ಹನೂರು: ತಾಲ್ಲೂಕಿನ ಒಡೆಯರಪಾಳ್ಯ ಗ್ರಾಮದ ಮುಖ್ಯರಸ್ತೆಯಲ್ಲಿ ಮದ್ಯದಂಗಡಿ ಸಹಿತ ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ಸೌಲಭ್ಯ ಆರಂಭವಾಗಿದ್ದು, ಈ ಪ್ರದೇಶ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ (ಇಎಸ್‌ಝಡ್) ವ್ಯಾಪ್ತಿಯಲ್ಲಿರುವುದರಿಂದ ಪರಿಸರಪ್ರೇಮಿಗಳು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪರಿಸರ ಸೂಕ್ಷ್ಮ ವಲಯದ ನಿಯಮಗಳನ್ನು ಉಲ್ಲಂಘಿಸಿ ಅಬಕಾರಿ ಇಲಾಖೆಯು ಅನುಮತಿ ನೀಡಿದೆ ಎಂದು ಆರೋಪಿಸಲಾಗಿದೆ. ಆದರೆ ಇದನ್ನು ಇಲಾಖೆಯ ಅಧಿಕಾರಿಗಳು ನಿರಾಕರಿಸಿದ್ದು, ‘ನಿಯಮಗಳ ಅನುಸಾರವಾಗಿಯೇ ಅನುಮತಿ ನೀಡಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಅನುಮತಿ ನೀಡುವುದಕ್ಕೂ ಮುನ್ನ ಅಬಕಾರಿ ಇಲಾಖೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಿಂದ ನಿರಾಕ್ಷೇಪಣಾ ಪತ್ರ ಕೇಳಿತ್ತು. ಆದರೆ, ನಿರ್ದೇಶಕಿ ದೀಪ್ ಜೆ.ಕಾಂಟ್ರ್ಯಾಕ್ಟರ್ ಅವರು, ‘ಪ್ರದೇಶವು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ್ದು, ವಲಯಕ್ಕೆ ಸಂಬಂಧಿಸಿದ ಅಧಿಸೂಚನೆಯ ಅನ್ವಯ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು.
ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಇಲ್ಲದೆಯೇ ಅಬಕಾರಿ ಇಲಾಖೆ ಅನುಮತಿ ನೀಡಿದ್ದು, ವಸತಿಗೃಹ ಕಾರ್ಯಾರಂಭ ಮಾಡಿದೆ.
ಇದೇ ಜಾಗದಲ್ಲಿ ಬೋರ್ಡಿಂಗ್ ಅಂಡ್ ಲಾಡ್ಜಿಂಗ್‌ಗೆ ಅನುಮತಿ ನೀಡಬೇಕು ಎಂದು 2021–22ರಲ್ಲಿಯೇ ಮನವಿ ಸಲ್ಲಿಸಲಾಗಿತ್ತು. ಮದ್ಯದಂಗಡಿ ತೆರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಸ್ಥಳೀಯರು ಅರಣ್ಯಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಇದು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯಲ್ಲಿರುವುದರಿಂದ ಅರಣ್ಯಾಧಿಕಾರಿಗಳೂ ನಿರಪೇಕ್ಷಣಾ ಪತ್ರ ನೀಡಲು ನಿರಾಕರಿಸಿದ್ದರು. ಆದರೆ, ಎರಡು ವರ್ಷಗಳ ನಂತರ ಅದೇ ಜಾಗದಲ್ಲಿ ಮದ್ಯದಂಗಡಿ ಸಹಿತ ವಸತಿಗೃಹ ತಲೆ ಎತ್ತಿದೆ.
ಒಡೆಯರಪಾಳ್ಯ ಗ್ರಾಮದ ಆರ್.ಉಮಾಶಂಕರ್ ಎಂಬುವವರ ಒಡೆತನದಲ್ಲಿರುವ ಕಟ್ಟಡ ಸಂಖ್ಯೆ 297ಎಯ ರೆಸಿಡೆನ್ಸಿ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಉದ್ದೇಶಕ್ಕೆ ಹೊಸದಾಗಿ ಸಿ.ಎಲ್ ಪರವಾನಗಿ ಮಂಜೂರು ಮಾಡಲು ನಿರಾಕ್ಷೇಪಣಾ ಪತ್ರ ನೀಡುವಂತೆ ಕೊಳ್ಳೇಗಾಲದ ಅಬಕಾರಿ ಇನ್‌ಸ್ಪೆಕ್ಟರ್ ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರಿಗೆ ಮನವಿ ಮಾಡಿದ್ದರು.
