ಹನೂರು: ಮಲೆಮಹದೇಶ್ವರ ವನ್ಯಧಾಮದ ಪೊನ್ನಾಚಿ ಗ್ರಾಮದ ಸುತ್ತಮುತ್ತ ಹಲವು ತಿಂಗಳುಗಳಿಂದ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕೊನೆಗೂ ಮನಸ್ಸು ಮಾಡಿದೆ. ಸೆರೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿದೆ.
ಆನೆ ಸೆರೆ ಹಿಡಿಯಲು ಜೂನ್ 26ರಂದೇ ಪಿಸಿಸಿಎಫ್ ಅವರು ಅನುಮತಿ ನೀಡಿದ್ದರು. ಆದರೆ, ಇಲಾಖೆ ವಿಳಂಬ ಮಾಡಿತ್ತು. ಇದಕ್ಕೆ ಜನರಿಂದ ಆಕ್ರೋಶವೂ ವ್ಯಕ್ತವಾಗಿತ್ತು.
ಇದೇ 9ಕ್ಕೆ ಕಾರ್ಯಾಚರಣೆ ಆರಂಭವಾಗಲಿದೆ. ಮೊದಲ ದಿನ ಆನೆ ಸಿಗದಿದ್ದರೆ, ಮತ್ತೆರಡು ದಿನ (10, 11) ಕಾರ್ಯಾಚರಣೆ ಮುಂದುವರಿಯಲಿದೆ. ಇದಕ್ಕಾಗಿ ನಾಗರಹೊಳೆ ಅಭಯಾರಣ್ಯದಿಂದ ಐದು ಆನೆಗಳನ್ನು ಇಲಾಖೆ ಕರೆತರಲು ಸಿದ್ಧತೆ ನಡೆಸಿದ್ದು, ಒಂಟಿ ಆನೆ ನೀಡಿದ ಹಾವಳಿ ಕಂಡು ಬಂದ ಪ್ರದೇಶಗಳಲ್ಲಿ ಇಲಾಖೆ ಆನೆಯ ಸೆರೆ ಹಿಡಿಯಲು ಪ್ರಯತ್ನಿಸಲಿದೆ.
ಪೊನ್ನಾಚಿ ಸುತ್ತಮುತ್ತ ಇರುವ ಕಕ್ಕೆಹೊಲ, ಗೆರಟ್ಟಿ, ಮರೂರು, ರಾಮೇಗೌಡನಹಳ್ಳಿ, ದೊಡ್ಡಬೆಟ್ಟ, ಅಸ್ತೂರು, ಚಿಕ್ಕಮರೂರು, ಹಳೆ ಮರೂರು, ಜಯಮ್ಮನದೊಡ್ಡಿ ಮುಂತಾದ ಗ್ರಾಮಗಳಲ್ಲಿ ದೀರ್ಘ ಸಮಯದಿಂದ ಆನೆಯೊಂದು ಹಗಲು ರಾತ್ರಿಯೆನ್ನದೇ ಗ್ರಾಮಗಳಿಗೆ ನುಗ್ಗಿ ಜಮೀನಿನಲ್ಲಿರುವ ಫಸಲು ನಾಶಗೊಳಿಸುವುದರ ಜೊತೆಗೆ ಮನೆಗಳ ಬಳಿಯೂ ಬಂದು ಮನೆಯ ಗೇಟ್ ಹಾಗೂ ಮರಗಳನ್ನು ನೆಲಕ್ಕುರುಳಿಸುತ್ತಿದೆ.
