ADVERTISEMENT

ಸಂತೇಮರಹಳ್ಳಿ: ಸಾವಯವ ಔಷಧ ಬಳಸಿ 2 ಎಕರೆಯಲ್ಲಿ ಪಪ್ಪಾಯಿ ಬೆಳೆದ ರೈತ, ಉತ್ತಮ ಆದಾಯ

ಮಹದೇವ್ ಹೆಗ್ಗವಾಡಿಪುರ
Published 5 ಜುಲೈ 2024, 6:48 IST
Last Updated 5 ಜುಲೈ 2024, 6:48 IST
ಸಾವಯವ ಔಷಧ ಬಳಕೆಯ ಮೂಲಕ ಸಮೃದ್ಧ ಪಪ್ಪಾಯಿ ಬೆಳೆದಿರುವ ಸಂತೇಮರಹಳ್ಳಿಯ ರೈತ ಪ್ರಭು.
ಸಾವಯವ ಔಷಧ ಬಳಕೆಯ ಮೂಲಕ ಸಮೃದ್ಧ ಪಪ್ಪಾಯಿ ಬೆಳೆದಿರುವ ಸಂತೇಮರಹಳ್ಳಿಯ ರೈತ ಪ್ರಭು.   

ಸಂತೇಮರಹಳ್ಳಿ: ಸಾವಯವ ಔಷಧ ಸಿಂಪರಣೆ ಮೂಲಕ ಸಮೃದ್ಧವಾದ ಪಪ್ಪಾಯಿ ಇಳುವರಿ ಪಡೆದು ಮಾದರಿಯಾಗಿದ್ದಾರೆ ಯುವ ರೈತ ಸಂತೇಮರಹಳ್ಳಿಯ ಪ್ರಭು.

ಕುದೇರು ಹಾಗೂ ಯಲಕ್ಕೂರು ರಸ್ತೆಯಲ್ಲಿರುವ 4 ಎಕರೆ ಜಮೀನಿನ ಪೈಕಿ 2 ಎಕರೆಯಲ್ಲಿ ಪಪ್ಪಾಯಿ, ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಪಪ್ಪಾಯಿ ಕಟಾವು ಹಂತಕ್ಕೆ ಬಂದಿದ್ದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಕೊಳವೆಬಾವಿ ನೀರನ್ನು ಸದ್ವಿನಿಯೋಗ ಮಾಡಿಕೊಂಡು 4 ಎಕರೆಯಲ್ಲಿ ವ್ಯವಸಾಯ ಮಾಡುತ್ತಿರುವ ಪ್ರಭು ಮಂಡ್ಯ ಜಿಲ್ಲೆಯ ನರ್ಸರಿಯಿಂದ ಪಪ್ಪಾಯಿ ಗಿಡಗಳನ್ನು ತಂದು ಎರಡು ಎಕರೆಯಲ್ಲಿ ನಾಟಿ ಮಾಡಿದ್ದಾರೆ.

ADVERTISEMENT

ಗಿಡವೊಂದಕ್ಕೆ ₹ 16ರಂತೆ 1,900 ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಪಪ್ಪಾಯಿ ಗಿಡಗಳ ಸಾಗಾಣೆ ವೆಚ್ಚ, ಭೂಮಿ ಹದ ಮಾಡುವುದು, ನಾಟಿ ಹಾಗೂ ವ್ಯವಸಾಯಕ್ಕೆ ತಗುಲಿದ ಖರ್ಚು ಸೇರಿದಂತೆ ₹ 50,000ದವರೆಗೆ ವ್ಯಯ ಮಾಡಿದ್ದಾರೆ.

ಪಪ್ಪಾಯಿ ಬೆಳೆಗೆ ಎರಡು ಬಾರಿ ರಾಸಾಯನಿಕ ಗೊಬ್ಬರ ಹಾಕುವುದರ ಜತೆಗೆ ಹೆಚ್ಚು ಸಾವಯವ ಗೊಬ್ಬರ ಹಾಕಿ ಕೃಷಿ ಮಾಡಿದ್ದಾರೆ. ರೋಗ ನಿವಾರಣೆಗಾಗಿ ಎರಡು ಬಾರಿ ಸಾವಯವ ಔಷಧವನ್ನು ಸಿಂಪಡಿಸಿ ಯಶಸ್ಸು ಪಡೆದಿರುವ ಪ್ರಭು ಗುಣಮಟ್ಟದ ಪಪ್ಪಾಯಿ ಬೆಳೆಸಿದ್ದಾರೆ.

‘ನಾವು ಸೇವಿಸುವ ತರಕಾರಿ, ಹಣ್ಣುಗಳಿಗೆ ರಾಸಾಯನಿಕ ಸಿಂಪರಣೆ ಮಾಡುವ ಬದಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಯವ ಔಷಧ ಬಳಕೆ ಮಾಡಬೇಕು. ಇದರಿಂದ ಜನರ ಆರೋಗ್ಯ ಕಾಳಜಿಯ ಜತೆಗೆ ಉತ್ತಮ ಆದಾಯವನ್ನೂ ಪಡೆಯಲು ಸಾಧ್ಯವಿದೆ. ಸಾವಯವ ಔಷಧ ಬಳಕೆಗೆ ರೈತರಿಗೆ ಹೆಚ್ಚು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ’ ಎನ್ನುತ್ತಾರೆ ಪ್ರಭು.

