ಚಾಮರಾಜನಗರ: ಪಟ್ಟಣದ ಜಿಲ್ಲಾಡಳಿತ ಭವನದ ಆವರಣದಲ್ಲಿ ಅಕ್ಟೋಬರ್ 20ರಿಂದ 22ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.
ರೈತರು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ತೋಟಗಾರಿಕೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡಿವೆ. ಶನಿವಾರ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.
ಅಲಂಕಾರಿಕಪ್ರತಿಕೃತಿಗಳಆಕರ್ಷಣೆ: ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಹೂವಿನ ಅಲಂಕಾರಿಕ ಪ್ರತಿ ಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ಹುಲಿಯ ಮೇಲಿನ ಮಹದೇಶ್ವರ, ಶಿವಲಿಂಗ, ಆನೆ ಪ್ರತಿಕೃತಿಗಳನ್ನು ಗುಲಾಬಿ, ಜರ್ಬೆರಾ, ಕೊಲ್ ಕತ್ತಾ, ಚೆಂಡು ಹೂ,ಸುಗಂಧರಾಜ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ.
2 ದಿನಗಳ ತಯಾರಿ: ಬೆಂಗಳೂರಿನ ’ಟ್ಯುಲಿಪ್ ಫಿಯೋರಿ’ ಸಂಸ್ಥೆಯವರು ಎರಡು ದಿನಗಳಿಂದ 56 ವಿವಿಧ ಬಗೆಯ ಹೂವುಗಳಿಂದ ಪ್ರತಿಕೃತಿಗಳನ್ನು ಸಿದ್ಧಗೊಳಿಸಿದ್ದಾರೆ. ನೆರೆಯ ರಾಜ್ಯ ತಮಿಳುನಾಡಿನ ಊಟಿಯಿಂದ ಜರ್ಬೆರಾ, ಕೋಲ್ಕತ್ತದಿಂದಕೊಲ್ ಕತ್ತಾ, ಚೆಂಡು ಹೂ ಹಾಗೂತಾಲ್ಲೂಕಿನಹೊಸೂರಿನಿಂದ ಗುಲಾಬಿ ಹೂವುಗಳನ್ನು ತರಿಸಿಕೊಂದ್ದಾರೆ.
‘ಎಲ್ಲ ಪ್ರತಿಕೃತಿಗಳು ಸಿದ್ಧಗೊಂಡಿವೆ. ಹೂವು, ಗಿಡಗಳನ್ನು ಕತ್ತರಿಸಿ ರೂಪ ಕೊಟ್ಟಾಗ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. 6 ಮಂದಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.ಯುವ ಸಮುದಾಯವನ್ನು ಆಕರ್ಷಿಸುವುದಕ್ಕಾಗಿ ‘ಸೆಲ್ಫಿ ಪಾಯಿಂಟ್’ ಕೂಡ ಸಿದ್ಧಗೊಳಿಸಲಾಗಿದೆ’ ಎಂದು ಸಂಸ್ಥೆಯ ಹೂವಿನ ಅಲಂಕಾರಿಕಾ ನಿರ್ದೇಶಕಿ ಸಂಧ್ಯಾ ಯಾದವ್ ‘ಪ್ರಜಾವಾಣಿ’ಗೆ ತಿಳಿಸಿದರು.
ವರ್ಟಿಕಲ್ ಗಾರ್ಡನ್: ಚಿಟ್ಟೆ ಆಕಾರದ ವರ್ಟಿಕಲ್ ಗಾರ್ಡನ್ ಅನ್ನು ವಿವಿಧ ಹೂ ಕುಂಡಗಳಿಂದ ಅಲಂಕರಿಸಲಾಗಿದೆ.ಜೊತೆಗೆಸುಮಾರು2 ಸಾವಿರಹೂವಿನ ಕುಂಡಗಳನ್ನು ಜೋಡಿಸಲಾಗಿದ್ದು, ಇದು ಸಾರ್ವಜನಿಕರನ್ನು ಆಕರ್ಷಿಸಲಿದೆ.ರೈತರಿಗೆ ಮತ್ತು ಮಹಿಳೆಯರಿಗೆ ಮಾಹಿತಿ ನೀಡಲು ಹಣ್ಣು ಮತ್ತು ತರಕಾರಿಗಳನ್ನೂ ಪ್ರದರ್ಶನದಲ್ಲಿ ಇಡಲಾಗಿದೆ.
ಶಿವಮೊಗ್ಗದ ಹರೀಶ್ ಕುಮಾರ್ ಲಾಥೋರೆ ಅವರು ಕಲ್ಲಂಗಡಿ, ಕುಂಬಳಕಾಯಿ, ಸೋರೆಕಾಯಿ, ಬಾಳೆದಿಂಡು ಹಾಗೂ ವಿವಿಧ ತರಕಾರಿ ಹಾಗೂ ಹಣ್ಣುಗಳಿಂದ ಆಕೃತಿಗಳನ್ನು ಕೆತ್ತನೆ ಮಾಡಿದ್ದಾರೆ. ಇವರ ಪತ್ನಿ ಕವಿತಾಕೂಡ ಇವರಿಗೆ ಸಹಾಯಕರಾಗಿದ್ದಾರೆ.
