ಚಾಮರಾಜನಗರ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಅಭಿಯಾನ ಮಂಗಳವಾರದಿಂದ (ಸೆ.26) ಅ.25 ರವರೆಗೆ ನಡೆಯಲಿದ್ದು, ರೈತರು, ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳಿಗೆ ಲಸಿಕೆ ಕೊಡಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಮಾಡಿಕೊಳ್ಳುವಂತೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ 4ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕೆ ಅಭಿಯಾನದ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದರು.
‘ರಾಸುಗಳನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಲಸಿಕೆ ನೀಡುವ 4ನೇ ಸುತ್ತಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರು ಮೈಸೂರಿನಲ್ಲಿ ಮಂಗಳವಾರ ಚಾಲನೆ ನೀಡಲಿದ್ದಾರೆ. ಲಸಿಕೆ ನೀಡುವ ಕಾರ್ಯದಲ್ಲಿ ರಾಜ್ಯವು ದೇಶದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ’ ಎಂದರು.
‘ಜಿಲ್ಲೆಯಲ್ಲೂ ಕಾಲುಬಾಯಿ ಜ್ವರದ ಲಸಿಕೆ ನೀಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ತಂಡದ ಲಸಿಕೆದಾರರು, ಮೇಲ್ವಿಚಾರಕರಿಗೆ ಶೇ 100ರಷ್ಟು ಪ್ರಗತಿ ಸಾಧಿಸಲು ಸೂಚಿಸಲಾಗಿದೆ’ ಎಂದರು.
‘ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 2,57,279 ಜಾನುವಾರುಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ 27 ತಂಡ ರಚಿಸಲಾಗಿದ್ದು, ಪ್ರತಿ ಗ್ರಾಮಗಳಲ್ಲಿ ಬೆಳಿಗ್ಗೆ 6ರಿಂದ 10.30 ಹಾಗೂ ಸಂಜೆ 5ರಿಂದ 7ರವರೆಗೆ ಲಸಿಕೆ ನೀಡಲಾಗುತ್ತದೆ. ತಂಡವು ಗ್ರಾಮಗಳಿಗೆ ಭೇಟಿ ನೀಡಿದಾಗ ರೈತರು, ಜಾನುವಾರು ಮಾಲೀಕರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ ಸಹಕಾರ ನೀಡಬೇಕು’ ಎಂದು ಸಚಿವರು ಹೇಳಿದರು.
ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಸಿಇಒ ಆನಂದ್ ಪ್ರಕಾಶ್ ಮೀನಾ, ಎಸ್‌ಪಿ ಪದ್ಮಿನಿ ಸಾಹು, ಬಿ.ಆರ್.ಟಿ. ಹುಲಿ ಸಂರಕ್ಷಿತ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ರಮೇಶ್ ಕುಮಾರ್, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಸಂತೋಷ್ ಕುಮಾರ್, ಎಡಿಸಿ ಗೀತಾ ಹುಡೇದ ಇತರರು ಇದ್ದರು.
ಸಿ.ಎಂ. ಭೇಟಿ: ಸಿದ್ಧತೆ ಪರಿಶೀಲನೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸೋಮವಾರ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಸಂಬಂಧ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಡಳಿತ ಭವನದಲ್ಲಿ ತಮ್ಮ ಹೊಸ ಕಚೇರಿಯನ್ನು ಉದ್ಘಾಟಿಸಿದ ನಂತರ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು ‘ಮುಖ್ಯಮಂತ್ರಿಯವರ ಭೇಟಿಗೆ ಅಚ್ಚುಕಟ್ಟಾಗಿ ಎಲ್ಲ ಅಗತ್ಯ ಸಿದ್ದತೆಗಳನ್ನು ಕೈಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಕೈಗೊಳ್ಳಲಾಗಿರುವ ಸಿದ್ದತೆಗಳ ಬಗ್ಗೆ ಸಚಿವರಿಗೆ ವಿವರಿಸಿದರು. ಈ ಸಂದರ್ಭದಲ್ಲಿ ಶಾಸಕರು ಅಧಿಕಾರಿಗಳು ಇದ್ದರು. ರಾತ್ರಿ 8.30ಕ್ಕೆ ಬೆಟ್ಟಕ್ಕೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ರಾತ್ರಿ 8.30ಕ್ಕೆ ಮಹದೇಶ್ವರ ಬೆಟ್ಟಕ್ಕೆ ಬರಲಿದ್ದಾರೆ. ಬೆಟ್ಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ. 27ರಂದು ಬೆಳಿಗ್ಗೆ 9.30ಕ್ಕೆ ನಡೆಯಲಿರುವ ಸಾಮೂಹಿಕ ವಿವಾಹ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ನಂತರ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ. ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಚಾಮರಾಜನಗರಕ್ಕೆ ಬರಲಿರುವ ಅವರು ತಾಲ್ಲೂಕು ಕುರುಬರ ಸಂಘ ನಿರ್ಮಿಸಲು ಹೊರಟಿರುವ ಕನಕ ವಾಣಿಜ್ಯ ಸಂಕೀರ್ಣದ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ನಂತರ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಯವರೊಂದಿಗೆ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಕೂಡ ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.