ಒಂಟಿ ಆನೆಯ ಜೊತೆಗೆ ಇನ್ನೂ ಎರಡು ಆನೆಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ಮನೆಗಳ ಬಳಿಗೆ ಬರುತ್ತಿದ್ದ ಆನೆಗಳು ಮನೆ ಮುಂದಿದ್ದ ನೀರಿನ ಹೊಂಡಗಳ ಬಳಿ ಬಂದು ದಾಂಧಲೆ ಮಾಡಿ ಹೋಗುತ್ತಿದ್ದವು. ಪುಂಡ ಒಂಟಿ ಆನೆಯ ಉಪಟಳಕ್ಕೆ ಹೋಲಿಸಿದರೆ ಉಳಿದೆರಡು ಆನೆಗಳ ಹಾವಳಿ ಕಡಿಮೆ.
‘ಆನೆ ಜಮೀನಿಗೆ ಅಲ್ಲದೇ ಮನೆಗಳ ಬಳಿಗೂ ಬರುತ್ತಿದೆ. ರಾತ್ರಿ ವೇಳೆ ವೃದ್ಧರು, ಮಕ್ಕಳು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಮನೆಯ ಹೊರಗೆ ಅದು ಏನೆ ಮಾಡಿದರೂ ಯಾರು ಹೊರಗೆ ಬಾರದಂಥ ಪರಿಸ್ಥಿತಿಯಲ್ಲಿದ್ದೇವೆ’ ಎನ್ನುತ್ತಾರೆ ಗ್ರಾಮಸ್ಥರು.
ಕೃಷಿಯನ್ನೇ ಬಿಟ್ಟರು: ಗ್ರಾಮಗಳ ಸಮೀವಿರುವ ಜಮೀನುಗಳಿಗೆ ನಿರಂತರವಾಗಿ ಲಗ್ಗೆಯಿಡುತ್ತಿದ್ದ ಕಾಡಾನೆಗಳ ಹಾವಳಿಯಿಂದಾಗಿ ಬಹುತೇಕ ಕುಟುಂಬಗಳ ಕೃಷಿ ಮಾಡುವುದನ್ನೇ ನಿಲ್ಲಿಸಿವೆ. ಜಮೀನಿನಲ್ಲಿ ಯಾವುದೇ ಫಸಲು ಹಾಕಿದರೂ ಅದು ಆನೆಗಳ ಪಾಲಾಗುತ್ತಿದ್ದನ್ನು ಕಂಡು ಬೇಸೆತ್ತ ರೈತ ಕುಟುಂಬಗಳು ಕೃಷಿ ಮಾಡುವುದನ್ನೇ ಬಿಟ್ಟು ಕೂಲಿ ಕೆಲಸಕ್ಕಾಗಿ ಬೇರೆಡೆ ವಲಸೆ ಹೋಗುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಡಾನೆ ಸೆರೆ ಹಿಡಿಯಲು ಅನುಮತಿ ನೀಡುವಂತೆ ಪಿಸಿಸಿಎಫ್ ಅವರಿಗೆ ಮನವಿ ಮಾಡಲಾಗಿತ್ತು. ಸಮ್ಮತಿ ಸಿಕ್ಕಿದ್ದು ಕೂಡಲೇ ಕಾರ್ಯಾಚರಣೆ ಆರಂಭಿಲಾಗುವುದು.-ಎಂ ಮಾಲತಿಪ್ರಿಯಾ, ಪ್ರಭಾರ ಸಿಸಿಎಫ್ ಚಾಮರಾಜನಗರ ವೃತ್ತ
ಆನೆ ಸೆರೆಗೆ ಕಾರ್ಯಾಚರಣೆಗೆ ದಿನ ನಿಗದಿ ಮಾಡಲಾಗಿದೆ. ಒಂದೇ ದಿನಕ್ಕೆ ಆನೆ ಸಿಗದಿದ್ದರೆ ಮತ್ತೆ ಎರಡು ದಿನಗಳ ಕಾಲ ಮುಂದುವರಿಸಲಾಗುವುದು-ಜಿ ಸಂತೋಷ್ ಕುಮಾರ್ ಡಿಸಿಎಫ್ ಮಲೆಮಹದೇಶ್ವರ ವನ್ಯಧಾಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.