ಇದರ ಬಗ್ಗೆ ಸ್ಥಳೀಯ ವಲಯ ಅರಣ್ಯಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಮಹಜರು ನಡೆಸಿ ಮಾಹಿತಿ ಪಡೆದಿದ್ದ ಬಿಆರ್‌ಟಿ ಡಿಸಿಎಫ್ ದೀಪ್ ಜೆ ಕಾಂಟ್ರ್ಯಾಕ್ಟರ್ ಜೂನ್ 28ರಂದು ಹಿಂಬರಹ ನೀಡಿದ್ದರು.
‘ನಿವೇಶನವು ಹುಲಿ ಸಂರಕ್ಷಿತ ಪ್ರದೇಶದ ಸೀಮಾ ರೇಖೆಯ ಜಿಪಿಎಸ್ ಸೂಚ್ಯಂಕದಿಂದ 1.27 ಕಿ.ಮೀ ದೂರದಲ್ಲಿದೆ. ಹಾಗೂ ಪರಿಸರ ಸೂಕ್ಷ್ಮ ವಲಯಕ್ಕೆ ಒಳಪಟ್ಟಿರುತ್ತದೆ. 2019ರ ನವೆಂಬರ್ 19ರಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹೊರಡಿಸಿದ್ದ ಅಧಿಸೂಚನೆಯ ಅನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿರುತ್ತದೆ’ ಎಂದಿದ್ದರು.
‘ಅರಣ್ಯ ಇಲಾಖೆಯ ಒಪ್ಪಿಗೆ ಇಲ್ಲದಿದ್ದರೂ ಮದ್ಯದ ಅಂಗಡಿ ಆರಂಭವಾಗಿದೆ. ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಎರಡು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ, ಪ್ರಯೋಜನವಾಗಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಮದ್ಯದಂಗಡಿ ತೆರೆಯಲು ಸರ್ಕಾರವೇ ಅವಕಾಶ ನೀಡಿದೆ’ ಎಂದು ಸ್ಥಳೀಯರು ದೂರಿದರು.
‘ಲೊಕ್ಕನಹಳ್ಳಿಯಿಂದ ಒಡೆಯರಪಾಳ್ಯ ಮೂಲಕ ಸಾಗುವ ರಸ್ತೆ ಅಂತರರಾಜ್ಯ ಹೆದ್ದಾರಿ. ವಾಹನಗಳ ಸಂಚಾರ ಹೆಚ್ಚು. ಅರಣ್ಯವೂ ಹತ್ತಿರದಲ್ಲೇ ಇರುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಪರಿಸರವಾದಿಗಳು.
‘ನಿಯಮ ಉಲ್ಲಂಘಿಸಿಲ್ಲ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆ ಉಪ ಆಯುಕ್ತ ಆರ್.ನಾಗಶಯನ ‘ಆ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಒಂದು ಕಿ.ಮೀ ಇದೆ. ಅದಕ್ಕಿಂತ ಹೆಚ್ಚು ದೂರದಲ್ಲಿ ವಸತಿಗೃಹ ನಿರ್ಮಿಸಲಾಗಿದೆ. ಎಲ್ಲ ನಿಯಮಗಳನ್ನು ಪರಿಶೀಲಿಸಿ ಯಾವುದೇ ಉಲ್ಲಂಘನೆ ಕಂಡು ಬಂದಿಲ್ಲವೆಂಬುದು ದೃಢಪಟ್ಟ ನಂತರವೇ ಪರವಾನಗಿ ನೀಡಲಾಗಿದೆ. ಅದೇ ಭಾಗದಲ್ಲಿ ಬೇರೆ ಕಡೆಗಳಲ್ಲೂ ಮದ್ಯದ ಅಂಗಡಿಗಳಿಗೆ ಪರವಾನಗಿಯನ್ನು ಈ ಹಿಂದೆಯೂ ನೀಡಲಾಗಿತ್ತು’ ಎಂದರು.
ಅಬಕಾರಿ ಇನ್‌ಸ್ಪೆಕ್ಟರ್ ನಿರಾಕ್ಷೇಪಣಾ ಪತ್ರಕ್ಕಾಗಿ ಕೋರಿಕೊಂಡಿದ್ದರು. ನಿವೇಶನವು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿರುವುದರಿಂದ ಅನುಮತಿ ಕೊಟ್ಟಿಲ್ಲದೀಪ್ ಜೆ ಕಾಂಟ್ರ್ಯಾಕ್ಟರ್ ಬಿಆರ್‌ಟಿ ಡಿಸಿಎಫ್
ನಿವೇಶನ ಅರಣ್ಯದ ಗಡಿಯಿಂದ ಸಾಕಷ್ಟು ದೂರದಲ್ಲಿದೆ. ನಿಯಂತ್ರಿತ ಚಟುವಟಿಕೆಗೆ ಅವಕಾಶವಿದೆ. ನಿಯಮಗಳನ್ನು ಪಾಲಿಸಿ ಅನುಮತಿ ನೀಡಲಾಗಿದೆಆರ್.ನಾಗಶಯನ ಅಬಕಾರಿ ಇಲಾಖೆ ಉಪ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.