ADVERTISEMENT

ಹನೂರು: ಗಿಡ ನೆಡಲು ಅರಣ್ಯ ಇಲಾಖೆ ಪ್ರೋತ್ಸಾಹ

ರೈತರಿಗಷ್ಟೇ ಅಲ್ಲ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಡಳಿತ ಮಂಡಳಿಗಳಿಗೂ ವಿತರಣೆ

ಬಿ.ಬಸವರಾಜು
Published 1 ಜೂನ್ 2024, 7:34 IST
Last Updated 1 ಜೂನ್ 2024, 7:34 IST
ಹನೂರು ಬಫರ್‌ ವಲಯದಲ್ಲಿರುವ ನರ್ಸರಿಯಲ್ಲಿ ಬೆಳೆಸಿರುವ ಸಸಿಗಳು
ಹನೂರು ಬಫರ್‌ ವಲಯದಲ್ಲಿರುವ ನರ್ಸರಿಯಲ್ಲಿ ಬೆಳೆಸಿರುವ ಸಸಿಗಳು   

ಹನೂರು: ಮಳೆ ಆರಂಭವಾಗುತ್ತಿದ್ದಂತೆಯೇ ಅರಣ್ಯ ಇಲಾಖೆಯು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಗಿಡಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ. 

ರೈತರಿಗೆ ಮಾತ್ರವಲ್ಲದೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ, ಆಡಳಿತ ಮಂಡಳಿಗಳಿಗೂ ಶಾಲಾ ಆವರಣ, ಮನೆಗಳ ಸುತ್ತಮುತ್ತ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ನೀಡಲಿದೆ. 

ಮಲೆ ಮಹದೇಶ್ವರ ವನ್ಯಧಾಮದ ಆಡಳಿತ ಇದೇ ಉದ್ದೇಶಕ್ಕೆ 44 ಸಾವಿರಕ್ಕೂ ಹೆಚ್ಚು ಗಿಡಗಳನ್ನು ತನ್ನ ನರ್ಸರಿಗಳಲ್ಲಿ ಬೆಳೆಸಿದ್ದು, ಜೂನ್‌ ಆರಂಭದಿಂದ ವಿತರಣೆ ಆರಂಭಿಸಲಿದೆ. ಇದರೊಂದಿಗೆ ವನ್ಯಧಾಮದ ವ್ಯಾಪ್ತಿಯಲ್ಲಿ ಖಾಲಿ ಜಾಗಗಳಲ್ಲೂ ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದೆ. 

ADVERTISEMENT

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರು ವಿವಿಧ ಗಿಡಗಳನ್ನು ಪಡೆದು ತಮ್ಮ ಜಮೀನುಗಳಲ್ಲಿ ನೆಟ್ಟು ಪೋಷಿಸಿದರೆ ಅದಕ್ಕೆ ಇಲಾಖೆ ಪ್ರೋತ್ಸಾಹ ಧನವನ್ನೂ ನೀಡುತ್ತದೆ. 

ರೈತರ ವಿತರಣೆಗಾಗಿ ಬೆಲೆಬಾಳುವ ಶ್ರೀಗಂಧ, ತೇಗ, ಸಾಗುವಾನಿ, ಮಹಾಗನಿ, ಹೆಬ್ಬೇವು, ಬಿದಿರು, ಸಿಲ್ವರ್, ನೇರಳೆ, ಅಗಸೆ, ಅತ್ತಿ, ಕಾಡು ಬಾದಾಮಿ ಸಸಿಗಳನ್ನು ಬೆಳೆಸಲಾಗಿದೆ. 

ಕಡಿಮೆ ದರ: ವನ್ಯಧಾಮದ ಹನೂರು, ಸಂತೆಖಾನಿ ಹಾಗೂ ಗಾಜನೂರು ನರ್ಸರಿಗಳಲ್ಲಿ ಸಸಿಗಳು ದೊರೆಯಲಿವೆ. 6x9  ಅಳತೆಯಲ್ಲಿರುವ ಒಂದು ಸಸಿಗೆ ₹3 , 8x 1 ಅಳತೆಯಲ್ಲಿರುವ ಒಂದು ಸಸಿಗೆ ₹6  ಬೆಲೆ ನಿಗದಿ ಮಾಡಲಾಗಿದೆ. 