ನರ್ಸರಿಯಲ್ಲಿ ಬೆಳೆದ ಗಿಡಗಳನ್ನು ನಾಟಿ ಮಾಡಿದರೆ 8 ತಿಂಗಳಿಗೆ ಪಪ್ಪಾಯಿ ಹಣ್ಣು ಕಟಾವಿಗೆ ಬಂದಿದೆ. ಪಪ್ಪಾಯಿ ಖರೀದಿದಾರರು ಜಮೀನಿಗೆ ಬಂದು ಖರೀದಿ ಮಾಡುತ್ತಾರೆ. ಪ್ರಸ್ತುತ ಪಪ್ಪಾಯಿ ಖರೀದಿ ದರ ಕೆ.ಜಿ.ಗೆ ₹ 12 ರಿಂದ ₹ 14ರವರೆಗೆ ಇದೆ. ಪ್ರತಿ ಬಾರಿ ಕಟಾವು ಮಾಡಿದಾಗಲೂ 1 ಟನ್‍ನಿಂದ ಆರಂಭವಾಗಿ 5 ಟನ್‌ವರೆಗೂ ಹಣ್ಣು ಲಭ್ಯವಾಗುತ್ತದೆ.

‘ವಾರಕ್ಕೊಮ್ಮೆ ಕಟಾವು ಮಾಡಿದರೂ 25 ಬಾರಿ ಕಟಾವು ಮಾಡುವಷ್ಟು ಹಣ್ಣುಗಳು ದೊರೆಯುತ್ತವೆ. 1 ಟನ್ ಪಪ್ಪಾಯಿಗೆ ₹ 12 ಸಾವಿರ ದೊರೆಯುತ್ತದೆ. ಸಂಪೂರ್ಣ ಬೀಡು ಮುಗಿಯುವವರೆಗೂ 60 ರಿಂದ 80 ಟನ್‌ವರೆಗೆ ಪಪ್ಪಾಯಿ ಸಿಗುತ್ತದೆ. ಸುಮಾರು 10 ಲಕ್ಷದವರೆಗೆ ಆದಾಯ ಕೈಸೇರುತ್ತದೆ. ಕಟಾವು ಹಂತಕ್ಕೆ ಬಂದ 6 ತಿಂಗಳವರೆಗೂ ಪಪ್ಪಾಯಿ ನಿರಂತರವಾಗಿ ಕಟಾವಿಗೆ ಸಿಗುತ್ತದೆ’ ಎಂದು ಹೇಳುತ್ತಾರೆ ಪ್ರಭು.

‘ಪಪ್ಪಾಯಿ ಫಸಲು ಕಟಾವಾದ ನಂತರ ಪಪ್ಪಾಯಿ ಗಿಡದ ಹಸಿರೆಲೆಗಳನ್ನು ಜಮೀನಿನಲ್ಲಿಯೇ ಬಿಟ್ಟು ಹಸಿರೆಲೆ ಗೊಬ್ಬರವನ್ನಾಗಿ ಪರಿವರ್ತಿಸಬಹುದು. ಜತೆಗೆ ಕಳೆ ಗಿಡಗಳನ್ನು ಜಮೀನಿನಲ್ಲಿಯೇ ಹೂಳಬಹುದು. ಫಸಲು ಮುಗಿದ ನಂತರ ಒಂದೇ ಬೆಳೆಗೆ ಸೀಮಿತವಾಗದೆ ಸೌತೆ, ಕೋಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಲಾಭಗಳಿಸಬಹುದು’ ಎನ್ನುತ್ತಾರೆ.

ಪ್ರಭು ರೈತ 

‘ಕೃಷಿಯಲ್ಲಿ ಶ್ರದ್ಧೆ ಮುಖ್ಯ’

‘ವ್ಯವಸಾಯವನ್ನು ಶ್ರದ್ಧೆಯಿಂದ ಹಾಗೂ ವೈಜ್ಞಾನಿಕವಾಗಿ ಮಾಡಿದಾಗ ಮಾತ್ರ ಕೃಷಿ ವರದಾನವಾಗುತ್ತದೆ. ಬೇಸಿಗೆ ಮಳೆಗಾಲದಲ್ಲಿ ಹವಾಮಾನಕ್ಕೆ ತಕ್ಕಂತೆ ಬೆಳೆಗಳನ್ನು ಬೆಳೆಯುತ್ತಾ ಹೋಗುತ್ತಿದ್ದೇನೆ. ಕೆಲವು ಬೆಳೆಗಳಿಗೆ ಕಾರ್ಮಿಕರು ಹೆಚ್ಚಾಗಿ ಬೇಕಾಗುತ್ತದೆ. ಪ್ರಸ್ತುತ ಕಾರ್ಮಿಕರ ಸಮಸ್ಯೆ ಹೆಚ್ಚಾಗಿರುವುದರಿಂದ ರೈತರು ಕಡಿಮೆ ಸಂಖ್ಯೆಯಲ್ಲಿ ಕಾರ್ಮಿಕರು ಬಳಕೆಯಾಗುವ ಬೆಳೆಗಳನ್ನು ಹೆಚ್ಚಾಗಿ ಬೆಳೆಯಬೇಕು’ ಎಂದು ಸಲಹೆ ನೀಡುತ್ತಾರೆ ರೈತ ಪ್ರಭು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.