ಚಾಮರಾಜನಗರ: ಕಾಡಿನೊಳಗೆ ಅಕ್ರಮ ಸಂಗ್ರಹ, ಕಳ್ಳಸಾಗಣೆ ಮತ್ತು ಕಾಳಸಂತೆಯಲ್ಲಿನ ಮಾರಾಟದಿಂದ ಅಳಿವಿನಂಚಿಗೆ ತಲುಪಿರುವ ಅಪರೂಪದ ಸಸ್ಯ ಮಾಗಳಿ ಬೇರಿನ ಕೃಷಿಗೆ ಪ್ರೋತ್ಸಾಹ ನೀಡುವ ಪ್ರಾಯೋಗಿಕ ಯೋಜನೆಯನ್ನು ಅರಣ್ಯ ಇಲಾಖೆ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮ ವ್ಯಾಪ್ತಿಯಲ್ಲಿ ಜಾರಿಗೆ ತಂದಿದೆ.
ವನ್ಯಧಾಮದ ವ್ಯಾಪ್ತಿಯ ರೈತರಿಗೆ ಇಲಾಖೆಯೇ ಗಿಡವನ್ನು ಉಚಿತವಾಗಿ ಪೂರೈಸಿ 12 ಎಕರೆ ಪ್ರದೇಶದಲ್ಲಿ ಬೆಳೆಯುವಂತೆ ಮಾಡಿದೆ. ‘ರಾಜ್ಯದಲ್ಲಿ ಇಲಾಖೆ ವತಿಯಿಂದ ಇಂತಹ ಪ್ರಯತ್ನ ಬೇರೆಲ್ಲೂ ಆಗಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಜೀವ ವೈವಿಧ್ಯ ಮಂಡಳಿ, ಹನೂರು ಲ್ಯಾಂಪ್ಸ್ ಸೊಸೈಟಿಯ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಚಾಮರಾಜನಗರದ ದೀನಬಂಧು ಆಶ್ರಮ, ಬಿಳಿಗಿರಿರಂಗನಬೆಟ್ಟದ ಸಸ್ಯ ತಜ್ಞ ರಾಮೇಗೌಡ ಅವರ ಬಳಿಯಿಂದ ಸಂಗ್ರಹಿಸಿದ ಗಿಡಗಳು ಹಾಗೂ ಇಲಾಖೆಯೇ ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ರೈತರಿಗೆ ಪೂರೈಸಲಾಗಿದೆ.
ಹೂಗ್ಯಂ ವಲಯದಲ್ಲಿ 11 ಎಕರೆ ಮತ್ತು ಪಿ.ಜಿ.ಪಾಳ್ಯ ವಲಯದ ಒಂದು ಎಕರೆ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿದೆ. ಮೂರು ತಿಂಗಳ ಹಿಂದೆ ನಾಟಿ ಮಾಡಲಾಗಿದ್ದು, ಗಿಡಗಳು ಚೆನ್ನಾಗಿ ಬಂದಿವೆ. ಮೂರು ವರ್ಷಗಳಲ್ಲಿ ಕಟಾವಿಗೆ ಬರಲಿದೆ.
ಅಳಿವಿನಂಚಿನ ಸಸ್ಯ: ಔಷಧೀಯ ಸಸ್ಯವಾಗಿರುವ ಮಾಗಳಿ ಬೇರು (ಮಾಕಳಿ ಬೇರು ಎಂದೂ ಕರೆಯುತ್ತಾರೆ) ಅಳಿವಿನಂಚಿನಲ್ಲಿದೆ. ನಗರ ಪ್ರದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಬಳ್ಳಿಯಾಕಾರದಲ್ಲಿ ಬೆಳೆಯುವ ಈ ಸಸ್ಯ ಮರ, ಬಂಡೆಯ ಬಿರುಕುಗಳಲ್ಲಿ ಆಶ್ರಯ ಪಡೆದು 10 ಮೀ. ಎತ್ತರದವರೆಗೂ ಬೆಳೆಯುತ್ತದೆ. ಬೇರನ್ನು ಜ್ವರ, ಕೆಮ್ಮು, ಶೀತಕ್ಕೆ ಔಷಧವನ್ನಾಗಿ ಬಳಸಲಾಗುತ್ತದೆ. ಪಾನೀಯ, ಉಪ್ಪಿನಕಾಯಿ ತಯಾರಿಕೆಯಲ್ಲೂ ಬಳಸಲಾಗುತ್ತದೆ. ಉಪ್ಪಿನಕಾಯಿ ಹೆಚ್ಚು ಪ್ರಸಿದ್ಧಿ.
