ADVERTISEMENT

ಚಾಮರಾಜನಗರ: ಅಂಗನವಾಡಿ ಚಾವಣಿ ಗಾರೆ ಬಿದ್ದು ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 16:11 IST
Last Updated 8 ಫೆಬ್ರುವರಿ 2024, 16:11 IST
ಚಾಮರಾಜನಗರ ತಾಲ್ಲೂಕಿನ ಬಂಡಿಗೆರೆ ಗ್ರಾಮದ 2ನೇ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಗಾರೆ ಬಿದ್ದಿರುವುದು
ಚಾಮರಾಜನಗರ ತಾಲ್ಲೂಕಿನ ಬಂಡಿಗೆರೆ ಗ್ರಾಮದ 2ನೇ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಗಾರೆ ಬಿದ್ದಿರುವುದು   

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಸಮೀಪದ ಬಂಡಿಗೆರೆ ಗ್ರಾಮದ 2ನೇ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಕಟ್ಟಡದ ಮೇಲ್ಚಾವಣಿ ಗಾರೆ ಬಿದ್ದು ನಾಲ್ಕು ಮಕ್ಕಳಿಗೆ ಸಣ್ಣ ಪುಟ್ಟ ಗಾಯವಾಗಿದೆ.

ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಗಹಿಸಲಾಗಿದೆ.  

ಮಕ್ಕಳು ಎಂದಿನಂತೆ ಗುರುವಾರ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದರು. ಬೆಳಿಗ್ಗೆ 10.30ಕ್ಕೆ ಮಕ್ಕಳು ಹಾಲು ಕುಡಿಯುತ್ತಿದ್ದ ಸಂದರ್ಭದಲ್ಲಿ ಕಟ್ಟಡದ ಮೇಲ್ಚಾವಣಿಯ ಮಧ್ಯಭಾಗದಿಂದ ಗಾರೆ ಕಳಚಿದೆ. ಈ ಸಂದರ್ಭದಲ್ಲಿ ಅಶೋಕ (5), ಜ್ಯೋತಿ (5), ಅರ್ಜುನ (6) ಮತ್ತು ಲಂಕೇಶ (5) ಎಂಬ  ಮಕ್ಕಳ ಕಾಲಿನ ಮೇಲೆ ಗಾರೆ ಬಿದ್ದಿದೆ. ಹೀಗಾಗಿ ತರಚಿದ ಗಾಯವಾಗಿದೆ. ತಕ್ಷಣವೇ ಅಂಗನವಾಡಿ ಕಾರ್ಯಕರ್ತರು ಹರದನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು. 

ADVERTISEMENT

‘ವಿಷಯ ಗೊತ್ತಾಗುತ್ತಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ಕಟ್ಟಡವನ್ನು ತಕ್ಷಣವೇ ದುರಸ್ತಿ ಮಾಡಲು ಕ್ರಮವಹಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸೂಚನೆ ಕೊಟ್ಟಿದ್ದಾರೆ. ತಕ್ಷಣವೇ ದುರಸ್ತಿ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.