ADVERTISEMENT

ಬಂಡೀಪುರ | ರೆಸಾರ್ಟ್ ಕಟ್ಟಡ ತೆರವು: ಕ್ರಮಕ್ಕೆ ಸೂಚಿಸಿ ಪತ್ರ

ಸೂರ್ಯನಾರಾಯಣ ವಿ.
Published 7 ಸೆಪ್ಟೆಂಬರ್ 2023, 19:54 IST
Last Updated 7 ಸೆಪ್ಟೆಂಬರ್ 2023, 19:54 IST
ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದಲ್ಲಿ ರೆಸಾರ್ಟ್‌ ಕಟ್ಟಡಗಳು ಇರುವ ಪ್ರದೇಶ
ಗುಂಡ್ಲುಪೇಟೆ ತಾಲ್ಲೂಕಿನ ಬಾಚಹಳ್ಳಿ ಗ್ರಾಮದಲ್ಲಿ ರೆಸಾರ್ಟ್‌ ಕಟ್ಟಡಗಳು ಇರುವ ಪ್ರದೇಶ   

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ‍ಪ‍ರಿಸರ ಸೂಕ್ಷ್ಮ ವಲಯದ (ಇಎಸ್‌ಝಡ್‌) ವ್ಯಾಪ್ತಿಗೆ ಬರುವ ಬಾಚಹಳ್ಳಿಯಲ್ಲಿರುವ ಅಶ್ವಿನಿ ಆಯುರ್ವೇದಿಕ್‌ ಜಂಗಲ್‌ ರೆಸಾರ್ಟ್‌ನ ಕಟ್ಟಡಗಳನ್ನು ತೆರವುಗೊಳಿಸಿ, ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಜಾಗೃತ ಘಟಕದ ಪಿಸಿಸಿಎಫ್‌ ವಿಜಯ್‌ ರಂಜನ್‌ ಅವರು ಇಎಸ್‌ಝಡ್‌ನ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ಹಾಗೂ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. 

ಆಶಾ ಬಬಲಾನಿ ಎಂಬವರ ಮಾಲೀಕತ್ವದ ಈ ರೆಸಾರ್ಟ್‌ ಈಗ ಕಾರ್ಯಾಚರಿಸುತ್ತಿಲ್ಲ. ಆದರೆ, ಕಟ್ಟಡಗಳು ಈಗಲೂ ಇವೆ. ವಾಸದ ಉದ್ದೇಶಕ್ಕೆ ಅವುಗಳನ್ನು ಬಳಸಲು ಅನುಮತಿ ನೀಡುವಂತೆ ಆಶಾ ಅವರು 2019ರಲ್ಲಿ ಮೇಲ್ವಿಚಾರಣಾ ಸಮಿತಿಗೆ ಮನವಿ ಸಲ್ಲಿಸಿದ್ದರು. ಸಮಿತಿ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಬೆಳಗಾವಿಯ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ಅರಣ್ಯ ಇಲಾಖೆ, ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರಕ್ಕೆ ಈ ವರ್ಷದ ಮಾರ್ಚ್‌ 27ರಂದು ಪತ್ರ ಬರೆದಿದ್ದರು.

ಅವರ ಪತ್ರದ ಆಧಾರದಲ್ಲಿ ಅರಣ್ಯ ಇಲಾಖೆಯ ಜಾಗೃತ ಘಟಕವು ಮೈಸೂರಿನ ಜಾಗೃತ ವಿಭಾಗದ ಡಿಸಿಎಫ್‌ ಅವರಿಗೆ ತನಿಖೆ ನಡೆಸಲು ಸೂಚಿಸಿತ್ತು. ತನಿಖಾ ವರದಿಯನ್ನು ಜುಲೈ 7ರಂದು ಡಿಸಿಎಫ್‌ ಸಲ್ಲಿಸಿದ್ದರು. ಆಶಾ ಅವರು ಇಎಸ್‌ಝಡ್‌ ನಿಯಮಗಳನ್ನು ಉಲ್ಲಂಘಿಸಿದ್ದು, ಕಟ್ಟಡಗಳನ್ನು ತೆರವುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಅವರು ಹೇಳಿದ್ದರು.

ADVERTISEMENT

ಈ ವರದಿಯ ಅನ್ವಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್‌ ರಂಜನ್‌ ಆ.5ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಕಟ್ಟಡ ತೆರವಿಗೆ ಮತ್ತು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತು ಈ ಸಂಬಂಧ ವರದಿ ನೀಡುವಂತೆ ತಿಳಿಸಿದ್ದಾರೆ.

33 ಕಾಟೇಜು: ಆಶಾ ಬಬಲಾನಿ ಅವರು ಬಾಚಹಳ್ಳಿಯ ಸರ್ವೆ ನಂಬರ್‌ 497/1ರಲ್ಲಿ 3 ಎಕರೆ 32 ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕೆ 2009ರ ಸೆ.17ರಂದು ಭೂ ಪರಿವರ್ತನೆ ಮಾಡಿಸಿಕೊಂಡು ಅಲ್ಲಿ ಆಯುರ್ವೇದ ರೆಸಾರ್ಟ್‌ ನಿರ್ಮಿಸಿದ್ದರು. 33 ಕಾಟೇಜುಗಳನ್ನು ನಿರ್ಮಿಸಲಾಗಿತ್ತು.

