಬಹುದು. ಇದರಿಂದ ಅಡಿಕೆ ಸಸಿಗೆ ನೆರಳು ಸಿಕ್ಕಂತೆ ಆಗುತ್ತದೆ. ಮೂರು-ನಾಲ್ಕು ವರ್ಷಗಳ ತನಕ ಪರ್ಯಾಯ ಬೆಳೆಯಿಂದ ತುಸು ವರಮಾನವನ್ನು ಪಡೆಯಬಹುದು. ಒಮ್ಮೆ ಅಡಿಕೆ ನಾಟಿ ಮಾಡಿದರೆ ಎರಡು-ಮೂರು ತಲೆಮಾರು ಆದಾಯ ಪಡೆಯಬಹುದು ಎನ್ನುತ್ತಾರೆ ಹೊನ್ನೂರು ಕೃಷಿಕ ರೇವಣ್ಣ.

ಅಡಿಕೆಗೆ ಬೇಕಾದ ನೀರಾವರಿ ಆಶ್ರಯ ತಾಲ್ಲೂಕಿನಲ್ಲಿ ಇದೆ.  ನೀರು ಬಸಿದು ಹೋಗುವ ಫಲವತ್ತಾದ ಮಣ್ಣು ಮತ್ತು ಹಿತಕರ ಹವಾಗುಣವೂ ಇಲ್ಲಿದೆ. ಅಡಿಕೆ ಗಿಡವನ್ನು ಒಂದು ವರ್ಷ ಕಾಪಾಡಿಕೊಂಡರೆ ಸಾಕು. ಐದು-ಆರು ವರ್ಷಗಳ ನಂತರ ನಿರಂತರ ಫಸಲು ಬರಲಾರಂಭಿಸುತ್ತದೆ. ನಿರ್ವಹಣೆಯೂ ಸುಲಭ. ಎತ್ತರದ ಮರಗಳಾದರೆ ನಡುವೆ ಕರಿ ಮೆಣಸು ಮತ್ತು ಕಾಫಿ ಗಿಡ ಬೆಳೆಯಬಹುದು ಎನ್ನುತ್ತಾರೆ ಮದ್ದೂರು ರೈತ ಮಹದೇವ್.

ಅಡಿಕೆ ಬೆಳೆಗೆ ನೀರು ಅತ್ಯಗತ್ಯ. ಸಸಿಗೆ ಹಲವು ವಿವಿಧ ರೋಗಗಳು ಕಾಡುತ್ತವೆ. ರೋಗ-ಕೀಟ ನಿರ್ವಹಣೆ ಮಾಡಿದರೆ, ಸಸಿಗಳು ಬೇಗ ಬೆಳೆಯುತ್ತವೆ. ಸಾಗುವಳಿದಾರರು ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಕೆಲವರು ಸೋಲುತ್ತಾರೆ. ಉತ್ತಮ ನಾಟಿ ಪದ್ಧತಿ, ಔಷಧ ಉಪಚಾರ, ಸಸಿಗಳ ಕಾಳಜಿ ಮಾಡುವುದರಿಂದ ಸಮೃದ್ಧ ಫಸಲು ಕೈಸೇರುತ್ತದೆ ಎಂಬುದು ಅಡಿಕೆ ಬೆಳೆಗಾರರ ಮಾತು.

ಸಸಿಗೆ 30 ರಿಂದ ₹150ಕ್ಕೆ ಮಾರಾಟ:

ಜಿಲ್ಲೆಯ ಚಂದಕವಾಡಿ, ಹೆಬ್ಬಸೂರು ಮತ್ತಿತರ ಗ್ರಾಮಗಳಲ್ಲಿ ಸ್ಥಳೀಯ ಅಡಿಕೆ ನಾಟಿ ಸಸಿಗಳು ಸಿಗುತ್ತದೆ. ಬೆಲೆಯೂ ಕಡಿಮೆ. ಚಿಕ್ಕಮಗಳೂರು ಜಿಲ್ಲೆಯ ಅಡಿಕೆ ತಳಿಗಳಿಗೆ 1 ಸಸಿಗೆ ₹ 30 ರಿಂದ ₹ 150 ತನಕ ಧಾರಣೆ ಇದೆ. ಸಸಿಯ ಗಾತ್ರ, ತೂಕ ಮತ್ತು ಎತ್ತರಕ್ಕೆ ಅನುಗುಣವಾಗಿ 1 ಇಲ್ಲವೆ 2 ವರ್ಷದ ಸಸಿಗಳು ನಾಟಿಗೆ ಸಿಗುತ್ತಿವೆ.

ಕೆಲವು ಫಾರಂ ಮಾಲೀಕರು ಬೇಡಿಕೆಗೆ ಅನುಗುಣವಾಗಿ ಕೃಷಿಕರಿಗೆ ನೇರವಾಗಿ ಅಡಿಕೆ ಸಸಿಗಳನ್ನು ತಲುಪಿಸುತ್ತಾರೆ. ಈಗ ಮಲೆನಾಡು ಸಸಿಗಳು ಬಯಲು ಪ್ರದೇಶಗಳಿಗೆ ಹೊಂದಿಕೊಂಡು ಬೆಳೆಯುತ್ತಿವೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.