ಕಡಿವಾಣದ ಉದ್ದೇಶ:
ಬೇರನ್ನು ಜಮೀನು, ಮನೆಯ ಹಿತ್ತಿನಲ್ಲಿ ಬೆಳೆಯಬಹುದು. ಮುಕ್ತ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲವಾದ್ದರಿಂದ ಅಕ್ರಮ ಸಂಗ್ರಹ, ಮಾರಾಟ ನಡೆಯುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಕೆಜಿ ಒಣ ಮಾಗಳಿ ಬೇರಿಗೆ ₹600ರಿಂದ ₹700ರವರೆಗೂ ಬೆಲೆ ಇದೆ.
ರೈತರಿಗೆ ಉತ್ತಮ ಬೆಲೆಯೂ ಸಿಗುತ್ತದೆ. ಸಾಮಾನ್ಯ ಮಾರುಕಟ್ಟೆಯಲ್ಲೂ ಸಿಗುವಂತಾಗುತ್ತದೆ. ಅರಣ್ಯದಲ್ಲಿ ಮಾಗಳಿ ಬೇರು ಉಳಿಯುತ್ತದೆಂಬ ಉದ್ದೇಶದಿಂದ ಇಲಾಖೆ ಪ್ರಾಯೋಗಿಕವಾಗಿ ಯೋಜನೆ ಕೈಗೆತ್ತಿಕೊಂಡಿದೆ.
‘ಬಳ್ಳಾರಿಯಲ್ಲಿ ಖಾಸಗಿಯವರು ಬೇರನ್ನು ಭಾರಿ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ನಮ್ಮ ಜಿಲ್ಲೆಯ ದೀನಬಂಧು ಸಂಸ್ಥೆಯೂ ಬೆಳೆಯುತ್ತಿದೆ. ರೈತರನ್ನು ಎರಡೂ ಕಡೆಗೆ ಕರೆದೊಯ್ದು ತೋರಿಸಿದ್ದೆವು’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರೈತರು ಬಾಳೆ ಹಾಗೂ ಇತರ ಬೆಳೆ ನಡುವೆ ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಮೂರು ವರ್ಷಗಳಲ್ಲಿ ಕಟಾವಿಗೆ ಬರಲಿದೆ. ಬೇರು ಸಾಗಣೆಗೆ ಅನುಮತಿ ಪಡೆಯಬೇಕು’ ಎಂದು ಹೂಗ್ಯಂ ವಲಯ ಅರಣ್ಯಾಧಿಕಾರಿ ಗಿರಿಧರ್ ಜಿ.ಕೆ. ಮಾಹಿತಿ ನೀಡಿದರು.
ಯೋಜನೆ ಯಶಸ್ವಿಯಾದರೆ ಕಾಡಂಚಿನ ಪ್ರದೇಶ ರೈತರಿಗೂ ಅನುಕೂಲವಾಗುತ್ತದೆ. ಅರಣ್ಯದಲ್ಲಿರುವ ಮಾಗಳಿ ಬೇರು ಉಳಿಯುತ್ತವೆ.
-ಜಿ.ಸಂತೋಷ್‌ಕುಮಾರ್ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್
ಅರಣ್ಯ ಇಲಾಖೆಯ ಉತ್ತಮ ಯೋಜನೆ ಇದು. ಜನರು ಕೂಡ ತಮ್ಮ ಹಿತ್ತಲಿನಲ್ಲಿ ಬೆಳೆಸಬಹುದು.
-ಪ್ರೊ.ಜಿ.ಎಸ್.ಜಯದೇವ ದೀನ ಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.