ADVERTISEMENT

ತಂದೆ ಇಲ್ಲದ ಮಕ್ಕಳಿಗೆ ₹24,000 ಸ್ಕಾಲರ್‌ಶಿಪ್: ಹರಿದಾಡಿದ ಸುಳ್ಳು ಸುದ್ದಿ

14 ಕೆಟಗರಿ ಮಕ್ಕಳು ಮಾತ್ರ ಪ್ರಾಯೋಜಕತ್ವ ಕಾರ್ಯಕ್ರಮಕ್ಕೆ ಅರ್ಹರು

ಬಾಲಚಂದ್ರ ಎಚ್.
Published 27 ಅಕ್ಟೋಬರ್ 2024, 5:17 IST
Last Updated 27 ಅಕ್ಟೋಬರ್ 2024, 5:17 IST
ಸುಳ್ಳು ಸುದ್ದಿ ಆರೋಪಿಗೆ ಸ್ವಚ್ಛತಾ ಶಿಕ್ಷೆ
ಸುಳ್ಳು ಸುದ್ದಿ ಆರೋಪಿಗೆ ಸ್ವಚ್ಛತಾ ಶಿಕ್ಷೆ   

ಚಾಮರಾಜನಗರ: ‘ತಂದೆ ಇಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ₹ 24,000 ಸ್ಕಾಲರ್‌ಶಿಪ್‌ ದೊರೆಯಲಿದೆ, ತಂದೆ ಇಲ್ಲದ ಮಕ್ಕಳನ್ನು ತಲುಪುವವರೆಗೂ ಮಾಹಿತಿಯನ್ನು ಶೇರ್ ಮಾಡಿ’ ಎಂಬ ವದಂತಿ ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ತಲೆನೋವಾಗಿ ಪರಿಣಮಿಸಿದೆ.

ವಾಟ್ಸ್‌ ಆ್ಯಪ್‌ ಗ್ರೂ‍ಪ್‌ಗಳಲ್ಲಿ ಹರಿದಾಡುತ್ತಿರುವ ಮಾಹಿತಿಯನ್ನು ನಂಬಿ ಪ್ರತಿದಿನ ಗ್ರಾಮ ಪಂಚಾಯಿತಿ, ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನಾ ಕಚೇರಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಸಾರ್ವಜನಿಕರು ಭೇಟಿನೀಡುತ್ತಿದ್ದಾರೆ. ತಂದೆ ಇಲ್ಲದ ಮಗುವಿಗೆ ವರ್ಷಕ್ಕೆ ₹ 24,000 ಸ್ಕಾಲರ್‌ಶಿಪ್‌ ಬರುವಂತೆ ಮಾಡಿ ಎಂದು ಅರ್ಜಿ ಹಿಡಿದುಕೊಂಡು ಬರುತ್ತಿದ್ದಾರೆ. ಪ್ರತಿಯೊಬ್ಬರಿಗೂ ವೈರಲ್ ಸಂದೇಶದ ಸತ್ಯಾಸತ್ಯತೆ ತಿಳಿಸಿ ವಾಪಸ್ ಕಳಿಸುವುದು ಸವಾಲಿನ ಕೆಲಸವಾಗಿದೆ ಎಂದು ಅಲವತ್ತುಕೊಳ್ಳುತ್ತಿದ್ದಾರೆ ಅಧಿಕಾರಿಗಳು.

ಸತ್ಯಾಸತ್ಯತೆ ಏನು: ತಂದೆ ಇಲ್ಲದ ಎಲ್ಲ ಮಕ್ಕಳಿಗೂ 24,000 ಸ್ಕಾಲರ್‌ಶಿಪ್‌ ದೊರೆಯುತ್ತದೆ ಎಂಬುದು ಸುಳ್ಳು. ಮಕ್ಕಳ ನ್ಯಾಯ ಕಾಯ್ದೆ ಪ್ರಕಾರ ಸರ್ಕಾರ ಪ್ರಾಯೋಜಕತ್ವ ಕಾರ್ಯಕ್ರಮ ಜಾರಿಗೆ ತಂದಿದ್ದು ಇದರ ಫಲಾನುಭವಿಗಳಾಗಲು ಹಲವು ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಪಾಲನೆ ಹಾಗೂ ಪೋಷಣೆಗೆ ಅಗತ್ಯವಿರುವ 14 ಕೆಟಗರಿಗಳಡಿ ಬರುವ ಮಕ್ಕಳು ಮಾತ್ರ ಪ್ರಾಯೋಜಕತ್ವ ಕಾರ್ಯಕ್ರಮದಡಿ ಬರುತ್ತಾರೆ ಎನ್ನುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜ್‌.