‘ಪ್ರಾಣಿಗಳ ಓಡಾಟಕ್ಕೆ ತೊಂದರೆ’
‘ರೆಸಾರ್ಟ್‌ಗಳ ಕಾರ್ಯಾಚರಣೆ ಸ್ಥಗಿತಗೊಂಡಿದೆ. ಆದರೆ, ಕಟ್ಟಡ ಇನ್ನೂ ಇರುವುದರಿಂದ ಪ್ರಾಣಿಗಳ ಓಡಾಟಕ್ಕೆ ತೊಂದರೆಯಾಗುತ್ತದೆ. ಈ ‍ಪ್ರದೇಶವು ಆನೆ ಮತ್ತು ಹುಲಿ ಕಾರಿಡಾರ್‌ ಆಗಿದ್ದು, ಅತ್ಯಂತ ಮಹತ್ವದ್ದಾಗಿದೆ. ಇಂತಹ ಪ್ರದೇಶದಲ್ಲಿರುವ ಕಟ್ಟಡ ತೆರವುಗೊಳಿಸದಿದ್ದರೆ ವನ್ಯಜೀವಿ ಸಂರಕ್ಷಣೆಗೆ ಯಾವ ಅರ್ಥವೂ ಇರುವುದಿಲ್ಲ’ ಎಂದು ದೂರುದಾರ, ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಸರ ಸೂಕ್ಷ್ಮ ವಲಯದ ಅಧಿಸೂಚನೆ ಪ್ರಕಾರ, ಈ ವಲಯದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ.

ರೆಸಾರ್ಟ್‌ ನಡೆಸುತ್ತಿರುವುದರ ವಿರುದ್ಧ ಬಂಡೀಪುರ ಹುಲಿ ಯೋಜನೆ ನಿರ್ದೇಶಕರು ಬರೆದ ಪತ್ರದ ಅನುಸಾರ ಚಾಮರಾಜನಗರ ಜಿಲ್ಲಾಧಿಕಾರಿ 2011ರ ಆಗಸ್ಟ್‌ 26ರಂದು ಭೂಪರಿವರ್ತನೆ ಆದೇಶ ರದ್ದುಗೊಳಿಸಿದ್ದರು. 2012ರ ಏ.21ರಂದು ಗುಂಡ್ಲುಪೇಟೆ ತಹಶೀಲ್ದಾರ್‌ ಕಟ್ಟಡ ತೆರವಿಗೆ ನೋಟಿಸ್‌ ನೀಡಿದ್ದರು. ಇದನ್ನು ಆಶಾ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕ್ರಮ ಕೈಗೊಳ್ಳುವುದಕ್ಕೂ ಮೊದಲು ಅರ್ಜಿದಾರರಿಗೆ ನ್ಯಾಯಸಮ್ಮತ ಅವಕಾಶ ನೀಡುವಂತೆ ಹೈಕೋರ್ಟ್‌ ಸೂಚಿಸಿತ್ತು. ಆ ಬಳಿಕ ಆಶಾ ಅವರು ವಾಸದ ಉದ್ದೇಶಕ್ಕೆ ಕಟ್ಟಡ ಬಳಸಲು ಅವಕಾಶ ನೀಡುವಂತೆ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಗೆ ಮನವಿ ಮಾಡಿದ್ದರು.

ಚಾಮರಾಜನಗರ ಜಿಲ್ಲಾಧಿಕಾರಿಯು, ಈ ಹಿಂದೆ ಭೂಪರಿವರ್ತನೆ ಆದೇಶ ರದ್ದುಗೊಳಿಸಿ ಹೊರಡಿಸಿದ್ದ ಆದೇಶವನ್ನು 2021ರ ಜುಲೈ 16ರಂದು ವಾಪಸ್‌ ಪಡೆದಿದ್ದರು. ಇದೇ ಸಮಯದಲ್ಲಿ ಇಎಸ್‌ಝಡ್‌ ಮೇಲ್ವಿಚಾರಣಾ ಸಮಿತಿಯು ಆಶಾ ಅವರಿಗೆ ವಾಸದ ಉದ್ದೇಶಕ್ಕೆ ಕಟ್ಟಡಗಳನ್ನು ಬಳಸಲು ಅನುಮತಿ ನೀಡಿತ್ತು.

‘ಅನುಮತಿ ನೀಡುವ ಮೂಲಕ ಪರಿಸರ ಸೂಕ್ಷ್ವ ವಲಯ ಮೇಲ್ವಿಚಾರಣಾ ಸಮಿತಿಯು 1986ರ ಪರಿಸರ (ಸಂರಕ್ಷಣಾ) ಕಾಯ್ದೆ, 1972ರ ವನ್ಯಜೀವಿ ಕಾಯ್ದೆಯ ಬಫರ್‌ ವಲಯದ ನಿಯಮಗಳನ್ನು ಉಲ್ಲಂಘಿಸಿದೆ’ ಎಂದು ಗಿರಿಧರ ಕುಲಕರ್ಣಿ ದೂರಿದ್ದರು.

ಪ್ರತಿಕ್ರಿಯೆಗೆ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ಲಭ್ಯವಾಗಲಿಲ್ಲ.

.ಅರಣ್ಯ ಇಲಾಖೆಯ ತನಿಖಾ ತಂಡದ ಮುಂದೆ ನಾನೂ ವಿಚಾರಣೆಗೆ ಹಾಜರಾಗಿದ್ದೇನೆ. ನಿಯಮದಂತೆ ಎಲ್ಲ ಕಟ್ಟಡಗಳನ್ನೂ ಅಧಿಕಾರಿಗಳು ತೆರವುಗೊಳಿಸಬೇಕು.
ಗಿರಿಧರ ಕುಲಕರ್ಣಿ, ದೂರುದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.