ADVERTISEMENT

ಹೊಸಬರಿಗೆ ಕಲಿಸುವ ಕಳಕಳಿ

ಹನೂರು: ತಮಟೆ ಕಲೆಯಲ್ಲಿ ಪರಿಣತಿ ಸಾಧಿಸಿರುವ ಚೆನ್ನಾಲಿಂಗನಹಳ್ಳಿಯ ಮುದ್ದಯ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 6:27 IST
Last Updated 10 ಜನವರಿ 2024, 6:27 IST
ತಮಟೆ ಬಾರಿಸುವುದರಲ್ಲಿ ನಿರತ ಮುದ್ದಯ್ಯ
ತಮಟೆ ಬಾರಿಸುವುದರಲ್ಲಿ ನಿರತ ಮುದ್ದಯ್ಯ   

ಹನೂರು: ತಂದೆಯಿಂದ ಬಳುವಳಿಯಾಗಿ ಬಂದ ತಮಟೆ ಬಾರಿಸುವ ಕಲೆ ಇಂದು ಇವರ ಬದುಕು ರೂಪಿಸಿದೆ. ತಾವು ಕಲಿಯುವುದರ ಜತೆಗೆ ಗ್ರಾಮದ ಯುವಕರಿಗೂ ಕಲಿಸಿಕೊಂಡು ಬರುತ್ತಿದ್ದಾರೆ.

ಇದು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದ ಮುದ್ದಯ್ಯ ಅವರ ಕಥೆ.

ಚೆನ್ನಾಲಿಂಗನಹಳ್ಳಿ ಗ್ರಾಮದ ತಮಟೆ ಪುಟ್ಟಮಾದಯ್ಯ ಎಂದರೆ ಸುತ್ತಮುತ್ತಲಿನ ಗ್ರಾಮಗಳಿಗೆ ಚಿರಪರಿಚಿತರು. ಐದು ದಶಕಗಳ ಕಲಾ ತಮಟೆ ಕಲೆಯಲ್ಲಿ ಜೀವನ ಸವೆಸಿದ್ದ ಅವರು ಇತ್ತೀಚೆಗೆ ನಿಧನರಾಗಿದ್ದಾರೆ. ಅವರ ಮಗ ಮುದ್ದಯ್ಯ. ತಂದೆಯವರಿಂದಲೇ ಈ ಕಲಾ ಪ್ರಕಾರವನ್ನು ಕಲಿತಿರುವ ಅವರು, ತಂದೆಯ ಕಲಾ ಹಾದಿಯಲ್ಲೇ ಸಾಗುತ್ತಿದ್ದಾರೆ.   

ADVERTISEMENT

10 ವರ್ಷಗಳ ಕಾಲ ಪುಟ್ಟ ಮಾದಯ್ಯ ಅವರೊಂದಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದ್ದ ಮುದ್ದಯ್ಯ, ಈಗ ತಮಟೆ ಬಾರಿಸುವುದರಲ್ಲಿ ಪಳಗಿದ್ದಾರೆ.

ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳನ್ನು ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿದ್ದಾರೆ.

‘ಬಾಲ್ಯದಲ್ಲಿ ಕುತೂಹಲಕ್ಕಾಗಿ ಕಲಿತ ಕಲೆ ಇಂದು ಬದುಕು ಸಾಗಿಸಲು ನೆರವಾಗಿದೆ. ಮದುವೆ, ದೇವರ ಉತ್ಸವಗಳಿಗೆ ಆಹ್ವಾನವಿರುತ್ತದೆ. ತಂಡದ ಜತೆ ಹೋದರೆ ಅವರು ನೀಡುವ ಸಂಭಾವನೆಯನ್ನು ಎಲ್ಲರೂ ಹಂಚಿಕೊಳ್ಳುತ್ತೇವೆ. ಮೊದಲೆಲ್ಲಾ ಹಿರಿಯರ ಜತೆ ಹೋಗುತ್ತಿದ್ದೆ. ಈಗ ತಂಡದಲ್ಲಿ ತಂದೆ ಸಮಕಾಲೀನರಾದ ಕುರಿಬಸಯ್ಯ ಒಬ್ಬರೇ ಇದ್ದಾರೆ.  ಉಳಿದವರೆಲ್ಲರೂ ಯುವಕರೇ’ ಎಂದು ಹೇಳುತ್ತಾರೆ ಮುದ್ದಯ್ಯ. 