ADVERTISEMENT

ಮಾನದಂಡ ಏನು? ಇಬ್ಬರು ಪೋಷಕರನ್ನು ಕಳೆದುಕೊಂಡಿರುವ ಮಕ್ಕಳು, ಕಾರಾಗೃಹದಲ್ಲಿರುವ ಪೋಷಕರ ಮಕ್ಕಳು, ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳು, ಪಿಎಂ ಕೇರ್ಸ್ ಚಿಲ್ಡ್ರನ್ ಯೋಜನೆಯ ಅನುಮೋದಿತ ಮಕ್ಕಳು, ಬಾಲ ಕಾರ್ಮಿಕ ಸಂತ್ರಸ್ತರು, ಕಳ್ಳ ಸಾಗಾಣಿಕೆಗೆ ಒಳಗಾದ ಮಕ್ಕಳು, ಪೋಕ್ಸೋ ಕಾಯ್ದೆಯ ಸಂತ್ರಸ್ತ ಮಕ್ಕಳು, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾದ ಪೋಷಕರ ಮಕ್ಕಳು, ಬಾಲ ಸ್ವರಾಜ್ ಪೋರ್ಟಲ್‌ನಲ್ಲಿ ನೋಂದಾಯಿತ ಮಕ್ಕಳು, ಪಾಲನೆ ಮತ್ತು ರಕ್ಷಣೆಗೆ ಅಗತ್ಯವಿರುವ ಪಾಲನಾ ಸಂಸ್ಥೆಯ ಮಕ್ಕಳು ಮಾತ್ರ ಪ್ರಾಯೋಜಕತ್ವ ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು.

ಪೋಷಕರಿಲ್ಲದ ಅನಾಥ ಮಕ್ಕಳ ಆರೈಕೆಗೆ ಸರ್ಕಾರದಿಂದ ತೆರೆಯಲಾಗಿರುವ ಕೇಂದ್ರಗಳಿಗೆ ಬರಲು ಒಪ್ಪದ ಮಕ್ಕಳು ಕುಟುಂಬದ ವಾತಾವರಣದಲ್ಲಿ ಬೆಳೆಯಲು ಹಾಗೂ ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟ ಮಕ್ಕಳು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಪ್ರಾಯೋಜಕತ್ವ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಈ ಕಾರ್ಯಕ್ರಮದಡಿ ತಾತ್ಕಾಲಿಕ ಅವಧಿಗೆ ಮಾತ್ರ ಆರ್ಥಿಕ ನೆರವು ನೀಡಲಾಗುತ್ತದೆ.

ಮಗುವಿನ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚಗಳನ್ನು ಪೂರೈಸಲು ಮಗುವನ್ನು ಪಾಲನೆ ಪೋಷಣೆ ಮಾಡುವವರಿಗೆ ಸರ್ಕಾರದಿಂದ ಪೂರಕವಾದ ಆರ್ಥಿಕ ನೆರವು ಸಿಗಲಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚೆಲುವರಾಜ್ ಮಾಹಿತಿ ನೀಡಿದರು.

ಅರ್ಜಿ ಸಲ್ಲಿಸಬೇಕಿಲ್ಲ: ‘ಪ್ರಾಯೋಜಕತ್ವ’ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬೇಕಾದ ಅಗತ್ಯ ಇರುವುದಿಲ್ಲ. ಜಿಲ್ಲಾ ಮಕ್ಕಳ ರಕ್ಷಣಾ ಘಟಕವೇ ಅರ್ಹರನ್ನು ಆಯ್ಕೆ ಮಾಡುತ್ತದೆ. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬರುವ ಕೆಲವು ಅರ್ಹ ಪ್ರಕರಣಗಳನ್ನೂ ಪ್ರಾಯೋಜಕತ್ವ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ಸಾರ್ವಜನಿಕರು ಇಲಾಖೆಯ ಗಮನಕ್ಕೆ ತಂದರೆ ಅರ್ಹರಿದ್ದರೆ ಆಯ್ಕೆ ಮಾಡಲಾಗುವುದು. ಜಿಲ್ಲೆಯಲ್ಲಿ ಪ್ರಸ್ತುತ 352 ಮಕ್ಕಳಿಗೆ ಪ್ರಾಯೋಜಕತ್ವ ಕಾರ್ಯಕ್ರಮದಡಿ ಪ್ರತಿ ತಿಂಗಳು ₹ 4,000 ಆರ್ಥಿಕ ನೆರವು ನೀಡಲಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲಿ ಜಿಲ್ಲೆಯಲ್ಲಿ 540 ಮಕ್ಕಳಿಗೆ ಪ್ರಾಯೋಜಕತ್ವ ಕಾರ್ಯಕ್ರಮದಡಿ ಆರ್ಥಿಕ ನೆರವು ನೀಡಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.