ಚಾಮರಾಜನಗರ: ಸ್ವಾತಂತ್ರ್ಯ ದಿನಾಚರಣೆಯ ದಿನ ಅನ್ನದಾತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಮ್ಮಿಕೊಳ್ಳಲಾಗಿದ್ದ ರೈತರ ಟ್ರ್ಯಾಕ್ಟರ್ ರ‍್ಯಾಲಿಗೆ ಅವಕಾಶ ನೀಡದೆ ರೈತರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ರೈತ ಮುಖಂಡರು ಪೊಲೀಸರ ಕ್ರಮವನ್ನು ಒಕ್ಕೊರಲಿನಿಂದ ಖಂಡಿಸಿ ಪ್ರತಿರೋಧ ವ್ಯಕ್ತಪಡಿಸಲು ನಿರ್ಧರಿಸಿದರು. ಬಳಿಕ ಎಸ್‌ಪಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ರೈತರ ಹೋರಾಟವನ್ನು ಹತ್ತಿಕ್ಕಲು ಮುಂದಾದ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ ಎಂದು ಘೋಷಣೆ ಕೂಗಿದರು.
ರಾಜ್ಯದ ಎಲ್ಲೆಡೆ ರೈತರು ಟ್ರ್ಯಾಕ್ಟರ್ ರ‍್ಯಾಲಿಗೆ ಮಾಡಲು ಅವಕಾಶ ಮಾಡಿಕೊಡಲಾಗಿದ್ದರೂ ಚಾಮರಾಜನಗರ ಜಿಲ್ಲೆಯಲ್ಲಿ ಮಾತ್ರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವುದರ ಜತೆಗೆ ಬಂಧಿಸಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.
ಬಳಿಕ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಸ್‌ಪಿ ಡಾ.ಬಿ.ಟಿ.ಕವಿತಾ ಅಂದು ಸ್ವಾತಂತ್ರ್ಯ ದಿನಾಚರಣೆ ಇದ್ದ ಕಾರಣ ಪ್ರತಿಭಟನೆ ಮೊಟಕುಗೊಳಿಸಬೇಕಾಯಿತು. ಮುಂದೆ ರೈತರ ಪ್ರತಿಭಟನೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಮೈಸೂರು ಜಿಲ್ಲೆ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಚಾಮರಾಜನಗರ ಜಿಲ್ಲಾ ಕಾರ್ಯಾಧ್ಯಕ್ಷ ಉಡಿಗಾಲ ರೇವಣ್ಣ, ಉಪಾಧ್ಯಕ್ಷ ಮೂಡಲಪುರ ಪಟೇಲ್, ಶಿವಮೂರ್ತಿ, ಚಾಮರಾಜನಗರ ಜಿಲ್ಲಾ ಕಾರ್ಯದರ್ಶಿ ಎಚ್ ಮೂಕಳ್ಳಿ ಮಹದೇವಸ್ವಾಮಿ, ತಾಲ್ಲೂಕು ಅಧ್ಯಕ್ಷ ನಂಜಪುರ ಸತೀಶ್, ಉಪಾಧ್ಯಕ್ಷ ಹೆಗ್ಗೋಟಾರ ಶಿವಸ್ವಾಮಿ, ಮೂಕಳ್ಳಿ ಶಿವಕುಮಾರ್, ರಾಜು ಮಾರ್ಬಳ್ಳಿ, ನೀಲಕಂಠಪ್ಪ. ಸಿದ್ದರಾಮ, ಉಡಿಗಾಲ ಗುರುಪ್ರಸಾದ್, ಹಿಂದುವಾಡಿ ಮಾದೇಶ್, ಮಂಜು, ಹೆಗ್ಗಡಹಳ್ಳಿ ಮಾದೇವಪ್ಪ, ಚಾಮರಾಜನಗರ ಅಮರ್ ಖಾನ್, ಬಡಗಲಪುರ ಹರ್ಷ, ಬಸವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.