‘ಬೆಲೆ ಬಾಳುವ ಗಿಡಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ರೈತರು ತಮ್ಮ ಕೃಷಿ ಜಮೀನುಗಳ ಖಾಲಿ ಜಾಗದಲ್ಲಿ ನೆಟ್ಟು ಪೋಷಿಸಿದರೆ, ಭವಿಷ್ಯದಲ್ಲಿ ಅವರಿಗೆ ಉತ್ತಮ ಆದಾಯವನ್ನೂ ತಂದುಕೊಡಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಪ್ರೋತ್ಸಾಹ ಧನ: ರೈತರು ಜಮೀನಿನ ಪಹಣಿ, ಆಧಾರ್ ಕಾರ್ಡ್ ಪ್ರತಿ ಹಾಗೂ ಎರಡು ಭಾವಚಿತ್ರ ಮತ್ತು ಇಲಾಖೆ ನಿಗದಿಪಡಿಸಿರುವ ದರವನ್ನು ಪಾವತಿಸಿ ಸಸಿಗಳನ್ನು ಪಡೆದು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. ರೈತರು ತಾವು ಪಡೆದ ಸಸಿಗಳನ್ನು ಮೂರು ವರ್ಷಗಳ ಕಾಲ ಜತನದಿಂದ ಕಾಪಾಡಿಕೊಂಡರೆ ಇಲಾಖೆ ವತಿಯಿಂದ ಮೂರು ವರ್ಷದ ಅವಧಿಗೆ (ಮೊದಲ ವರ್ಷ ₹35, ಎರಡನೇ ವರ್ಷ ₹40, ಮೂರನೇ ವರ್ಷ ₹50) ಪ್ರತಿ ಸಸಿಗೆ ₹125ರಂತೆ ಪ್ರೋತ್ಸಾಹ ಧನ ಸಿಗುತ್ತದೆ.

ಶಾಲಾ ಕಾಲೇಜುಗಳಿಗೂ ಸಸಿ: ಕಾಡು ಬೆಳೆಸಲು ಪ್ರೋತ್ಸಾಹ ನೀಡುವ ಭಾಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಆಡಳಿತ ಮಂಡಳಿಯವರಿಗೂ ಗಿಡಗಳನ್ನು ನೀಡಲು ಇಲಾಖೆ ಸಿದ್ಧತೆ ನಡೆಸಿದೆ. ಶಾಲಾ ಕಾಲೇಜಿನವರು ಶಾಲೆಯಿಂದ ಒಂದು ಪತ್ರ ನೀಡಿ ಉಚಿತವಾಗಿ ಸಸಿಗಳನ್ನು ಪಡೆಯಬಹುದು. 

ಶಾಲೆ, ಸರ್ಕಾರಿ- ಜಾಗಗಳಲ್ಲಿ ನೆಡುವುದಕ್ಕಾಗಿಯೇ ಹೊಂಗೆ, ನೇರಳೆ, ಅಂಟುವಾಳ, ಅಶೋಕ, ಹೊಳೆಮತ್ತಿ ಮುಂತಾದ ಸಸಿಗಳನ್ನು ಬೆಳೆಸಲಾಗಿದೆ.

‘ವರ್ಷದಿಂದ ವರ್ಷಕ್ಕೆ ತಾಪಮಾನ ಪ್ರಮಾಣ ಹೆಚ್ಚಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರು ಗಮನ ವಹಿಸಿ ಗಿಡಗಳನ್ನು ಹೇರಳವಾಗಿ ಬೆಳೆಸಬೇಕು, ಇದರಿಂದ ಸಹಜವಾಗಿಯೇ ಆಮ್ಲಜನಕದ ಪ್ರಮಾಣವೂ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಕಡಿಮೆಯಾಗಿ, ಮಳೆ ಪ್ರಮಾಣ ಹೆಚ್ಚಾಗಿ, ಬರಗಾಲದಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಮಲೆಮಹದೇಶ್ವರ ವನ್ಯಧಾಮ ಹನೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ಪಾಟೀಲ ‘ಪ್ರಜಾವಾಣಿ’ ಗೆ ತಿಳಿಸಿದರು.

ಸಸಿ ಬೆಳೆಸಲು ವರ್ಷದ ಶ್ರಮ

ನರ್ಸರಿಗಳಲ್ಲಿ ಸಸಿಗಳನ್ನು ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ವರ್ಷದಿಂದ ಶ್ರಮ ಹಾಕುತ್ತಾರೆ.  ಮೊದಲು ಗೊಬ್ಬರ ಮರಳು ಮತ್ತು ಕೆಂಪು ಮಣ್ಣನ್ನು ಬಹಳ ಎಚ್ಚರಿಕೆಯಿಂದ ಸಂಯೋಜನೆ ಮಾಡಿ ಫಲವತ್ತಾದ ಮಣ್ಣನ್ನು ತಯಾರಿಸಿ ನಂತರ ಬೀಜಗಳನ್ನು ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್‌ ನಡುವೆ 46 ಇಂಚಿನ ಚೀಲಗಳಲ್ಲಿ ಹಾಕಿ ಅವುಗಳು ಮೊಳಕೆಯೊಡೆದು ಅಲ್ಪ ಬೆಳೆದ ನಂತರ ಜೂನ್ ತಿಂಗಳಲ್ಲಿ ಅವುಗಳನ್ನು ದೊಡ್ಡ ಚೀಲಗಳಲ್ಲಿ ಸ್ಥಳಾಂತರಿಸಲಾಗುತ್ತದೆ. ಹೀಗೆ ನಿರಂತರವಾಗಿ ಒಂದು ವರ್ಷ ಶ್ರಮಪಟ್ಟ ನಂತರ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.