‘ಈ ಪ್ರದರ್ಶನದಲ್ಲಿ ಒಟ್ಟು 15 ವ್ಯಕ್ತಿಗಳ ಭಾವಚಿತ್ರ ಕೆತ್ತಲಾಗುತ್ತದೆ. ಜಿಲ್ಲಾಡಳಿತ ಸೂಚಿಸುವ ವ್ಯಕ್ತಿಗಳ ಭಾವಚಿತ್ರ ಕೆತ್ತುತ್ತೇನೆ. ಇದಕ್ಕಾಗಿ ಕಲ್ಲಂಗಡಿ, ಕುಂಬಳ ಕಾಯಿ, ಸೋರೆಕಾಯಿ, ಬಾಳೆದಿಂಡು ವಿವಿಧ ತರಕಾರಿ, ಹಣ್ಣುಗಳನ್ನು ಜಿಲ್ಲಾಡಳಿತವೇ ಒದಗಿಸಿದೆ’ ಎಂದು ಹರೀಶ್ ಕುಮಾರ್ ಲಾಥೋರೆ ‘ಪ್ರಜಾವಾಣಿ’ಗೆ ವಿವರಿಸಿದರು.
ರೈತರ ಬೆಳೆಗಳ ಪ್ರದರ್ಶನ: ಇಲಾಖೆಯಿಂದ ರೈತರು ಬೆಳೆದಂತಹ ವಿವಿಧ ಬೆಳೆಗಳನ್ನು ಪ್ರದರ್ಶನದಲ್ಲಿಡಲಾಗಿದೆ.ಇಲಾಖೆಯಿಂದ ಸಹಾಯಧನ ನೀಡಲಾಗುವಂತಹ ಪಾಲಿಹೌಸ್, ಈರುಳ್ಳಿ ಶೇಖರಣಾ ಘಟಕ, ತಾರಸಿ ತೋಟ, ಕೈತೋಟಗಳಂತಹ ಕಾರ್ಯಕ್ರಮಗಳ ಮಾದರಿಗಳನ್ನು ನಿರ್ಮಿಸಲಾಗಿದೆ.
ತೋಟಗಾರಿಕೆ ಇಲಾಖೆ ಮಾತ್ರವಲ್ಲದೇ ಕೃಷಿ, ಮೀನುಗಾರಿಕೆ, ಅರಣ್ಯ, ರೇಷ್ಮೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ರುಡ್ ಸೆಟ್, ನಿರ್ಮಿತಿ ಕೇಂದ್ರ, ಜೇನುಕೃಷಿ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ಮುಂತಾದ ಇಲಾಖೆಗಳ ಮಳಿಗೆಗಳೂ ಇಲ್ಲಿರಲಿವೆ.
ರೈತರಿಗೆ ತರಬೇತಿ, ಸಾರ್ವಜನಿಕರಿಗೆ ರಂಗೋಲಿ ಸ್ಪರ್ಧೆ
ಮೂರು ದಿನಗಳ ಪ್ರದರ್ಶನದೊಂದಿಗೆ ಶನಿವಾರ ಮಧ್ಯಾಹ್ನ 12 ಗಂಟೆಗೆ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಮತ್ತು ಭಾನುಚಾರದಂದು ಬೆಳಿಗ್ಗೆ 11ಗಂಟೆಗೆ ರಂಗೋಲಿ ಸ್ಪರ್ಧೆ ಹಾಗೂ ಅ.22ರಂದು ಪಾಲಿಹೌಸ್ ತೋಟಗಾರಿಕೆ ಬೆಳೆಗಳ ಬೇಸಾಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. ಈ ಮೇಲಿನ ಕಾರ್ಯಕ್ರಮಗಳು ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆಯಲಿವೆ.
ಸೆಲ್ಪಿ ಪಾಯಿಂಟ್:ಫಲಪುಷ್ಪ ಪ್ರದರ್ಶನದ ಹೊರ ಭಾಗದಲ್ಲಿ ಯುವಜನರನ್ನು ಆಕರ್ಷಿಸಲು ಹೂವುಗಳಿಂದ ನಿರ್ಮಿಸಿದ ಸೆಲ್ಫಿ ಪಾಯಿಂಟ್ ನೋಡುಗರನ್ನುಸೆಳೆಯಲಿದೆ. ಇಕೆಬಾನಾ ಹೂವಿನ ಅಲಂಕಾರ ಹಾಗೂ ನೀರಿನ ಕಾರಂಜಿಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.