‘ನಾನು ತಂದೆಯಿಂದ ಕಲಿತೆ. ಈಗ ಗ್ರಾಮದ 15 ಹುಡುಗರಿಗೆ ಈ ಕಲೆಯನ್ನು ಹೇಳಿಕೊಡುತ್ತಿದ್ದೇನೆ. ತಳ ಸಮುದಾಯಗಳಲ್ಲಿ ಅತ್ಯಂತ ಪಾರಂಪರಿಕ ಕಲೆಯಾಗಿರುವ ಇದು ನಮ್ಮ ತಂದೆ ಹಾಗೂ ನನ್ನ ತಲೆಮಾರಿಗೆ ಕೊನೆಯಾಗಬಾರದು. ಒಂದು ತಲೆಮಾರಿನಿಂದ ಮುಂದಿನ ತಲೆಮಾರಿಗೆ ವರ್ಗಾವಣೆಯಾದಾಗ ಮಾತ್ರ ಕಲೆ ಉಳಿಯಲು ಸಾಧ್ಯ’ ಎಂದು ಹೇಳುತ್ತಾರೆ ಅವರು. 

‘ಈಗ ತಂಡದಲ್ಲಿ ಆರು ಜನರಿದ್ದೇವೆ. ತಂಡದಲ್ಲಿ ಒಬ್ಬೊಬ್ಬರು ಕಡಿಮೆಯಾಗುತ್ತಿದ್ದಂತೆಯೇ ಹೊಸ ಸದಸ್ಯರು ಬಂದು ಸೇರಿಕೊಳ್ಳುತ್ತಾರೆ. ಹೀಗೆ ಮುಂದುವರೆಯುತ್ತಾ ಹೋಗುತ್ತದೆ. ನಮ್ಮಿಂದ ಕಲಿತವರು ಅವರ ಹಿಂದೆ ಬರುವವರಿಗೆ ಕಲಿಸಿಕೊಡುತ್ತಾರೆ. ಹೀಗೆ ಸರಣಿಯಾಗಿ ಕಲೆ ವರ್ಗಾವಣೆಯಾಗುತ್ತದೆ’ ಎನ್ನುತ್ತಾರೆ ಮುದ್ದಯ್ಯ.

ದೇಸಿ ಕಲೆಗಳನ್ನು ಕಲಿಯುವವರ ಸಂಖ್ಯೆ ಕ್ಷೀಣಿಸತೊಡಗಿದೆ. ಸರ್ಕಾರ ಸ್ಥಳೀಯ ಕಲೆಗಳನ್ನು ಕಲಿಯಲು ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಬೇಕು - ಮುದ್ದಯ್ಯ ತಮಟೆ ಕಲಾವಿದ

- ‘ದೇಸೀ ಕಲೆಗಳಿಗೆ ಅಂತ್ಯವಿಲ್ಲ’ ಇಂದಿನ ತಂತ್ರಜ್ಞಾನ ಯುಗ ಆಧುನಿಕ ಸಂಗೀತ ಉಪಕರಣಗಳ ಭರಾಟೆಯಲ್ಲಿ ತಮಟೆಗೆ  ಪ್ರಾಮುಖ್ಯ ಇದೆಯೇ ಎಂದು ಕೇಳಿದ್ದಕ್ಕೆ ‘ತಂದೆ ನಂತರ ಹೇಗಪ್ಪಾ ಎಂಬ ಸಂದೇಹ ನಮಗೂ ಇತ್ತು. ಆದರೆ ನಮಗೆ ಬರುವ ಆಮಂತ್ರಣಗಳನ್ನು ಗಮನಿಸಿದಾಗ ಎಷ್ಟೇ ತಂತ್ರಜ್ಞಾನ ಮುಂದುವರಿದರೂ ದೇಶಿ ಕಲೆಗಳಿಗೆ ಎಂದಿಗೂ ಅಂತ್ಯವಿಲ್ಲ ಎಂಬುದು ಖಚಿತವಾಗಿದೆ.  ಜಾತ್ರೆಗಳು ಮದುವೆ ಉತ್ಸವ ಮೆರವಣಿಗೆ ಮುಂತಾದವುಗಳಲ್ಲಿ ಈಗಲೂ ದೇಸೀ ಕಲೆಗಳಿಗೆ ಪ್ರಾಧಾನ್ಯ ಇದೆ. ಇವುಗಳಿಂದಲೇ ಕಲೆಗಳು ಉಳಿದಿವೆ. ಇವುಗಳು ಇರುವವರೆಗೂ ದೇಶಿ ಕಲೆಗಳು ಇರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಮುದ್ದಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.