ಗುಂಡ್ಲುಪೇಟೆ: ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ಶನಿವಾರ ಸಂಜೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ಮಾಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಇಲಾಖೆಯ ಸಫಾರಿಗೆ ತೆರಳಿದರು.
ಸಫಾರಿ ಸಮಯದಲ್ಲಿಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ಮಾಡಿ ಅಲ್ಲಿನ ಸಿಬ್ಬಂದಿಯೊಂದಿಗೆ ಆತ್ಮೀಯವಾಗಿ ಬೆರೆತರು. ಶಿಬಿರದಲ್ಲಿ ಏನು ಮಾಡುತ್ತಿರೀ? ಏನು ಸಮಸ್ಯೆ ಇದೆ? ಎಷ್ಟು ದಿನಗಳಿಗೊಮ್ಮೆ ಮನೆಗೆ ಹೋಗುತ್ತೀರಿ? ಎಷ್ಟು ಪ್ರಾಣಿಗಳನ್ನು ನೋಡಿದ್ದೀರಿ? ನಿಮಗೆ ಅಡುಗೆ ಯಾರು ಮಾಡುತ್ತಾರೆ? ಎಂಬ ಪ್ರಶ್ನೆಗಳನ್ನು ಕೇಳಿ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಸಫಾರಿ ಸಮಯದಲ್ಲಿ ಕಡವನಕಟ್ಟೆ ಬಳಿ ಹುಲಿಯೊಂದು ನೀರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದನ್ನು ಕಂಡು ಖುಷಿಪಟ್ಟರು. ಗಾರೆಪಾಲದ ಬಳಿ ಮತ್ತೊಂದು ಹುಲಿ ಅವರಿಗೆ ದರ್ಶನ ನೀಡಿತು.
ಮರಳಲ್ಲ ಬಳಿ ಕಳ್ಳಬೇಟೆ ಶಿಬಿರದ ಬಳಿ ಆನೆಗಳ ಗುಂಪುಗಳನ್ನು ಕಂಡು, ಆನೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಅವರಿಂದ ಮಾಹಿತಿ ಪಡೆದುಕೊಂಡರು.
ಕಾಡಿನಲ್ಲಿ ಪ್ರಾಣಿಗಳಿಗೆ ನೀರಿನ ಸಮಸ್ಯೆ ಇದೆಯೇ? ಹೇಗೆ ನಿರ್ವಹಣೆ ಮಾಡುತ್ತಿದ್ದೀರಾ ಎಂದು ಸಚಿವರು ಕೇಳಿದಾಗ, ‘ಹುಲಿ ಸಂರಕ್ಷಿತ ಪ್ರದೇಶದಲ್ಲಿ 43 ಸೋಲಾರ್ ಕೊಳವೆಬಾವಿಗಳಿದ್ದು ಕೆರೆಗೆ ನೀರು ತುಂಬಿಸಲಾಗುತ್ತಿದೆ. ಜೊತೆಗೆ ಕಳೆದ ವರ್ಷದ ಮಳೆಯಿಂದ ತುಂಬಿದ ಕೆರೆಯಲ್ಲಿ ನೀರಿದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.
ಕೆಲ ಕಳ್ಳಬೇಟೆ ತಡೆ ಶಿಬಿರಗಳು ಶಿಥಿಲವಾಗಿವೆ. ಅವುಗಳನ್ನು ಸರಿಪಡಿಸಬೇಕಾದ ಅಗತ್ಯವಿದೆ ಎಂಬುದನ್ನು ಗಮನಕ್ಕೆ ತಂದಾಗ, ಪ್ರತಿಕ್ರಿಯಿಸಿದ ಸಚಿವರು, ‘ಎಷ್ಟು ತೀವ್ರವಾಗಿ ಹದಗೆಟ್ಟಿದೆ ಎಂಬುದನ್ನು ಪಟ್ಟಿ ಮಾಡಿ, ಎಷ್ಟು ಸಿಬ್ಬಂದಿ ಕೊರತೆ ಇದೆ’ ಎಂದು ಕೇಳಿದರು.
ಕಚೇರಿಯಲ್ಲಿ ಹುಲಿ ಯೋಜನೆ ನಿರ್ದೇಶಕ ಎಸ್.ಆರ್.ನಟೇಶ್ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿದರು.
‘ಕಾಡಿಗೆ ಬೆಂಕಿ ಬೀಳದಂತೆ ಎಚ್ಚರ ವಹಿಸಿ. ಪ್ರಾಣಿಗಳಿಗೆ ನೀರಿನ ತೊಂದರೆ ಆಗಬಾರದು. ಇಷ್ಟು ಕಡಿಮೆ ಸಮಯದಲ್ಲಿ ಎಲ್ಲ ಪ್ರಾಣಿಗಳನ್ನು ನೋಡಿದಂತಾಯಿತು’ ಎಂದುಅರವಿಂದ ಲಿಂಬಾವಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಎಪಿಸಿಸಿಎಫ್ ಜಗತ್ ರಾಂ, ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಾಲಾಲ್, ಎಸಿಎಫ್ ರವಿಕುಮಾರ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.